ADVERTISEMENT

ಹರಿಹರ ನಗರಸಭೆ | ಬಜೆಟ್ ಪೂರ್ವಭಾವಿ ಸಭೆ; ಅಹವಾಲುಗಳ ಮಹಾಪೂರ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 4:56 IST
Last Updated 5 ಜನವರಿ 2026, 4:56 IST
<div class="paragraphs"><p>ಹರಿಹರ ನಗರಸಭೆ ಸಭಾಂಗಣದಲ್ಲಿ ಶನಿವಾರ ನಡೆದ&nbsp; ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಸಲಹೆ ನೀಡಿದರು</p></div>

ಹರಿಹರ ನಗರಸಭೆ ಸಭಾಂಗಣದಲ್ಲಿ ಶನಿವಾರ ನಡೆದ  ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಸಲಹೆ ನೀಡಿದರು

   

ಹರಿಹರ: ನಗರದ ಉದ್ಯಾನವನಗಳಲ್ಲಿರುವ ಅಕ್ರಮ ಕಟ್ಟಡಗಳ ತೆರವು, ರಸ್ತೆ ದುರಸ್ತಿ, ಪಾದಚಾರಿಗಳಿಗೆ ಫುಟ್ ಪಾತ್ ವ್ಯವಸ್ಥೆ ಸೇರಿದಂತೆ ನಾನಾ ಸಮಸ್ಯೆಗಳ ಪರಿಹಾರ ಕೋರಿ ನಗರಸಭೆಯಲ್ಲಿ ಶನಿವಾರ ನಡೆದ 2026–27ನೇ ಸಾಲಿನ ಆಯ–ವ್ಯಯದ 2ನೇ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಅಧಿಕಾರಿಗಳ ಗಮನ ಸೆಳೆದರು.

ಉದ್ಯಾನವನಗಳಲ್ಲಿ ಅನಧಿಕೃತ ಕಟ್ಟಡಗಳಿದ್ದು, ಇದು ಸುಪ್ರೀಂಕೋರ್ಟ್‌ ಆದೇಶಕ್ಕೆ ವಿರುದ್ಧವಾಗಿದೆ. ಆದ್ದರಿಂದ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಪರಿಸರ ಸಂರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಸಂಚಾಲಕ ಬಿ.ಮಗ್ದುಮ್ ಆಗ್ರಹಿಸಿದರು.

ADVERTISEMENT

ತುಂಗಭದ್ರ ಹೊಸ ಸೇತುವೆ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ಬೀದಿ ದೀಪಗಳ ಅಳವಡಿಕೆ ಬಗ್ಗೆ ಆನಂದ್ ಮಾತನಾಡಿದರೆ, ಆಂಜನೇಯ ಬಡಾವಣೆ ರಸ್ತೆಗಳ ಅಭಿವೃದ್ಧಿ, ಶಾಲೆಗಳಿಗೆ ಕಾಂಪೌಂಡ್ ನಿರ್ಮಿಸಲು ರೈತ ಸಂಘದ ರತ್ನಮ್ಮ ಆಗ್ರಹಿಸಿದರು.

ಕೆ.ಎಚ್.ಬಿ. ಕಾಲೊನಿಯಲ್ಲಿ ರಸ್ತೆ, ಉದ್ಯಾನವನ, ಕುಡಿಯುವ ನೀರಿನ ವ್ಯವಸ್ಥೆ, ಬೀದಿ ದೀಪ ಅಳವಡಿಕೆ ಬಗ್ಗೆ ನಗರಸಭೆ ಮಾಜಿ ಸದಸ್ಯ ಎಂ.ಬಿ. ಅಣ್ಣಪ್ಪ ಗಮನ ಸೆಳೆದರು. ಕುಡಿಯುವ ನೀರಿನ ದರ ಇಳಿಕೆಗೆ ಕಾರ್ಮಿಕ ಮುಖಂಡ ಎಚ್.ಕೆ. ಕೊಟ್ರಪ್ಪ ಆಗ್ರಹಿಸಿದರು.

ರಸ್ತೆ ಕಾಮಗಾರಿ, ಶೌಚಾಲಯ ವ್ಯವಸ್ಥೆ, ಬಿಡಾಡಿ ದನಗಳ ಕಾಟ, ಪೌರ ಕಾರ್ಮಿಕರ ನೇಮಕ, ನಾಮಫಲಕ ಅಳವಡಿಕೆ, ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಕೆ, ಕನ್ನಡ ಭವನ ನಿರ್ಮಾಣ ಹಾಗೂ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಹೆಚ್ಚಿನ ಅನುದಾನ ಸೇರಿ ವಿವಿಧ ಅಹವಾಲುಗಳನ್ನು ಸಾರ್ವಜನಿಕರು ಸಭೆಯ ಮುಂದಿಟ್ಟರು.

ಧೂಡಾ ಹರಿಹರಕ್ಕೆ ಅನುದಾನ ಬಿಡುಗಡೆಯಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಜಿಲ್ಲೆಯಲ್ಲಿ ದಾವಣಗೆರೆ ನಂತರ ದೊಡ್ಡ ನಗರವಾಗಿರುವ ಹರಿಹರದ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕೆಂದು ಜಯ ಕರ್ನಾಟಕ ಸಂಘಟನೆಯ ಎಸ್.ಗೋವಿಂದ ಹೇಳಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ್ ಎನ್. ಅಧ್ಯಕ್ಷತೆ ವಹಿಸಿದ್ದರು. ಪ್ರಭಾರಿ ಪೌರಾಯುಕ್ತ ವಿನಯ್ ಕುಮಾರ್, ಕಚೇರಿ ವ್ಯವಸ್ಥಾಪಕ ಏಕನಾಥ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.