ADVERTISEMENT

ಹರಿಹರದ ಬಸ್ ನಿಲ್ದಾಣದಲ್ಲಿ ಬೆಂಚ್‌ಗಳ ಕೊರತೆ: ಪ್ರಯಾಣಿಕರಿಗೆ ನಿಲ್ಲುವ ಶಿಕ್ಷೆ!

ಇನಾಯತ್ ಉಲ್ಲಾ ಟಿ.
Published 5 ನವೆಂಬರ್ 2025, 7:25 IST
Last Updated 5 ನವೆಂಬರ್ 2025, 7:25 IST
ಹರಿಹರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿರುವ ಮರದಡಿ ಕುಳಿತು, ನಿಂತು ಬಸ್‌ಗೆ ಕಾಯುತ್ತಿರುವ ಪ್ರಯಾಣಿಕರು
ಹರಿಹರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿರುವ ಮರದಡಿ ಕುಳಿತು, ನಿಂತು ಬಸ್‌ಗೆ ಕಾಯುತ್ತಿರುವ ಪ್ರಯಾಣಿಕರು   

ಹರಿಹರ: ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಸೂಕ್ತ ಬೆಂಚ್‌ಗಳೇ ಇಲ್ಲ. ಮೂಲ ಸೌಲಭ್ಯಗಳೂ ಮರೀಚಿಕೆಯಾಗಿದ್ದು, ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ.

‘ಶಕ್ತಿ’ ಯೋಜನೆ ಜಾರಿಯಾದ ಬಳಿಕ ಬಸ್‌ ನಿಲ್ದಾಣವು ಜನರಿಂದ ಗಿಜಿಗುಡುತ್ತಿದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ನಿಲ್ದಾಣದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲು ಸಂಸ್ಥೆ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ನಿಲ್ದಾಣಕ್ಕೆ ನಿತ್ಯ 1,400ಕ್ಕೂ ಹೆಚ್ಚು ಬಸ್‌ಗಳು ಬಂದು ಹೋಗುತ್ತವೆ. 50 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಈ ನಿಲ್ದಾಣವನ್ನು ಬಳಸುತ್ತಾರೆ. ಇದಕ್ಕೆ ಹೋಲಿಸಿದರೆ, ಇಲ್ಲಿನ ಮೂಲಸೌಕರ್ಯಗಳು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿವೆ.

ADVERTISEMENT

‘30 ವರ್ಷಗಳ ಹಿಂದೆ ನಿಲ್ದಾಣ ನಿರ್ಮಿಸಲಾಗಿತ್ತು. ಆಗಿನ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬೆಂಚ್‌ಗಳನ್ನು ಅಳವಡಿಸಲಾಗಿತ್ತು. ಕಾಲಕ್ರಮೇಣ ಇವುಗಳ ಸಂಖ್ಯೆ ಹೆಚ್ಚಿಸಬೇಕಿತ್ತು. ಆ ಕೆಲಸ ಆಗುತ್ತಿಲ್ಲ. ಇರುವ ಬೆರಳೆಣಿಕೆಯಷ್ಟು ಬೆಂಚ್‌ಗಳಲ್ಲಿ ಕೆಲವರು ಕುಳಿತುಕೊಂಡರೆ, ಉಳಿದವರು ನಿಲ್ಲುವ ಶಿಕ್ಷೆ ಅನುಭವಿಸುವಂತಾಗಿದೆ. ಅದರಲ್ಲೂ ಮಹಿಳೆಯರು, ವೃದ್ಧರು, ಮಕ್ಕಳು ಕೆಲ ಊರುಗಳಿಗೆ ಹೋಗಲು ಬಸ್‌ಗಾಗಿ ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಹೆಚ್ಚು ಹೊತ್ತು ನಿಲ್ಲಲಾಗದವರು ಅಕ್ಕಪಕ್ಕದ ಕಾಂಪೌಂಡ್, ಮರದಡಿ ಕುಳಿತುಕೊಂಡು ಬಸ್‌ಗಾಗಿ ಎದುರು ನೋಡುವ ಅನಿವಾರ್ಯತೆ ಇದೆ. 

ಮಹಿಳೆಯರು ಮತ್ತು ಪುರುಷರ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆ, ಸುರಕ್ಷತೆಗೆ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಕೆ, ಪೊಲೀಸ್ ಸಿಬ್ಬಂದಿ ನೇಮಕ, ರಾತ್ರಿ ಸಮಯದಲ್ಲಿ ಬೆಳಕಿನ ವ್ಯವಸ್ಥೆ ಹೀಗೆ ನಾನಾ ಸಮಸ್ಯೆಗಳು ಇದ್ದು, ಮೂಲ ಸೌಕರ್ಯಗಳ ಕೊರತೆಯ ದೊಡ್ಡ ಪಟ್ಟಿಯನ್ನೇ ಪ್ರಯಾಣಿಕರು ಮುಂದಿಡುತ್ತಾರೆ. 

ಹರಿಹರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿರುವ ಮರದಡಿ ಕುಳಿತಿರುವ ಮಹಿಳೆಯರು ವೃದ್ಧರು
ಹರಿಹರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಅಗತ್ಯ ಸಂಖ್ಯೆಯ ಬೆಂಚ್‌ಗಳಿಲ್ಲದೆ ನಿಂತು ಬಸ್‌ಗೆ ಕಾಯುತ್ತಿರುವ ಪ್ರಯಾಣಿಕರು
ಪ್ರಯಾಣಿಕರಿಗೆ ನಿಲ್ದಾಣದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸುವುದು ಸಾರಿಗೆ ಸಂಸ್ಥೆಯ ಕರ್ತವ್ಯ. ಸೌಲಭ್ಯಗಳನ್ನು ಕಲ್ಪಿಸದಿದ್ದರೆ ಪ್ರತಿಭಟನೆ ಮಾಡಲಾಗುವುದು
ರಮೇಶ್ ಮಾನೆ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ
ಸಂಸ್ಥೆಯ ಸಿವಿಲ್ ಎಂಜಿನಿಯರ್ ಅವರನ್ನು ನಿಲ್ದಾಣಕ್ಕೆ ಕಳುಹಿಸಿ ವಸ್ತುಸ್ಥಿತಿ ಪರಿಶೀಲಿಸಿದ ಬಳಿಕ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇವೆ
ಶಿವಮೂರ್ತಯ್ಯ ವಿಭಾಗಾಧಿಕಾರಿ ಕೆಎಸ್‌ಆರ್‌ಟಿಸಿ ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.