ಹರಿಹರ: ವಿದ್ಯಾರ್ಥಿಗಳ ಪ್ರಗತಿಗೆ ಶ್ರಮಿಸುವ ಶಿಕ್ಷಕರನ್ನು ಗಮನಿಸಿ ಶಾಲಾ ಕಟ್ಟಡದ ಜೀರ್ಣೋದ್ಧಾರಕ್ಕೆ ನಿರ್ಧರಿಸಲಾಯಿತು ಎಂದು ಬೆಂಗಳೂರಿನ ಕೇರ್ ಟ್ರಸ್ಟ್ ಸೇವಾ ಸಂಸ್ಥೆಯ ಆನಂದ್ ಹೇಳಿದರು.
ನಗರದ ಗುತ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ‘ಶಾಲಾ ಕಟ್ಟಡದ ಸುಣ್ಣ, ಬಣ್ಣ, ಹೈಟೆಕ್ ಶೌಚಾಲಯ ಹಾಗೂ ಆರ್‌ಸಿಸಿ ಚಾವಣಿ ಅಭಿವೃದ್ಧಿ ಕಾಮಗಾರಿ’ಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಶ್ರೀಧರ್ ಮೈಯ ಅವರು ಈ ಹಿಂದೆ ಹಿರಿಯೂರಿನ ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ತರಗತಿ ನಡೆಸುತ್ತಿದ್ದರು. ಅವರನ್ನು ಗಮನಿಸಿ ಈ ಶಾಲೆಯನ್ನು ಆಯ್ಕೆ ಮಾಡಲಾಯಿತು ಎಂದರು.
ಬೆಂಗಳೂರಿನ ಪ್ರಗತಿ ಆಟೋಮಶಿನ್ ಪ್ರೈ.ಲಿ. ಹಾಗೂ ಡೈನೆಸ್ಟಿಕ್ ಟೂಲ್ಸ್ ಆ್ಯಂಡ್ ಡಿವೈಸರ್ ಪ್ರೈ.ಲಿ. ಕಂಪನಿಗಳ ₹ 25.22 ಲಕ್ಷ ಸಿಎಸ್‌ಆರ್ ಅನುದಾನದಲ್ಲಿ ಕೇರ್ ಟ್ರಸ್ಟ್ ಸೇವಾ ಸಂಸ್ಥೆ ಮಾಡಿರುವ ಅಭಿವೃದ್ಧಿ ಕೆಲಸಗಳಿಂದಾಗಿ ಈ ಶಾಲೆಯು ಖಾಸಗಿ ಶಾಲೆಗಿಂತ ಹೆಚ್ಚು ಆಕರ್ಷಕವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಐರಣಿ ಹನುಮಂತಪ್ಪ ಹೇಳಿದರು.
ದೊಡ್ಡ ಮೊತ್ತದ ಅನುದಾನದಲ್ಲಿ ಶಾಲೆಯಲ್ಲಿ ಉತ್ತಮ ಸೌಕರ್ಯ ಕಲ್ಪಿಸಲಾಗಿದೆ. ಈ ಸೌಲಭ್ಯಗಳನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಶಾಲೆಯವರ ಮೇಲಿದೆ ಎಂದು ನಿವೃತ್ತ ನ್ಯಾಯಾಧೀಶ, ಜಿಲ್ಲಾಧಿಕಾರಿ ಕಚೇರಿಯ ಕಾನೂನು ಸಲಹೆಗಾರ ಹಾಲಪ್ಪ ತಿಳಿಸಿದರು.
ಇಟ್ಟಿಗೆ ಭಟ್ಟಿ ಪ್ರದೇಶದ ಕೂಲಿಕಾರರ ಮಕ್ಕಳೇ ಹೆಚ್ಚಿರುವ ಈ ಶಾಲೆಯನ್ನು ಅಭಿವೃದ್ಧಿಗೊಳಿಸಿರುವುದು ಸೂಕ್ತವಾಗಿದೆ. ಮುಂದೆ ಹೈಟೆಕ್ ಪ್ರಯೋಗಶಾಲೆಯನ್ನೂ ಒದಗಿಸುವ ಭರವಸೆ ಸಂಸ್ಥೆಯವರಿಂದ ಬಂದಿರುವುದು ಶ್ಲಾಘನೀಯ ಎಂದು ತಪೋವನ ಸಂಸ್ಥೆಯ ಮುಖ್ಯಸ್ಥ ಶಶಿಕುಮಾರ್ ಮೆರ‍್ವಾಡೆ ಹೇಳಿದರು.
ದಾನಿಗಳಾದ ಬೆಂಗಳೂರಿನ ಅತುಲ್ ಭಿರಂಗಿ, ದಾಮೋದರ್ ಬಿ. ಅವರು ಹೈಟೆಕ್ ಶೌಚಾಲಯದ ಗೋಡೆಗೆ ಬಣ್ಣ ಬಳಿಯುವು ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ದಾನಿಗಳಾದ ಬೆಂಗಳೂರಿನ ಅತುಲ್ ಭಿರಂಗಿ, ದಾಮೋದರ್ ಬಿ., ಹೇಮಂತ್ ಕೆ.ವಿ., ತಿಮ್ಮಯ್ಯ ಬಿ.ಡಿ., ದಿನೇಶ್ ಎಸ್.ಎಸ್., ದೀಪಕ್ ಜೋಗಳೇಕರ್, ಅಪರ್ಣಾ ಭಿರಂಗಿ, ಕೇರ್ ಟ್ರಸ್ಟ್‌ನ ಆನಂದ್, ಗುರುರಾಜ್, ಅಶ್ವನಿ ಕುಮಾರ್, ಕಿಶೋರ್ ಚೆನ್ನಪ್ಪ, ಗುರುರಾಜ ಮುಗುಳಕೋಡ, ಪ್ರಸನ್ನಕುಮಾರ್, ಸಂತೋಷ್‌ಕುಮಾರ್ ಪಿ.ಆರ್., ಶಾಂತಕುಮಾರ್ ಜಿ.ಪಿ., ಸತೀಶ್ ಬಿ.ಡಿ. ಅವರನ್ನು ಸತ್ಕರಿಸಲಾಯಿತು.
ವಿದ್ಯಾರ್ಥಿಗಳ ನೃತ್ಯ ಹಾಗೂ ಗಾಯಕ ಅಣ್ಣಪ್ಪ ಅಜ್ಜೇರ್ ಗಾಯನ ಎಲ್ಲರ ಗಮನ ಸೆಳೆಯಿತು.
ದಾವಣಗೆರೆ ಡಯಟ್ ಪ್ರಾಚಾರ್ಯೆ ಗೀತಾ, ಪ್ರಭಾರಿ ಮುಖ್ಯ ಶಿಕ್ಷಕ ಶ್ರೀಧರ ಮಯ್ಯ, ನಿವೃತ್ತ ಮುಖ್ಯಶಿಕ್ಷಕ ಸಿದ್ದಪ್ಪ, ಮಲ್ಲಿಕಾರ್ಜುನಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜ ಬಿ.ಜೆ., ಸಿಆರ್‌ಪಿ ಶಿವಪ್ಪ, ಅಂಕಣಗಾರ್ತಿ ರೂಪಾ ಗುರುರಾಜ್, ಮೊಹಮ್ಮದ್ ಗನೀಫ್, ಶಿಕ್ಷಕಿಯರಾದ ರೀನಾ, ಸರಸ್ವತಿ, ಸೌಭಾಗ್ಯ, ನಂದಾ, ಆರುಂಧತಿ, ಶೋಭಾ ಇದ್ದರು.
ಹಿರಿಯ ಶಿಕ್ಷಕ ರವೀಂದ್ರ ಸ್ವಾಗತಿಸಿ, ಚಿತ್ರಕಲಾ ಶಿಕ್ಷಕ ನಾಗರಾಜ್ ವಂದಿಸಿದರು. ಮಂಜುನಾಥ ಆಡಿನ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.