ADVERTISEMENT

ಹರಿಹರಕ್ಕೆ ಬೇಕಿದೆ ಸಿಸಿಟಿವಿ ಕ್ಯಾಮೆರಾ ಕಣ್ಣು

ಜಿಲ್ಲೆಯ ಎರಡನೇ ದೊಡ್ಡ ನಗರ ಹರಿಹರ: ಪೊಲೀಸರಿಗೆ ಅಪರಾಧ ಪತ್ತೆ ಸವಾಲು

ಇನಾಯತ್ ಉಲ್ಲಾ ಟಿ.
Published 12 ಮಾರ್ಚ್ 2023, 5:51 IST
Last Updated 12 ಮಾರ್ಚ್ 2023, 5:51 IST
ಹರಿಹರದ ಪ್ರಮುಖ ಗಾಂಧಿ ವೃತ್ತದಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಇಲ್ಲದಿರುವುದು (ಎಡಚಿತ್ರ). ಗಾಂಧಿ ವೃತ್ತದಲ್ಲಿ ಕಿರಿದಾಗಿರುವ ಟ್ರಾಫಿಕ್ ಸಿಗ್ನಲ್
ಹರಿಹರದ ಪ್ರಮುಖ ಗಾಂಧಿ ವೃತ್ತದಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಇಲ್ಲದಿರುವುದು (ಎಡಚಿತ್ರ). ಗಾಂಧಿ ವೃತ್ತದಲ್ಲಿ ಕಿರಿದಾಗಿರುವ ಟ್ರಾಫಿಕ್ ಸಿಗ್ನಲ್   

ಹರಿಹರ: ಕಳ್ಳತನ, ಕೊಲೆ, ಅಪಘಾತ, ಮಹಿಳಾ ದೌರ್ಜನ್ಯದ ಆರೋಪಿಗಳನ್ನು ಸೆರೆಹಿಡಿಯಲು ಅನುಕೂಲವಾಗುವ ಸಿಸಿಟಿವಿ ಕ್ಯಾಮೆರಾಗಳು ಪಟ್ಟಣದಲ್ಲಿ ಕಾಣಸಿಗುವುದಿಲ್ಲ.

ಹೆದ್ದಾರಿಯೇ ಇರಲಿ, ನಗರ, ಪಟ್ಟಣದ ಒಂದು ಓಣಿಯ ರಸ್ತೆಯೇ ಇರಲಿ ಎಲ್ಲೆಡೆಯೂ ಸುರಕ್ಷತೆ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾ ಅಗತ್ಯವಾಗಿ ಬೇಕು. ಆದರೆ, ಜಿಲ್ಲೆಯ 2ನೇ ದೊಡ್ಡ ನಗರವಾದ ಹರಿಹರದಲ್ಲಿ ಮಾತ್ರ ಸಿಸಿಟಿವಿ ಕ್ಯಾಮೆರಾ ಇಲ್ಲ.

ದಿನಕ್ಕೆ ಇಲ್ಲಿನ ಬಸ್‌ ನಿಲ್ದಾಣಕ್ಕೆ 1,400 ಬಸ್‌ಗಳು ಬಂದು ಹೋಗುತ್ತವೆ. ಬೀರೂರು– ಸಮ್ಮಸಗಿ ಹೆದ್ದಾರಿ, ಹೊಸಪೇಟೆ– ಶಿವಮೊಗ್ಗ ಹೆದ್ದಾರಿ ನಗರದೊಳಗಿನಿಂದ ಹಾದು ಹೋಗಿವೆ. ಭೌಗೋಳಿಕವಾಗಿ ರಾಜ್ಯದ ಮಧ್ಯಭಾಗದ ನಗರದಲ್ಲಿ ಹತ್ತಾರು ವಿದ್ಯಾಸಂಸ್ಥೆಗಳಲ್ಲಿ ಏಳೆಂಟು ಸಾವಿರ ವಿದ್ಯಾರ್ಥಿಗಳಿದ್ದಾರೆ. ಮರಳು, ಮಣ್ಣು ಗಣಿಗಾರಿಕೆಯ ಊರಿದು. ಆದರೆ ಭದ್ರತೆ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾಗಳೇ ಕಾಣಸಿಗುವುದಿಲ್ಲ. ಇದಕ್ಕೆ ನಗರಸಭೆಯ ನಿರ್ಲಕ್ಷ್ಯ ಸಾಕ್ಷಿ ಎಂದು ದೂರುತ್ತಾರೆ ಸ್ಥಳೀಯರು.

ADVERTISEMENT

ಸಾರ್ವಜನಿಕರ, ಪೊಲೀಸ್ ಇಲಾಖೆಯವರ ಒತ್ತಡ ಬಂದಾಗ ಹಲವು ವರ್ಷಗಳ ಹಿಂದೆ ನಗರದ ಆಯಕಟ್ಟಿನ 31 ಸ್ಥಳಗಳಲ್ಲಿ ನಗರಸಭೆ
ಯಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಆದರೆ ದುರಾದೃಷ್ಟಕ್ಕೆ ಅವು ಕೆಲವು ತಿಂಗಳಲ್ಲೇ ಕಣ್ಣು ಮುಚ್ಚಿದವು. ಅದನ್ನು ನಿರ್ವಹಣೆ ಮಾಡುವ ಗೋಜಿಗೆ ಯಾರೂ ಹೋಗಿಲ್ಲ ಎಂದು ದೂರುತ್ತಾರೆ ಲೇಖಕ ಕಲೀಂ ಬಾಷಾ.

ಈಗ ನಗರದಲ್ಲಿ ಇರುವುದು ಕೇವಲ ನಾಲ್ಕು ಕ್ಯಾಮೆರಾಗಳು. ಬಸ್ ನಿಲ್ದಾಣ, ಬೈಪಾಸ್, ನಾಡಬಂದ್ ಷಾವಲಿ ಮಕಾನ್ ಮತ್ತು ಎ.ಕೆ.ಕಾಲೊನಿ ಬಳಿ. ಉಳಿದ 27 ಕಡೆಯ ಸಿಸಿಟಿವಿ ಕ್ಯಾಮೆರಾಗಳು ಸ್ಥಗಿತವಾಗಿವೆ.

ಕೊಲೆ ಆರೋಪಿ ಬಂಧನಕ್ಕೆ ಸಿಸಿಟಿವಿ ಕ್ಯಾಮೆರಾ ಕಾರಣ: ಹರಿಹರದಲ್ಲಿ ಒಂದು ವರ್ಷದ ಹಿಂದೆ ಅಂಗಡಿಗಳ ಮುಂದೆ ಮಲಗಿದವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಗಾಯಗೊಳಿಸುವ, ಕೊಲೆ ಮಾಡುವ ಗ್ಯಾಂಗ್ ಕ್ರಿಯಾಶೀಲವಾಗಿತ್ತು. ಪೊಲೀಸರಿಗೆ ತಲೆ ನೋವಾಗಿದ್ದ ಆ ಗ್ಯಾಂಗ್‌ನ ಪ್ರಮುಖ ಆರೋಪಿಯನ್ನು ಬಂಧಿಸಲು ಸಹಾಯ ಮಾಡಿದ್ದು ಎ.ಕೆ.ಕಾಲೊನಿ ಬಳಿಯ ಸಿ.ಸಿ.ಟಿ.ವಿ ಕ್ಯಾಮೆರಾ.

ಮೂರ‍್ನಾಲ್ಕು ವರ್ಷಗಳಿಂದ ನಗರ ಮತ್ತು ಹೊರವಲಯದಲ್ಲಿ ಬೈಕ್, ಸೈಕಲ್ ಕಳವು ಪ್ರಕರಣಗಳು ನೂರಾರು ನಡೆದಿವೆ. ಬೈಕ್ ಕಳ್ಳತನ ನಡೆಯುತ್ತಲೇ ಇವೆ. ಬೈಕ್ ಕಳ್ಳರನ್ನು ಹಿಡಿಯುವುದು ಪೊಲೀಸರಿಗೂ ಸವಾಲಾಗಿದೆ.

‘ಇಷ್ಟೊಂದು ಮಹತ್ವದ ಸಿ.ಸಿ.ಟಿ.ವಿ ಕ್ಯಾಮೆರಾಗಳ ಅಳವಡಿಕೆ ನಿರ್ವಹಣೆಗೆ ನಗರಸಭೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಏಕೆ ನಿರ್ಲಕ್ಷ್ಯ ವಹಿಸಿದ್ದಾರೋ ತಿಳಿಯದಾಗಿದೆ. ಹೊಸ ಬಡಾವಣೆಗಳ ಮೂಲಕ ದಿನ, ದಿನಕ್ಕೂ ವಿಸ್ತಾರಗೊಳ್ಳುತ್ತಿರುವ ಹರಿಹರದಲ್ಲಿ ಕನಿಷ್ಠ 100 ಗುಣಮಟ್ಟದ ಕ್ಯಾಮೆರಾಗಳ ಅಳವಡಿಸುವ ಅಗತ್ಯವಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಈ ಬಗ್ಗೆ ನಗರಸಭೆ ಸಭೆಯಲ್ಲಿ ಚರ್ಚೆಯಾಗಿದ್ದರೂ ಪ್ರಯೋಜನವಾಗಿಲ್ಲ. ನಗರದಲ್ಲಿ 100 ಕಡೆ ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್, ಮುಖ್ಯ ರಸ್ತೆಗಳಲ್ಲಿ ಫುಟ್‌ಪಾತ್ ಕಾಮಗಾರಿಗೆ ಅನುದಾನ ಮೀಸಲಿಡಬೇಕು ಎಂಬುದು ನಿವಾಸಿಗಳ ಒತ್ತಾಯ.

ಈ ಬಾರಿ ಸಿ.ಸಿ.ಟಿ.ವಿ ಕ್ಯಾಮೆರಾಗಳಿಗೆ ಹೆಚ್ಚಿನ ಅನುದಾನ ಮೀಸಲಿಡಲು ಪ್ರಯತ್ನಿಸುತ್ತೇವೆ.
ಬಸವರಾಜ್ ಐಗೂರು, ನಗರಸಭೆ ಪೌರಾಯುಕ್ತ

ಬೈಕ್, ಸೈಕಲ್, ಮನೆಗಳ್ಳತನ ಪ್ರಕರಣಗಳ ನಿಯಂತ್ರಣ, ಮಹಿಳೆಯರ ಸುರಕ್ಷತೆಗೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಅತ್ಯಗತ್ಯ. ಜನರ ಸುರಕ್ಷತೆಗೆ ನಗರಸಭೆಯವರು ಆದ್ಯತೆ ನೀಡಬೇಕು.

ಜೆ.ಕಲೀಂ ಬಾಷಾ, ಲೇಖಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.