ಹರಿಹರ: ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖಾಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಗುತ್ತಿರುವ ತೊಂದರೆ ಬಗ್ಗೆ ಅಧಿಕಾರಿಗಳನ್ನು ರೈತರು ತರಾಟೆ ತೆಗೆದುಕೊಂಡರು.
‘ಭೂ ಮಾಪನಾ ಇಲಾಖೆಯಲ್ಲಿ ಫೋಡು ಪ್ರಕ್ರಿಯೆ ಮಾಡುವಾಗ ಜಮೀನಿನ ರೈತರ ಹೆಸರನ್ನು ತಪ್ಪಾಗಿ ಬರೆಯುವುದು, ಏಕ ವ್ಯಕ್ತಿ ಪಹಣಿಯನ್ನು ಜಂಟಿ ಪಹಣಿಯಾಗಿಸಲಾಗುತ್ತಿದೆ. ಇದನ್ನು ಸರಪಡಿಸಲು ಹೇಳಿದರೆ ಎಸಿ ಕೋರ್ಟ್, ಡಿಸಿ ಕೋರ್ಟ್, ಭೂಮಾಪನಾ ಡಿಡಿ ಕೋರ್ಟ್‌ನಲ್ಲಿ ಇತ್ಯರ್ಥ ಪಡಿಸಿಕೊಳ್ಳಿ ಎಂಬ ಉತ್ತರವನ್ನು ನೀಡುವುದು ಸರಿಯೇ’ ಎಂದು ರೈತ ಸಂಘದ ಪದಾಧಿಕಾರಿಗಳು ಪ್ರಶ್ನಿಸಿದರು.
‘ಭೂಮಾಪನಾ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಮಾಡಿದ ತಪ್ಪಿಗೆ ಕೇಸು ಹಾಕಿ ವರ್ಷಗಟ್ಟಲೆ ಅಲೆಯುವ ಶಿಕ್ಷೆ ರೈತರಿಗೆ ಏಕೆ ನೀಡುತ್ತೀರಿ, ರೈತರು ಬದುಕು ನಡೆಸುವುದೇ ಕಷ್ಟವಾಗಿರುವಾಗ ವಕೀಲರಿಗೆ ಶುಲ್ಕ ನೀಡಿ ಕೇಸುಗಳನ್ನು ಹೇಗೆ ನಡೆಸುವುದು’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
‘ಇಲ್ಲಿನ ಎಪಿಎಂಸಿಯಲ್ಲಿ ರೈತರು ಬೆಳೆದ ಬೆಳೆಯ ಒಂದು ಚೀಲಕ್ಕೆ 2 ಕೆ.ಜಿ. ಕಡಿಮೆ ದಾಖಲಿಸಲಾಗುತ್ತಿದೆ, ಯಾವ ಲೆಕ್ಕದಲ್ಲಿ 2 ಕೆ.ಜಿ. ಕಡಿಮೆಗೊಳಿಸಲಾಗುತ್ತಿದೆ, ಇಂದಿನ ಸಭೆಗೆ ಎಪಿಎಂಸಿಯ ಗುತ್ತಿಗೆ ಆಧಾರಿತ ಸಿಬ್ಬಂದಿಯನ್ನು ಕಳಿಸಿದ್ದಾರೆ, ಅವರು ನಮ್ಮ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಾರೆಯೇ’ ಎಂದು ರೈತರು ಪ್ರಶ್ನಿಸಿದರು.
ಎಪಿಎಂಸಿ, ಭೂಮಾಪನಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಸಮಸ್ಯೆಗಳ ಬಗ್ಗೆ ರೈತರು ಪ್ರಸ್ತಾಪಿಸಿದ ವಿಷಯಗಳಿಗೆ ಉತ್ತರಿಸಲು ಅಧಿಕಾರಿಗಳು ತಡಕಾಡಿದರು. ನಂತರ ತಹಶೀಲ್ದಾರ್ ಗುರುಬಸವರಾಜ್ ಮಾತನಾಡಿ, ರೈತರು ಪ್ರಸ್ತಾಪಿಸಿದ ಸಮಸ್ಯೆಗಳನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಆರಂಭದಿಂದ ಕೊನೆಯವರೆಗೂ ಸಭೆಯಲ್ಲಿ ಗದ್ದಲದ ವಾತಾವರಣವಿತ್ತು. ತಾರ್ಕಿಕ ಹಂತ ತಲುಪದೇ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
ಭೂಮಾಪನ ಇಲಾಖೆ ಪ್ರಭಾರ ಜಿಲ್ಲಾ ಉಪ ನಿರ್ದೇಶಕಿ ಕಸ್ತೂರಿ, ತಹಶೀಲ್ದಾರ್ ಇಒ ಎಸ್.ಪಿ. ಸುಮಲತಾ, ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ ನಾಗಭೂಷಣ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹಾಳೂರ್ ನಾಗರಾಜ್, ತಾಲ್ಲೂಕು ಘಟಕ ಅಧ್ಯಕ್ಷ ಎಚ್.ಪಿ.ಬಸವರಾಜಪ್ಪ ಹಲಸುಬಾಳು, ಕಾರ್ಯದರ್ಶಿ ರಾಘವೇಂದ್ರ, ಪದಾಧಿಕಾರಿಗಳಾದ ಎನ್.ತಿಪ್ಪೇಸ್ವಾಮಿ, ಕೆಂಚನಹಳ್ಳಿ ಶೇಖರಪ್ಪ, ಗೋವಿನಹಾಳು ಗದಿಗೆಪ್ಪ, ಹನಗವಾಡಿ ರುದ್ರಮುನಿ, ಕುಂಬಳೂರು ಅಂಜಿನಪ್ಪ, ಭಾನುವಳ್ಳಿ ಪರಮೇಶ್ವರಪ್ಪ, ಜಿಗಳಿ ಸಿದ್ದನಗೌಡರು, ನಂದಿತಾವರೆ ಶಂಭುಲಿಂಗಪ್ಪ, ಬುಳ್ಳಾಪುರ ಸಂಗಪ್ಪ, ವಿಜಯಪ್ಪ, ಹಾಲಿವಾಣ ವೀರಪ್ಪ, ರಂಗಪ್ಪ, ಹಲಸುಬಾಳು ಸುರೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.