ADVERTISEMENT

ಹರಿಹರ | ಸರಳವಾಗಿ ನೆರವೇರಿದ ಹರ ಜಾತ್ರೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2024, 5:13 IST
Last Updated 16 ಜನವರಿ 2024, 5:13 IST
ಹರಿಹರದದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಸೋಮವಾರ ನಡೆದ ಸರಳ ಹರಜಾತ್ರೆಯಲ್ಲಿ ವಚನಾನಂದ ಶ್ರೀ ಅವರಿಗೆ ಆರನೇ ಪೀಠಾರೋಹಣ ನಿಮಿತ್ತ ರುದ್ರಾಕ್ಷಿ ಕಿರೀಟ ಧಾರಣೆ ಮಾಡಲಾಯಿತು
ಹರಿಹರದದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಸೋಮವಾರ ನಡೆದ ಸರಳ ಹರಜಾತ್ರೆಯಲ್ಲಿ ವಚನಾನಂದ ಶ್ರೀ ಅವರಿಗೆ ಆರನೇ ಪೀಠಾರೋಹಣ ನಿಮಿತ್ತ ರುದ್ರಾಕ್ಷಿ ಕಿರೀಟ ಧಾರಣೆ ಮಾಡಲಾಯಿತು   

ಹರಿಹರ: ನಗರದ ಹೊರವಲಯದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಹರ ಜಾತ್ರೆ, ಶ್ರೀಗಳ 6ನೇ ಪೀಠಾರೋಹಣ, ವಚನಗಳ ಪಲ್ಲಕ್ಕಿ ಉತ್ಸವದಂತಹ ಧಾರ್ಮಿಕ ವಿಧಿ, ವಿಧಾನಗಳ ಜೊತೆಗೆ ಸಂಕ್ರಾಂತಿಯ ಸಂಭ್ರಮ ಸೋಮವಾರ ಮನೆ ಮಾಡಿತ್ತು.

ಬರಗಾಲದ ನಿಮಿತ್ತ ಈ ಬಾರಿಯ ಹರಜಾತ್ರೆ ಸರಳವಾಗಿ ನಡೆಯಲಿದೆ ಎಂದು ಪೀಠದಿಂದ ಘೋಷಣೆ ಮಾಡಿದ್ದರೂ ಜಿಲ್ಲೆ ಹಾಗೂ ಸುತ್ತಲಿನ ನೂರಾರು ಭಕ್ತರು  ಬಂದಿದ್ದರು.

ಬೆಳಿಗ್ಗೆ 9ಕ್ಕೆ ನಗರದ ರಾಘವೇಂದ್ರ ಮಠದ ಹಿಂಭಾಗದ ತುಂಗಭದ್ರಾ ನದಿ ದಡದ ತುಂಗಾರತಿ ಸ್ಥಳದಲ್ಲಿ ನಡೆದ ಮಕರ ಸಂಕ್ರಾಂತಿ ಪುಣ್ಯಸ್ನಾನ, ನಂತರ ಗುರುಪೀಠದಲ್ಲಿ ಬೆಳಿಗ್ಗೆ 11ಕ್ಕೆ ಹರ ಮಹೋತ್ಸವ ನಿಮಿತ್ತ ಕಲಾ ತಂಡದೊಂದಿಗೆ ಕುಂಭಮೇಳ ಹಾಗೂ ವೈರಾಗ್ಯ ನಿಧಿ ಅಕ್ಕಮಹಾದೇವಿಯವರ ವಚನಗ್ರಂಥದ ಮೆರವಣಿಗೆ, ವಚನಾನಂದ ಶ್ರೀಗಳ ಷಷ್ಠಿ ಪೀಠಾರೋಹಣಕ್ಕೆ ನಾಡಿನ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಸಮುದಾಯದ ಮುಖಂಡರು, ಜನರು ಸಾಕ್ಷಿಯಾದರು.

ADVERTISEMENT

ರಾಜಕೀಯ, ಸಮುದಾಯದ ಆಗುಹೋಗುಗಳು, ಬೇಡಿಕೆಗಳು, ಅಯೋಧ್ಯೆ ರಾಮಂದಿರದ ಉದ್ಘಾಟನೆ ಇತ್ಯಾದಿ ವಿಷಯಗಳ ಚರ್ಚೆಗೆ ಕಾರ್ಯಕ್ರಮ ವೇದಿಕೆಯಾಯಿತು.

ಸರಳ ಆಚರಣೆ ಹಿನ್ನೆಲೆಯಲ್ಲಿ ಮಠದ ಕಟ್ಟಡದ ಒಳಗೆ ಪೀಠಾರೋಹಣ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದನ್ನು ಗಮನಿಸಿ ಆವರಣದಲ್ಲಿ ವೇದಿಕೆ, ಪೆಂಡಾಲ್, ಕುರ್ಚಿಗಳನ್ನು ಹಾಕಿ ಕಾರ್ಯಕ್ರಮ ನಡೆಸಲಾಯಿತು.

ರುದ್ರಾಕ್ಷಿಯ ಕಿರೀಠ ಧಾರಣೆ ಮೂಲಕ 6ನೇ ಪೀಠಾರೋಹಣ ಸ್ವೀಕರಿಸಿದ ವಚನಾನಂದ ಶ್ರೀ ಮಾತನಾಡಿ, ‘ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಲೆಂದು ಹರಜಾತ್ರೆ ಆರಂಭಿಸಲಾಯಿತೇ ವಿನಾ ವಿಘಟನೆ ಮಾಡಲು ಅಲ್ಲ’ ಎಂದು ಹೇಳಿದರು.

ನಾಡಿನ ವೀರಶೈವ ಲಿಂಗಾಯತ ಸಮುದಾಯದಲ್ಲಿ ಪಂಚಮಸಾಲಿ ಸಮುದಾಯದವರು ಅಧಿಕ ಸಂಖ್ಯೆಯಲ್ಲಿರುವುದರಿಂದ ಅವರನ್ನು ಮುಖ್ಯವಾಹಿನಿಗೆ ತರಲು ಜಾತ್ರಾ ಮಹೋತ್ಸವ ಆಯೋಜಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ನಾಡಿನ ವಿವಿಧೆಡೆಯಿಂದ ಬಂದಿದ್ದ ಸಮುದಾಯದ ಜನರು ಸಂಕ್ರಾಂತಿ ನಿಮಿತ್ತ ಕಟ್ಟಿಕೊಂಡು ಬಂದಿದ್ದ ಬುತ್ತಿ, ರೊಟ್ಟಿ ಗಂಟನ್ನು ಬಿಚ್ಚಿ ಕುಟುಂಬದವರೊಂದಿಗೆ ಕುಳಿತು ಸವಿದರು. ಇನ್ನೂ ಕೆಲವರು ಪೀಠದಿಂದ ವ್ಯವಸ್ಥೆ ಮಾಡಿದ್ದ ಹಬ್ಬದ ವಿಶೇಷ ಅಡುಗೆಯ ರುಚಿ ನೋಡಿದರು.

ಮಧ್ಯಾಹ್ನಕ್ಕೆ ಮುಗಿದ ಪೀಠಾರೋಹಣ: ಈ ಮುಂಚೆ ತಿಳಿಸಿದಂತೆ ಸೋಮವಾರ ಸಂಜೆ 4ಕ್ಕೆ ಪೀಠಾರೋಹಣ ನಡೆಯಬೇಕಿತ್ತು. ಆದರೆ ಮಧ್ಯಾಹ್ನ 1ಕ್ಕೆ  ಸಮಾರಂಭವನ್ನು ನಡೆಸಲಾಯಿತು. ಇದರಿಂದ ಮಾಧ್ಯಮದವರು, ಸಮುದಾಯದ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ.

ಅಲಗೂರು ಪಂಚಮಸಾಲಿ ಗುರುಪೀಠದ ಮಹಾದೇವ ಶಿವಾಚಾರ್ಯ ಶ್ರೀ, ಮೈಸೂರು ಗವಿಮಠದ ಮಲ್ಲಿಕಾರ್ಜುನ ಶ್ರೀ, ಕುಂಚನೂರು ಕಮರಿ ಮಠದ ಸಿದ್ಧಲಿಂಗ ದೇವರು, ಬುದಿನಿಯ ಸಿದ್ಧಾನಂದ ಶ್ರೀ ಸೇರಿ ವಿವಿಧ ಮಠಾಧೀಶರು ಮಾತನಾಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ, ರಾಣೆಬೆನ್ನೂರು ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್, ಡಾ.ಪ್ರಭಾ ಮಲ್ಲಿಕಾರ್ಜುನ್, ಪಂಚಮಸಾಲಿ ಸಮಾಜದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಬಸವರಾಜ್ ದಿಂಡೂರು, ಪಿ.ಡಿ.ಶಿರೂರು, ಜ್ಯೋತಿ ಪ್ರಕಾಶ್, ಚಂದ್ರಶೇಖರ್ ಪೂಜಾರ್, ರಾಜಕುಮಾರ್ ಹೊನ್ನಾಳಿ, ಪ್ರಕಾಶ್ ಪಾಟೀಲ್ ದಾವಣಗೆರೆ, ವಸಂತ್ ಉಲ್ಲತ್ತಿ, ರಶ್ಮಿ ಕುಂಕದ್, ಡಿ.ಜೆ. ಶಿವಾನಂದಪ್ಪ, ಗುತ್ತೂರು ಹಾಲೇಶ್ ಗೌಡ, ಮಂಜುನಾಥ್ ಪುರವಂತರ, ಕರಿಬಸಪ್ಪ ಕಂಚಿಕೇರಿ, ಕರಿಬಸಪ್ಪ ಗುತ್ತೂರು, ಬಾದಾಮಿ ಜಯಣ್ಣ, ಲಿಂಗಾರಾಜ್ ಪಟೇಲ್ ಬೆಳಕೇರಿ, ಶಿವಪ್ಪ ಬಂಕಾಪುರ, ವಕೀಲ ಬಸವರಾಜ್, ಆಶೋಕ ಬೆಂಡಿಗೇರಿ, ಹಾಲೇಶ್‌ಗೌಡ, ಬಾತಿ ರವಿಕುಮಾರ್, ಶ್ರೀಶೈಲ ಇದ್ದರು.

ಪೀಠಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.