ADVERTISEMENT

ಹರಿಹರದಲ್ಲಿ ಚಿರತೆ ಪ್ರತ್ಯಕ್ಷ: ಮೂಡಿದ ಆತಂಕ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 7:38 IST
Last Updated 11 ಫೆಬ್ರುವರಿ 2026, 7:38 IST
ಹರಿಹರದಲ್ಲಿ ಶಾಸಕ ಬಿ.ಪಿ. ಹರೀಶ್ ಅವರು ಚಿರತೆ ಸಂಚಾರ ಮಾಡಿದೆ ಎನ್ನಲಾದ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿದ ನಂತರ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು
ಹರಿಹರದಲ್ಲಿ ಶಾಸಕ ಬಿ.ಪಿ. ಹರೀಶ್ ಅವರು ಚಿರತೆ ಸಂಚಾರ ಮಾಡಿದೆ ಎನ್ನಲಾದ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿದ ನಂತರ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು   

ಹರಿಹರ: ನಗರದ ತುಂಗಭದ್ರಾ ನದಿ ಬಳಿಯ ಜೋಡು ಬಸವೇಶ್ವರ ದೇವಸ್ಥಾನ, ಕಿಮ್ಸ್ ಕಾಲೇಜ್ ಹಾಗೂ ಕಿರ್ಲೋಸ್ಕರ್ ಕಾಲೊನಿ ಆವರಣದಲ್ಲಿ ಸೋಮವಾರ ತಡರಾತ್ರಿ ಚಿರತೆಯೊಂದು ಓಡಾಡಿದೆ ಎಂಬ ಸುದ್ದಿ ನಗರಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿತು.

ರಾತ್ರಿ 11ರ ಹೊತ್ತಿಗೆ ಕಿರ್ಲೋಸ್ಕರ್ ಸ್ಟಾಫ್ ಕಾಲೊನಿಯ ಮನೆಯೊಂದರ ಮೇಲ್ಭಾಗದಿಂದ ಪ್ರಾಣಿಯೊಂದು ಪಕ್ಕಕ್ಕೆ ಜಿಗಿದ ಶಬ್ದ ಕೇಳಿಬಂದಿದೆ. ಆತಂಕಗೊಂಡ ನಿವಾಸಿಗಳು ಬೆಳಿಗ್ಗೆ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ, ಚಿರತೆಯ ಹೆಜ್ಜೆ ಗುರುತುಗಳ ದರ್ಶನವಾಗಿದೆ ಎಂದು ಹೇಳಲಾಗಿದೆ.

ಇದು ಸ್ಥಳೀಯರ ನಿದ್ದೆಗೆಡಿಸಿದೆ. ಅಷ್ಟೇ ಅಲ್ಲದೆ, ಸಂಜೆ ವೇಳೆ ರೈಲ್ವೆ ಹಳಿಗಳ ಬಳಿಯೂ ಚಿರತೆ ಓಡಾಡುತ್ತಿರುವುದನ್ನು ಬಾಲಕನೊಬ್ಬ ನೋಡಿದ್ದಾನೆ ಎಂಬ ಮಾಹಿತಿ ಹರಿದಾಡುತ್ತಿದ್ದು, ಆತಂಕ ಇಮ್ಮಡಿಗೊಳಿಸಿದೆ.

ADVERTISEMENT

ಚಿರತೆಯ ವಿಡಿಯೊ ವೈರಲ್ ಆಗುತ್ತಿದ್ದಂತೆಯೇ ಶಾಸಕ ಬಿ.ಪಿ.ಹರೀಶ್ ಚಿರತೆ ಸಂಚಾರ ಮಾಡಿದೆ ಎನ್ನಲಾದ ಪ್ರದೇಶಗಳಿಗೆ ಭೇಟಿ ನೀಡಿದರು. ಅರಣ್ಯ ಇಲಾಖೆಯ ಉಪ ಆರ್‌ಎಫ್‌ಒ ಮೊಹ್ಮದ್ ಖಾಲಿದ್ ಮುಸ್ತಫಾ ಹಾಗೂ ನಗರಸಭೆ ಆಯುಕ್ತ ವಿನಯ್ ಕುಮಾರ್ ಅವರೊಂದಿಗೆ ಸ್ಥಳೀಯರಿಂದ ಮಾಹಿತಿ ಪಡೆದ ಶಾಸಕರು ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ವೀಕ್ಷಿಸಿದರು.

ಪರಿಸ್ಥಿತಿಯನ್ನು ಅವಲೋಕಿಸಿದ ಶಾಸಕರು, ಅರಣ್ಯ ಇಲಾಖೆಗೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ಅರಣ್ಯ ಇಲಾಖೆ ಚಿರತೆಯನ್ನು ಸೆರೆಹಿಡಿಯಲು ಬೋನು ಇಡುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಜನರು ವದಂತಿಗಳಿಗೆ ಕಿವಿಗೊಡದೆ ಆಡಳಿತದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ರಾಘವೇಂದ್ರ ದೀಕ್ಷಿತ್, ಮಂಜಣ್ಣ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಸದ್ಯಕ್ಕೆ ಹರಿಹರದ ತುಂಗಭದ್ರಾ ನದಿ ತೀರದಲ್ಲಿ ಅರಣ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಜನರು ಎಚ್ಚರಿಕೆಯಿಂದ ಸಂಚರಿಸಲು ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.