ADVERTISEMENT

ಹರಿಹರದಲ್ಲಿ ಮಳೆ ಬಂದರೆ ಸಂಚಾರ ಸಂಕಟ: ಹಲವೆಡೆ ಚರಂಡಿಯೇ ಇಲ್ಲ

ಕೆಲವೆಡೆ ಚರಂಡಿ ಹೂಳು ತೆಗೆದಿಲ್ಲ

ಇನಾಯತ್ ಉಲ್ಲಾ ಟಿ.
Published 10 ಆಗಸ್ಟ್ 2025, 2:07 IST
Last Updated 10 ಆಗಸ್ಟ್ 2025, 2:07 IST
ಹರಿಹರದ ಹಳೆ ಪಿ.ಬಿ.ರಸ್ತೆ ಹಾಗೂ ಫುಟ್‌ಪಾತ್‌ ಮೇಲೆ ಶನಿವಾರ ಹಳ್ಳದ ರೂಪದಲ್ಲಿ ಹರಿದ ಮಳೆ ನೀರು
ಹರಿಹರದ ಹಳೆ ಪಿ.ಬಿ.ರಸ್ತೆ ಹಾಗೂ ಫುಟ್‌ಪಾತ್‌ ಮೇಲೆ ಶನಿವಾರ ಹಳ್ಳದ ರೂಪದಲ್ಲಿ ಹರಿದ ಮಳೆ ನೀರು   

ಹರಿಹರ: ನಗರದಲ್ಲಿ ಶನಿವಾರ ಸಂಜೆ ಒಂದು ಗಂಟೆಗೂ ಹೆಚ್ಚು ಅವಧಿ ಬಿರುಸಿನ ಮಳೆ ಸುರಿಯಿತು. ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ಮಳೆ ನೀರು ಹಲವು ರಸ್ತೆಗಳಲ್ಲಿ ಹಳ್ಳದ ರೂಪದಲ್ಲಿ ಹರಿದು ಜನರು ಹಾಗೂ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ದಾವಣಗೆರೆ ಮಾರ್ಗದ ಫ್ಲೈ ಓವರ್‌ನಿಂದ ರಾಘವೇಂದ್ರ ಮಠದವರೆಗೆ ಹಳೆ ಪಿ.ಬಿ. ರಸ್ತೆಯ ಇಕ್ಕೆಲದ ಬಹುತೇಕ ಕಡೆ ಮಳೆ ನೀರಿನ ಚರಂಡಿಗಳು ಇಲ್ಲ. ಈ ರಸ್ತೆ ಒಂದೂವರೆ ಕಿ.ಮೀ ಉದ್ದವಿದ್ದು, ಈ ಪೈಕಿ ಜಯಶ್ರೀ ಟಾಕೀಸ್ ಮುಂಭಾಗ ಹಾಗೂ ಗಾಂಧಿ ಸರ್ಕಲ್‌ನಿಂದ ಲಕ್ಷ್ಮಿ ಕಲ್ಯಾಣ ಮಂಟಪದವರೆಗೆ ಮಾತ್ರ ಬಾಕ್ಸ್ ಚರಂಡಿಯಿದ್ದು, ಉಳಿದ ಒಂದು ಕಿ.ಮೀ. ಉದ್ದಕ್ಕೆ ಇದ್ದ ಹಳೆಯ ಚರಂಡಿ ಮುಚ್ಚಿ ಹೋಗಿದೆ.

ಈ ರಸ್ತೆಯಲ್ಲಿರುವ ಎಸ್‌ಜೆವಿಪಿ ಕಾಲೇಜು, ಯಮಹಾ ಶೋರೂಂ, ಜಿ-7 ಸೂಪರ್ ಮಾರ್ಕೆಟ್, ಬಿಎಸ್‌ಎನ್‌ಎಲ್ ಕಚೇರಿ, ನಗರಸಭೆ ಮುಂಭಾಗ, ಶುಭೋದಯ ನರ್ಸಿಂಗ್ ಹೋಂ, ಗಾಂಧಿ ಮೈದಾನದ ಎದುರು ಪ್ರದೇಶದಲ್ಲಿ ಮಳೆಯಾದರೆ, ಇಡೀ ರಸ್ತೆ ಹಾಗೂ ಫುಟ್‌ಪಾತ್‌ಗಳು ಜಲಾವೃತ ಆಗುತ್ತವೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. 

ADVERTISEMENT

2014ರಲ್ಲಿ ಹಳೆ ಪಿ.ಬಿ.ರಸ್ತೆ ಅಭಿವೃದ್ಧಿ ಪಡಿಸಿ ಸಿ.ಸಿ. ರಸ್ತೆ ಮಾಡಿದ ಸಮಯದಲ್ಲೇ ರಸ್ತೆ ಇಕ್ಕೆಲಗಳಲ್ಲಿ ಚರಂಡಿಯನ್ನೂ ನಿರ್ಮಿಸಬೇಕಿತ್ತು. ಆದರೆ ಆ ಕೆಲಸ ಈವರೆಗೆ ಆಗದೇ ಒಂದು ದಶಕವೇ ಕಳೆದಿದ್ದು, ನಗರದ ನಾಗರಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಅರ್ಧಗಂಟೆ ಮಳೆ ಬಂದರೂ ಒಂದು ಕಿ.ಮೀ. ಉದ್ದಕ್ಕೆ ಇರುವ ವಿವಿಧ ಅಂಗಡಿ, ಬ್ಯಾಂಕ್, ಕಚೇರಿಗಳಿಗೆ ಹೋಗಿ ಬರುವುದು ದುಸ್ತರವಾಗುತ್ತದೆ. ರಸ್ತೆಯಲ್ಲಿ ಲಘು ವಾಹನಗಳನ್ನು ಓಡಿಸುವುದು ಕಷ್ಟವಾಗುತ್ತದೆ ಎಂದು ಜನರು ಬೇಸರ ವ್ಯಕ್ತಪಡಿಸಿದರು.

ಇನ್ನು, ಹರಪನಹಳ್ಳಿ ಮಾರ್ಗದ ರೈಲ್ವೆ ಅಂಡರ್ ಬ್ರಿಡ್ಜ್ ಕೂಡ ಜಲಾವೃತವಾಗುತ್ತದೆ. ಬಿಡ್ಕ್‌ ಇಕ್ಕೆಲಗಳಲ್ಲಿ ಚರಂಡಿ ಇದೆಯಾದರೂ ಅದರಲ್ಲಿ ಕಸ, ಹೂಳು ತುಂಬಿಕೊಂಡಿರುವ ಕಾರಣ, ಮಳೆ ನೀರು ಅದರಲ್ಲಿ ಹರಿಯಲು ಆಸ್ಪದವೇ ಇಲ್ಲ. ಬ್ರಿಡ್ಜ್ ಮಧ್ಯಭಾಗದಲ್ಲಿ 2ರಿಂದ 3 ಅಡಿಯಷ್ಟು ಎತ್ತರಕ್ಕೆ ನೀರು ನಿಲ್ಲುತ್ತದೆ. ಈ ನೀರು ಖಾಲಿಯಾಗಲು ಮೂರು ದಿನ ಸಮಯ ಹಿಡಿಯುತ್ತದೆ. 

ನಗರದ ಉತ್ತರ ಭಾಗದಲ್ಲಿರುವ ಪ್ರಮುಖ ಶಾಲಾ, ಕಾಲೇಜುಗಳಿಗೆ ನಿತ್ಯ ಈ ಬ್ರಿಡ್ಜ್ ಮೂಲಕ ಮೂರು ಸಾವಿರ ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಮಳೆಗಾಲದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬರುವವರೆಗೂ ಪಾಲಕರು ಆತಂಕದಲ್ಲೇ ಇರುವ ಸ್ಥಿತಿಯಿದೆ ಎಂದು ಸ್ಥಳೀಯರು ಹೇಳಿದರು. 

ಹರಿಹರದ ಹರಪನಹಳ್ಳಿ ಮಾರ್ಗದ ರೈಲ್ವೆ ಅಂಡರ್ ಪಾಸ್‌ನಲ್ಲಿ ಚರಂಡಿಯಲ್ಲಿ ತ್ಯಾಜ್ಯ ತುಂಬಿರುವ ಕಾರಣ ರಸ್ತೆ ಜಲಾವೃತವಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿರುವುದು
ಎರಡು ವರ್ಷ ಇದ್ದು ಹೋಗುವ ನಮಗೇಕೆ ಚರಂಡಿ ಉಸಾಬರಿ ಎಂಬ ಧೋರಣೆ ಅಧಿಕಾರಿಗಳದ್ದು. ಚರಂಡಿ ಸರಿ ಇಲ್ಲದ್ದರಿಂದ ಕೋಟ್ಯಂತರ ರೂ. ವೆಚ್ಚದ ರಸ್ತೆಗಳು ಹಾಳಾಗುತ್ತಿವೆ.
– ಪ್ರೀತಂ ಬಾಬು, ಕರವೇ ಪ್ರವೀಣ್ ಶೆಟ್ಟಿ ಬಣದ ನಗರ ಘಟಕದ ಅಧ್ಯಕ್ಷ 
ಕೆಲವು ಕಟ್ಟಡ ಮಾಲೀಕರು ಕೋರ್ಟ್ ಮೆಟ್ಟಿಲು ಹತ್ತಿದ್ದರಿಂದ ಪಿ.ಬಿ.ರಸ್ತೆಯಲ್ಲಿ ಚರಂಡಿ ಕಾಮಗಾರಿ ಸ್ಥಗಿತವಾಗಿದೆ. ರೈಲ್ವೆ ಅಂಡರ್ ಬ್ರಿಡ್ಜ್ ಚರಂಡಿಗಳ ಹೂಳು ತೆಗೆಸಿ ಸಮಸ್ಯೆ ಪರಿಹರಿಸುತ್ತೇವೆ.
– ಕವಿತಾ ಮಾರುತಿ, ಬೇಡರ್ ನಗರಸಭೆ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.