ADVERTISEMENT

ಹರಿಹರ | ಪಾಕ್ ಜಿಂದಾಬಾದ್ ಎನ್ನುವವರು ಕಾಣುತ್ತಿಲ್ಲವೆ?: ಶಾಸಕ ಬಿ.ಪಿ. ಹರೀಶ್

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 6:16 IST
Last Updated 20 ಅಕ್ಟೋಬರ್ 2025, 6:16 IST
ಹರಿಹರದಲ್ಲಿ ಭಾನುವಾರ ನಡೆದ ಆರ್‌ಎಸ್‌ಎಸ್‌ನ ಪಥಸಂಚಲನದಲ್ಲಿ ಗಣವೇಷದಾರಿಗಳು ಹೆಜ್ಜೆ ಹಾಕಿದರು
ಹರಿಹರದಲ್ಲಿ ಭಾನುವಾರ ನಡೆದ ಆರ್‌ಎಸ್‌ಎಸ್‌ನ ಪಥಸಂಚಲನದಲ್ಲಿ ಗಣವೇಷದಾರಿಗಳು ಹೆಜ್ಜೆ ಹಾಕಿದರು   

ಹರಿಹರ: ನಮ್ಮ ತಂದೆ ಎಐಸಿಸಿ ಅಧ್ಯಕ್ಷರಿದ್ದಾರೆ ಎನ್ನುವ ಅಧಿಕಾರದ ಅಹಂನಿಂದ ಸಚಿವ ಪ್ರಿಯಾಂಕ ಖರ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷೇಧದ ಮಾತುಗಳನ್ನಾಡುತ್ತಿದ್ದಾರೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ಆರ್‌ಎಸ್‌ಎಸ್ ಶಶತಮಾನೋತ್ಸವ ನಿಮಿತ್ತ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಗಣವೇಷಧಾರಿಗಳ ಪಥ ಸಂಚಲನದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ದೇಶದ ಗೌರವ, ಸಂಸ್ಕೃತಿ, ಪರಂಪರೆ ಮತ್ತು ಧರ್ಮದ ರಕ್ಷಣೆ ಮಾಡುವ ಕೆಲಸ ಮಾಡುತ್ತಿರುವ ಸಂಘಟನೆಯನ್ನು ನಿಷೇದ ಮಾಡಬೇಕೆನ್ನುವ ಪ್ರಿಯಾಂಕ ಖರ್ಗೆಯವರಿಗೆ ಪಾಕಿಸ್ತಾನ ಜಿಂದಾಬಾದ್ ಎನ್ನುವವರು ಕಾಣುತ್ತಿಲ್ಲವೆ ಎಂದು ಪ್ರಶ್ನಿಸಿದರು.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ನಿಮ್ಮ ಮುಖಕ್ಕೆ ಮಸಿಬಳಿಯುವ ಕೆಲಸವನ್ನು ನಿಮ್ಮ ಸಚಿವರೇ ಮಾಡುತ್ತಿದ್ದಾರೆ. ನೀವು ಅವರ ಮಾತಿಗೆ ಕಿವಿ ಕೊಡದೆ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಅನುಮತಿ ನೀಡಿ ಇಲ್ಲವೇ ಪರಿಣಾಮ ಎದುರಿಸಿ ಎಂದರು.

ಈಚೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಹಿಂದೂ ವಿರೋಧಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ, ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವ ಕೆಲಸವನ್ನು ಮಾಡುತ್ತಿದೆ. ಇದು ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಒಳ್ಳೆಯ ಬೆಳವಣಿಗೆಯಲ್ಲ ಎಂದು ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಹೇಳಿದರು.

ನಗರದ ಎಸ್‌ಜೆವಿಪಿ ಕಾಲೇಜು ಮೈದಾನದಿಂದ ಆರಂಭವಾದ ಪಥ ಸಂಚಲನ ಹಳೇ ಪಿ.ಬಿ.ರಸ್ತೆ, ಕಾಳಿದಾಸನಗರ, ರಾಮ ಮಂದಿರ, ಜೆ.ಸಿ. ಬಡಾವಣೆ, ಶಿವಮೊಗ್ಗ ರಸ್ತೆ, ಹಳ್ಳದಕೇರಿ, ಲದ್ವಾ ಓಣಿ, ವಿರಕ್ತಮಠ, ದೇವಸ್ಥಾನ ರಸ್ತೆ, ಕೋಟೆ, ಶಿಬಾರ ವೃತ್ತ, ದೊಡ್ಡಿ ಬೀದಿ, ಮರಾಠ ಗಲ್ಲಿ, ಮುಖ್ಯ ರಸ್ತೆ, ಗಾಂಧಿ ವೃತ್ತ, ಮೂಲಕ ಗಾಂಧಿ ಮೈದಾನದಲ್ಲಿ ಅಂತ್ಯಗೊಂಡಿತು.

ವೀರ ಸಾರ್ವಕರ್, ಸ್ವಾಮಿ ವಿವೇಕಾನಂದ, ಭಾರತ ಮಾತೆ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಭಗತ್ ಸಿಂಗ್, ಶ್ರೀರಾಮನ ವೇಷದಲ್ಲಿ ಮಕ್ಕಳು ಮಿಂಚಿದರೆ, ಪಥಸಂಚಲನ ಮಾರ್ಗದ ಪ್ರಮುಖ ವೃತ್ತಗಳಲ್ಲಿ ಸ್ಥಳೀಯರು ದೇಶ ಭಕ್ತರ ಭಾವಚಿತ್ರಗಳನ್ನಿಟ್ಟು ಹಾಗೂ ಬಂಟಿಗ್ಸ್ ಕಟ್ಟಿ ಅಲಂಕಾರ ಮಾಡಲಾಗಿತ್ತು.

ಬಿಜೆಪಿ ಮುಖಂಡರಾದ ಚಂದ್ರಶೇಖರ್ ಪೂಜಾರ್, ಲಿಂಗರಾಜ್ ಹಿಂಡಸಘಟ್ಟ, ಅಜಿತ್ ಸಾವಂತ್ ಭಾಗಿಯಾಗಿದ್ದರು. ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಭಗವಾಧ್ವಜಕ್ಕೆ ಹಾಗೂ ಗಣವೇಷದಾರಿಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಶುಭ ಹಾರೈಸಿದರು.

ಹರಿಹರದ ಗಾಂಧಿ ಮೈದಾನದಲ್ಲಿ ಆರ್‌ಎಸ್‌ಎಸ್ ಸದಸ್ಯರು ಪಧಸಂಚಲನ ನಂತರ ಜಮಾವಣೆಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.