
ಹರಿಹರ: ಸರ್ಕಾರಿ ಜಮೀನು ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಯ ಭೂ ದಾಖಲೆ ಇಲಾಖೆಯ ಅಧಿಕಾರಿಗಳ ತಂಡ ಹರಿಹರ ಮತ್ತು ಹರಪನಹಳ್ಳಿ ತಾಲ್ಲೂಕಿನ ಗಡಿಯಲ್ಲಿ ಸೋಮವಾರ ಜಂಟಿ ಸ್ಥಳ ಪರಿಶೀಲನೆ ನಡೆಸಿತು.
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕು ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು ಗಡಿ ವಿಭಜಿಸುವ ಹಳ್ಳವೊಂದರ ದಿಕ್ಕನ್ನು ಬದಲಿಸಿ ಅತಿಕ್ರಮಣ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಬಿ.ಪಿ. ಹರೀಶ್ ವಿಧಾನಮಂಡಲದ ಅಧಿವೇಶನದಲ್ಲಿ ಆರೋಪಿಸಿದ್ದರು.
ಭೂ ದಾಖಲೆ ಇಲಾಖೆ ಜಂಟಿ ನಿರ್ದೇಶಕ ನಿಸಾರ್ ಅಹ್ಮದ್, ದಾವಣಗೆರೆ ಭೂದಾಖಲೆಗಳ ಇಲಾಖೆಯ ಉಪನಿರ್ದೇಶಕಿ ಆರ್. ಭಾಗ್ಯಮ್ಮ, ವಿಜಯನಗರ ಭೂದಾಖಲೆಗಳ ಇಲಾಖೆಯ ಉಪನಿರ್ದೇಶಕ ಆರ್.ಕೇಶವಮೂರ್ತಿ, ಚಿತ್ರದುರ್ಗ ಭೂದಾಖಲೆಗಳ ಉಪನಿರ್ದೇಶಕ ರಾಮಾಂಜನೇಯ, ಹರಿಹರ ಸಹಾಯಕ ನಿರ್ದೇಶಕ ಆರ್.ಕಲ್ಲೇಶ್ ಸೇರಿದಂತೆ ವಿವಿಧ ಅಧಿಕಾರಿಗಳು ತಂಡದಲ್ಲಿದ್ದರು.
ಬೆಳಿಗ್ಗೆ 11 ರಿಂದ ಮಧ್ಯಾಹ್ನ 1ರವರೆಗೆ ತಾಲ್ಲೂಕಿನ ಚಿಕ್ಕಬಿದರಿ ಗ್ರಾಮದ ಸಮೀಪ ತುಂಗಭದ್ರ ನದಿ ಬಳಿಯ ಹಳ್ಳದ ಪರಿಸರಕ್ಕೆ ತಂಡವು ಭೇಟಿ ನೀಡಿ ಪರಿಶೀಲಿಸಿತು. ಅಧಿಕಾರಿಗಳ ತಂಡವು ಅಲ್ಲಿ ಸುಧೀರ್ಘ ಸಭೆ ನಡೆಸಿತು. ಭೂ ಮಾಪನ ಕಾರ್ಯವನ್ನು ಸುಲಭಗೊಳಿಸುವ ಡಿಜಿಪಿಎಸ್ ಮತ್ತು ರೋವರ್ ಉಪಕರಣಗಳೊಂದಿಗೆ ನ.2ರಂದು ಪರಿಶೀಲನೆ ಮುಂದುವರಿಸಲು ತೀರ್ಮಾನಿಸಿತು ಎಂಬುದಾಗಿ ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.