ADVERTISEMENT

ಹಾಲ ಸ್ವಾಮೀಜಿ ಸೇವೆ ಅವಿಸ್ಮರಣೀಯ: ಚನ್ನಮಲ್ಲಿಕಾರ್ಜನ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 14:10 IST
Last Updated 20 ಸೆಪ್ಟೆಂಬರ್ 2020, 14:10 IST
ಸಾಸ್ವೆಹಳ್ಳಿ ಸಮೀಪದ ರಾಂಪುರದಲ್ಲಿ ಲಿಂ. ಹಾಲ ಸ್ವಾಮೀಜಿ ಕರ್ತೃಗದ್ದುಗೆ ನಿರ್ಮಾಣ ಕುರಿತ ಸಭೆಯಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿದರು. ಹೊಟ್ಯಾಪುರ ಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಇದ್ದರು.
ಸಾಸ್ವೆಹಳ್ಳಿ ಸಮೀಪದ ರಾಂಪುರದಲ್ಲಿ ಲಿಂ. ಹಾಲ ಸ್ವಾಮೀಜಿ ಕರ್ತೃಗದ್ದುಗೆ ನಿರ್ಮಾಣ ಕುರಿತ ಸಭೆಯಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿದರು. ಹೊಟ್ಯಾಪುರ ಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಇದ್ದರು.   

ಸಾಸ್ವೆಹಳ್ಳಿ: ‘ಭಕ್ತರೇ ನಮ್ಮ ಶಕ್ತಿ ಎಂದು ನಂಬಿ ತಮ್ಮ ಜೀವಿತಾವಧಿಯನ್ನು ಭಕ್ತರಿಗೆ ಮೀಸಲಿಟ್ಟ ಮಹಾನ್ ಚೇತನ ಲಿಂ. ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ. ಜಾತ್ಯತೀತವಾಗಿ ಭಕ್ತರನ್ನು ಗಳಿಸಿದ್ದಾರೆ. ಅವರ ಸೇವೆ ಅವಿಸ್ಮರಣೀಯ’ ಎಂದು ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ರಾಂಪುರದ ಹಾಲಸ್ವಾಮಿ ಮಠದ ಸಮುದಾಯ ಭವನದಲ್ಲಿ ಲಿಂ. ಶ್ರೀಗಳ ಕರ್ತೃಗದ್ದುಗೆ ನಿರ್ಮಾಣ ಕುರಿತ ಸಭೆಯಲ್ಲಿ ಮಾತನಾಡಿದರು.

‘ಹಾಲ ಸ್ವಾಮೀಜಿ ಭಕ್ತರಿಗೆ ಆಯುರ್ವೇದ ಚಿಕಿತ್ಸೆ ನೀಡುತ್ತಿದ್ದರು. 75 ವರ್ಷ ಮಾಡಬಹುದಾದ ಕೆಲಸವನ್ನು ಕೇವಲ 25 ವರ್ಷಗಳಲ್ಲಿಯೇ ಪೂರೈಸಿದ್ದರು. ಭಕ್ತರು ಮನಸ್ಸು ಮಾಡಿದರೆ ಅವರ ಕರ್ತೃಗದ್ದುಗೆ ಉತ್ತಮವಾಗಿ ನಿರ್ಮಾಣವಾಗಲಿದೆ’ ಎಂದರು.

ADVERTISEMENT

‘ಸ್ವಾಮೀಜಿ ಕಾರ್ಯಕ್ಷೇತ್ರ ವಿಸ್ತಾರವಾಗಿದೆ. ಹಾಗಾಗಿಯೇ ಅವರು ಈ ಭಾಗದ ನಡೆದಾಡುವ ದೇವರು ಎಂದು ಖ್ಯಾತರಾಗಿದ್ದರು’ ಎಂದು ಹೊಟ್ಯಾಪುರದ ಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

‘ಶ್ರೀಗಳ ಕನಸು ರಾಂಪುರದಿಂದ ಗೋವಿನಕೋವಿಗೆ ಸೇತುವೆ ನಿರ್ಮಾಣ. ಅವರು ಒತ್ತಾಯದ ಮೇಲೆ ₹ 160 ಕೋಟಿ ಅನುದಾನ ಬಿಡುಗಡೆ ಮಾಡಿಸಲಾಗಿತ್ತು. ಸರ್ಕಾರ ಬದಲಾದ ಕಾರಣ ಆ ಕಾರ್ಯ ಅರ್ಧಕ್ಕೆ ನಿಂತಿದೆ. ಮುಖ್ಯಮಂತ್ರಿಯಿಂದ ಮತ್ತೆ ಈ ಯೋಜನೆಯ ಅನುಮೋದನೆ ಪಡೆಯುತ್ತೇನೆ. ಕತೃಗದ್ದುಗೆಗೆ ಮಠ ಬಯಸಿದ ಸಹಾಯ ನೀಡಲು ಸಿದ್ಧ’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

‘ಶ್ರೀಗಳಿಂದ ಹಣ ಪಡೆದು ಅವರಿಗೆ ಕೊಡದೆ ಮೋಸ ಮಾಡಿರುವುದಾಗಿ ಕೆಲವು ಭಕ್ತರು ಅರೋಪಿಸುತ್ತಿದ್ದಾರೆ. ಅದು ಸುಳ್ಳು. ಅವರಿಂದ ಹಣ ಪಡೆದಿದ್ದು ನಿಜ. ಹಣವನ್ನು ಅವರಿಗೆ ಹಿಂತಿರುಗಿಸಿದ್ದೇನೆ’ ಎಂದು ಶಾಸಕರು ಹೇಳಿದರು.

‘ಶ್ರೀಗಳ ಕರ್ತೃಗದ್ದುಗೆ ₹ 3 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುವ ಯೋಜನೆ ಸಿದ್ಧಪಡಿಸಲಾಗಿದೆ’ ಎಂದು ಮಠದ ಮುಖ್ಯಸ್ಥ ಗಿರೀಶ್ ಪಾಟೀಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.