ADVERTISEMENT

ಹರಿಹರ: ಮನುವಾದಿಗಳಿಂದ ಸಂವಿಧಾನಕ್ಕೆ ಅಪಾಯ

‘ಎದ್ದೇಳು ಕರ್ನಾಟಕ’ ಸಂಘಟನೆಯ ಮುಖಂಡ ಅನೀಸ್ ಪಾಷಾ ಆತಂಕ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 7:48 IST
Last Updated 26 ಆಗಸ್ಟ್ 2025, 7:48 IST
ಹರಿಹರದಲ್ಲಿ ಭಾನುವಾರ ‘ಎದ್ದೇಳು ಕರ್ನಾಟಕ’ ಸಂಘಟನೆಯಿಂದ ಸಮಾನ ಮನಸ್ಕರ ಸಭೆ ನಡೆಯಿತು
ಹರಿಹರದಲ್ಲಿ ಭಾನುವಾರ ‘ಎದ್ದೇಳು ಕರ್ನಾಟಕ’ ಸಂಘಟನೆಯಿಂದ ಸಮಾನ ಮನಸ್ಕರ ಸಭೆ ನಡೆಯಿತು   

ಹರಿಹರ: ‘ದೇಶದ ಸಂವಿಧಾನಕ್ಕೆ ಮನುವಾದಿಗಳಿಂದ ಆಪತ್ತು ಎದುರಾಗಿದೆ’ ಎಂದು ‘ಎದ್ದೇಳು ಕರ್ನಾಟಕ’ ಸಂಘಟನೆಯ ಮುಖಂಡ ಅನೀಸ್ ಪಾಷಾ ಆತಂಕ ವ್ಯಕ್ತಪಡಿಸಿದರು. 

‘ಸಂವಿಧಾನ ರಕ್ಷಣಾ ಪಡೆ’ ರಚಿಸುವ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಮಾತನಾಡಿದರು. 

‘ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾದರೆ ದೇಶದ ಶೋಷಿತರು ಹಾಗೂ ಮಹಿಳೆಯರ ಹಕ್ಕುಗಳಿಗೆ ಘಾಸಿಯಾಗುವ ಅಪಾಯವಿದೆ. ಬಿಜೆಪಿ ಹಾಗೂ ಅದರ ಸಹ ಸಂಘಟನೆಗಳ ಮುಖಂಡರು ಸಂವಿಧಾನ ಬದಲಿಸುವ ಮಾತನ್ನು ಹೇಳುತ್ತಿರುವುದು ಆತಂಕ ಮೂಡಿಸಿದೆ’ ಎಂದು ಹೇಳಿದರು. 

ADVERTISEMENT

‘ಸಂವಿಧಾನ ರಕ್ಷಣಾ ಪಡೆಯನ್ನು ರಾಜ್ಯದ ಎಲ್ಲಾ ತಾಲ್ಲೂಕು, ಜಿಲ್ಲೆಗಳಲ್ಲಿ ರಚಿಸಲಾಗುತ್ತಿದೆ. ಪ್ರಜ್ಞಾವಂತರು ಈ ಪಡೆಗೆ ಶಕ್ತಿ ತುಂಬಬೇಕು’ ಎಂದರು. 

ವಿವಿಧ ಧರ್ಮಗಳಿಗೆ ಒಂದೊಂದು ಧರ್ಮಗ್ರಂಥ ಇರುವಂತೆಯೇ ಸಂವಿಧಾನವು ಭಾರತೀಯರ ಧರ್ಮಗ್ರಂಥವಾಗಿದೆ ಎಂದು ಎದ್ದೇಳು ಕರ್ನಾಟಕ ಸಂಘಟನೆಯ ಮುಖಂಡ ಜೆ.ಯಾದವರೆಡ್ಡಿ ಹೇಳಿದರು. 

‘ಅಸಂಖ್ಯಾತ ಜಾತಿ, ಜನಾಂಗ, ಧರ್ಮ, ಸಂಸ್ಕೃತಿ, ಪರಂಪರೆಯ ಜನರನ್ನು ಹೊಂದಿರುವ ಜಗತ್ತಿನ ಬೃಹತ್ ರಾಷ್ಟ್ರ ಎನಿಸಿದ ಭಾರತಕ್ಕೆ ಸಂವಿಧಾನವೇ ಮೂಲ ಆಧಾರವಾಗಿದೆ. ಅದರ ರಕ್ಷಣೆಗೆ ಎಲ್ಲರೂ ಕೈ ಜೋಡಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಮುರುಗೇಶಪ್ಪ ಅಭಿಪ್ರಾಯಪಟ್ಟರು. 

‘ಸಂವಿಧಾನದ ತಿರುಳನ್ನು ಜನಸಾಮಾನ್ಯರಿಗೆ ತಿಳಿಸುವ ಉದ್ದೇಶದಿಂದ ಕೈಪಿಡಿಯನ್ನು ಪ್ರಕಟಿಸಿ, ಹಂಚಿಕೆ ಮಾಡಿ ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಬಿ.ಮಗ್ದುಮ್ ಹೇಳಿದರು. 

ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಚನ್ನಗಿರಿಯ ಟಿ.ರುದ್ರಪ್ಪ, ತಿಪ್ಪಣ್ಣ ಕತ್ತಲಗೆರೆ, ವೈ.ಮಲ್ಲಿನಾಥ, ಬಿಎಸ್‌ಪಿ ಮುಖಂಡ ಡಿ.ಹನುಮಂತಪ್ಪ, ಭಾಗ್ಯದೇವಿ, ಜಮೀಲಾಬಿ, ದೇವೇಂದ್ರಪ್ಪ, ಎಂ.ಕೃಷ್ಣ, ಪ್ರೀತಮ್ ಬಾಬು, ರಿಯಾಜ್ ಖಾದ್ರಿ, ಡಾ.ಮೊಹಮ್ಮದ್ ಇಸಾಕ್, ನಿಂಗಪ್ಪ, ಮೊಹಮ್ಮದ್ ಶಾಹೀದ್, ಮೊಹಮ್ಮದ್ ಅಶ್ಫಾಖ್, ಪಿ.ಪಕ್ಕೀರಪ್ಪ ಹಾಗೂ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.