
ಹರಿಹರ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಕುಟುಂಬ ಹಾಗೂ ಅಧಿಕಾರಿಗಳನ್ನು ನಿಂದಿಸುವ ಪ್ರವೃತ್ತಿ ಕೈಬಿಡದಿದ್ದರೆ ದಾವಣಗೆರೆಯಲ್ಲಿರುವ ಶಾಸಕ ಬಿ.ಪಿ. ಹರೀಶರವರ ಮನೆಗೆ ಮುತ್ತಿಗೆ ಹಾಕಲಾಗುವುದೆಂದು ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಎಚ್ಚರಿಕೆ ನೀಡಿದರು.
ನಗರದಲ್ಲಿ ಶನಿವಾರ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ಶಾಸಕ ಬಿ.ಪಿ ಹರೀಶ್ ರವರ ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡಿದರು.
‘ಸಚಿವರು, ಜಿಲ್ಲಾ ಮಟ್ಟದ ಅಧಿಕಾರಿಗಳ ವಿರುದ್ಧ ಕೀಳು ಮಟ್ಟದ ನಿಂದನೆ ಶಾಸಕರಾಗಿರುವವರಿಗೆ ಶೋಭೆ ತರುವುದಿಲ್ಲ. 2023ರಲ್ಲಿ ರಾಜ್ಯದಲ್ಲಿದ್ದ ಕಾಂಗ್ರೆಸ್ ಪರ ವಾತಾವರಣದ ಮಧ್ಯೆಯೂ ಸ್ಥಳೀಯ ಕಾಂಗ್ರೆಸ್ ಮುಖಂಡರ ಕಚ್ಚಾಟದಿಂದಾಗಿ ನೀವು ಅದೃಷ್ಟದಿಂದ ಶಾಸಕರಾಗಿ ಆಯ್ಕೆಯಾಗಿದ್ದೀರಿ. ನಿಮಗೆ ಮಾಡಿದ ಆಶೀರ್ವಾದಕ್ಕೆ ಕ್ಷೇತ್ರದ ಜನತೆಗೆ ದ್ರೋಹ ಬಗೆಯಬೇಡಿ. ಹಿಂದುಳಿದಿರುವ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿರಿ ಎಂದು ಕಿವಿ ಮಾತು ಹೇಳಿದರು.
ಜನಪ್ರತಿನಿಧಿಗಳನ್ನು ಹಾಗೂ ಅಧಿಕಾರಿಗಳು, ದಲಿತ, ಅಲ್ಪಸಂಖ್ಯಾತ ಸಮುದಾಯದವರನ್ನು ನಿಂದಿಸಿ ಮಾತನಾಡುವುದನ್ನು ಬಿಟ್ಟು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಕ್ಷೇತ್ರದ ಹತ್ತಾರು ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಿತ ಸಚಿವರ ಬಳಿಗೆ ಹೋಗಬೇಕಾದ ಹರೀಶ್ ರವರು ನಿಂದಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಕಿಡಿಕಾರಿದರು.
3 ವರ್ಷದಿಂದ ಆಶ್ರಯ ಸಮಿತಿ ಸಭೆ ಕರೆದಿಲ್ಲ, ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನಡೆಸಬೇಕಾದ ಸಭೆಗಳ ಕಡೆಗೆ ಗಮನ ಹರಿಸಿಲ್ಲ. ಇಂತಹ ಸಭೆಗಳು ನಡೆಯದೆ ಕ್ಷೇತ್ರದ ಸಾವಿರಾರು ಬಡ ಜನರಿಗೆ ತೊಂದರೆಯಾಗಿದೆ. ಹರೀಶ್ ರವರು ರಾಜಿನಾಮೆ ನೀಡುವುದು ಸೂಕ್ತ ಎಂದು ಹೇಳಿದರು.
ಪಕ್ಕೀರಸ್ವಾಮಿ ಮಠದಿಂದ ಶಾಸಕ ಹರೀಶ್ ರವರ ಅಣಕು ಶವಯಾತ್ರೆಯೊಂದಿಗೆ ಧಿಕ್ಕಾರ ಕೂಗುತ್ತಾ ಪಕ್ಷದ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿದರು. ಗಾಂಧಿ ವೃತ್ತದಲ್ಲಿ ಪ್ರತಿಕೃತಿಯನ್ನು ಸುಟ್ಟು ಆಕ್ರೋಶ ಹೊರಹಾಕಿದರು.
ಮಾಜಿ ಶಾಸಕ ಎಸ್. ರಾಮಪ್ಪ, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ಪಕ್ಷದ ಬ್ಲಾಕ್ ಅಧ್ಯಕ್ಷರಾದ ಎಲ್.ಬಿ. ಹನುಮಂತಪ್ಪ, ಎಂ.ಬಿ. ಆಬಿದ್ ಅಲಿ, ಮುಖಂಡರಾದ ಶಂಕರ ಖಟಾವ್ ಕರ್, ಬಿ. ರೇವಣಸಿದ್ದಪ್ಪ, ಬಿ. ಮೊಹಮ್ಮದ್ ಸಿಗ್ಬತ್ ಉಲ್ಲಾ, ಅಯೂಬ್ ಪೈ., ಪಿ. ಶ್ರೀನಿವಾಸ್ ಮೂರ್ತಿ, ಎಂ.ನಾಗೇಂದ್ರಪ್ಪ, ನಿಖಿಲ್ ಕೊಂಡಜ್ಜಿ, ಸಿ.ಎನ್. ಹುಲಿಗೇಶ್, ಹಾಲೇಶ್ ಗೌಡ್ರು, ಮಲೆಬೆನ್ನೂರು ಪುರಸಭೆ ಪ್ರಭಾರಿ ಅಧ್ಯಕ್ಷೆ ನಸಿಯಾಬಾನು, ಸೈಯದ್ ಸನಾಉಲ್ಲಾ, ಅಬ್ದುಲ್ಲಾ, ಸುರೇಶ್ ಹಾದಿಮನಿ, ಎಂ.ಆರ್. ಮುಜಮ್ಮಿಲ್, ಬಡಿಯಪ್ಪ, ಹಬೀಬ್ ಬೇಗ್, ಭಾಗ್ಯದೇವಿ ಹಾಗೂ ಇತರರಿದ್ದರು.
ಜನತೆಯೇ ತಕ್ಕ ಪಾಠ ಕಲಿಸುತ್ತಾರೆ
‘ಶಾಮನೂರು ಶಿವಶಂಕರಪ್ಪರ ಬೆಂಬಲದಿಂದಲೇ ಹರೀಶರವರ ತಂದೆಯವರು ಹರಿಹರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಹರಿಹರದ ಹಿಂದಿನ ರಾಜಕಾರಣಿಗಳಾದ ಎಚ್. ಸಿದ್ಧವೀರಪ್ಪ, ಗಾಂಜಿ ವೀರಪ್ಪ, ಎಚ್. ಶಿವಪ್ಪ, ವೈ. ನಾಗಪ್ಪರಂತಹವರು ವಿಭಿನ್ನ ರಾಜಕೀಯ ಪಕ್ಷಗಳಲ್ಲಿದ್ದರೂ ವಿರೋಧಿಗಳನ್ನು ಟೀಕಿಸುವಾಗ ಎಲ್ಲೆಯನ್ನು ಮೀರಿದ್ದಿಲ್ಲ. ಹರಿಹರದ ಇಂತಹ ಮೌಲ್ಯಯುತ ಸಂಸ್ಕೃತಿಗೆ ಶಾಸಕ ಹರೀಶ್ ದೊಡ್ಡ ಪೆಟ್ಟು ನೀಡಿದ್ದಾರೆ. ನಿಮ್ಮ ವರ್ತನೆಯನ್ನು ಬದಲಿಸಿಕೊಳ್ಳದಿದ್ದರೆ ಜನತೆಯೇ ಪಾಠ ಕಲಿಸುತ್ತಾರೆ’ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.