ಗೋವಿನಕೋವಿ (ನ್ಯಾಮತಿ): ಗ್ರಾಮದ ಹಾಲಸ್ವಾಮೀಜಿ ಮಠದ ಪೀಠಾಧ್ಯಕ್ಷರಾದ ಸದ್ಗುರು ಶಿವಯೋಗಿ ವಿಶ್ವರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ಅವರು ಲೋಕಕಲ್ಯಾಣಾರ್ಥವಾಗಿ ನ.1ರಿಂದ ನ.23ರವರೆಗೆ 21 ದಿನಗಳ ಕಾಲ ಮೌನಾನುಷ್ಠಾನ ಲಿಂಗಾ ಪೂಜೆ ಕೈಗೊಳ್ಳಲು ತೀರ್ಮಾನಿಸಿದ್ದಾರೆ.
ಈ ಹಿಂದೆ ಗುರುಗಳು ಮೌನಾನುಷ್ಠಾನ ಪೂಜೆ ಮಾಡುತ್ತಿದ್ದರು. ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ. ತಮ್ಮ ಪಟ್ಟಾಧಿಕಾರವಾಗಿ ವರ್ಷ ಪೂರೈಸುವುದರೊಳಗೆ ಮೌನಾನುಷ್ಠಾನ ಕೈಗೊಳ್ಳಲು ಹಿರೇಕಲ್ಮಠ, ವೀರಾಪುರ ಮತ್ತು ಕಡೆನಂದಿಹಳ್ಳಿ ಶ್ರೀಗಳು ಸೂಚಿಸಿದ್ದಾರೆ ಎಂದು ಮಠದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ತಿಳಿಸಿದರು.
ನ.1ರಂದು ಹಿರೇಕಲ್ಮಠ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಮೌನಾನುಷ್ಠಾನ ಪೂಜೆ ಆರಂಭಿಸಲಾಗುವುದು. ನ.12ರಂದು ಜಂಗಮ ವಟುಗಳಿಗೆ ಮತ್ತು ಆಸಕ್ತಿಯುಳ್ಳ ಭಕ್ತರಿಗೆ ಲಿಂಗದೀಕ್ಷೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನ.22ರಂದು ಹೋಮ, ಹವನಾದಿ ಪೂಜೆಗಳೊಂದಿಗೆ ಮೌನಾನುಷ್ಠಾನ ಸಮಾಪ್ತಿ ಮಾಡಲಾಗುವುದು. ನ.23ರಂದು ನಾಡಿನ ವಿವಿಧ ಮಠಗಳ ಸ್ವಾಮೀಜಿಗಳ ನೇತೃತ್ವದಲ್ಲಿ ಧಾರ್ಮಿಕ ಸಭೆ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ದೇವಸ್ಥಾನ ಸಮಿತಿ ಮತ್ತು ಭಕ್ತರು ತನು, ಮನ, ಧನ ಸಹಾಯ ನೀಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಪೂರ್ವಭಾವಿ ಸಭೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ಎಚ್. ಫಾಲಾಕ್ಷಪ್ಪಗೌಡ, ಅಧ್ಯಕ್ಷ ಎಸ್.ಇ.ರಮೇಶ, ಕಾರ್ಯದರ್ಶಿ ವಿ.ಎಚ್.ರುದ್ರೇಶ, ಹೊನ್ನಾಳಿ ತಾಲ್ಲೂಕು ಬೇಡ ಜಂಗಮ ಸಮುದಾಯದ ಅಧ್ಯಕ್ಷ ಬೈರನಹಳ್ಳಿ ಪಂಚಯ್ಯ, ನ್ಯಾಮತಿ ತಾಲ್ಲೂಕು ಅಧ್ಯಕ್ಷ ರೇವಣಸಿದ್ದಯ್ಯ, ಮಠದ ವಕ್ತಾರರಾದ ಶಿವಮೂರ್ತಿ, ಬಿ.ಗಂಗಾಧರಪ್ಪ, ಬಿ.ರಾಜಪ್ಪ, ಎ.ಸತೀಶ, ಬಿ.ವಿ.ರಮೇಶ, ಮಧು, ಚನ್ನೇಶಯ್ಯ, ವೀರೇಂದ್ರಸ್ವಾಮಿ, ಪತ್ರಕರ್ತರಾದ ಡಿ.ಎಂ.ಹಾಲಾರಾಧ್ಯ, ಹೊಳೆಮಠ ಸಿದ್ದಲಿಂಗಶಾಸ್ತ್ರಿ, ಕುಳಗಟ್ಟೆ ರುದ್ರಸ್ವಾಮಿ, ಬೆನಕನಹಳ್ಳಿ ಬಸವರಾಜಸ್ವಾಮಿ, ಎಂ.ಸಿ.ಸೂರಗೊಂಡನಕೊಪ್ಪ ಮಲ್ಲಿಕಾರ್ಜುನಯ್ಯ, ಚಿನ್ನಿಕಟ್ಟೆ ಎಂ.ಎಸ್. ಹಾಲಸ್ವಾಮಿ, ಕ್ಯಾಸಿನಕೆರೆ ರುದ್ರೇಶ ಮತ್ತು ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.