ADVERTISEMENT

ಉಕ್ಕಡಗಾತ್ರಿ: ಕಾರ್ತಿಕ, ಪಾಲಿಕೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 5:22 IST
Last Updated 26 ನವೆಂಬರ್ 2025, 5:22 IST
ಕಡರನಾಯ್ಕನಹಳ್ಳಿ ಸಮೀಪದ ಉಕ್ಕಡಗಾತ್ರಿ ಗ್ರಾಮದಲ್ಲಿ ಅಜ್ಜಯ್ಯನ ಕಾರ್ತಿಕೋತ್ಸವ ಮತ್ತು ಪಾಲಿಕೋತ್ಸವ ವಿಜೃಂಭಣೆಯಿಂದ ನಡೆಯಿತು
ಕಡರನಾಯ್ಕನಹಳ್ಳಿ ಸಮೀಪದ ಉಕ್ಕಡಗಾತ್ರಿ ಗ್ರಾಮದಲ್ಲಿ ಅಜ್ಜಯ್ಯನ ಕಾರ್ತಿಕೋತ್ಸವ ಮತ್ತು ಪಾಲಿಕೋತ್ಸವ ವಿಜೃಂಭಣೆಯಿಂದ ನಡೆಯಿತು   

ಕಡರನಾಯ್ಕನಹಳ್ಳಿ: ಸಮೀಪದ ಉಕ್ಕಡಗಾತ್ರಿಯ ಕರಿಬಸವೇಶ್ವರ ಅಜ್ಜಯ್ಯನ ಸನ್ನಿಧಾನದಲ್ಲಿ ಕಾರ್ತಿಕೋತ್ಸವ, ಪಾಲಿಕೋತ್ಸವ, ರಾಜ್ಯಮಟ್ಟದ ಭಜನಾ ಸ್ಪರ್ಧೆಗಳು ವಿಜೃಂಭಣೆಯಿಂದ ನಡೆದವು.

ನಂದಿಗುಡಿ ವೃಷಭಪುರಿ ಮಹಾಸಂಸ್ಥಾನದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಷ್ಟೋತ್ತರ ಮಹಾಪೂಜೆ ಸಲ್ಲಿಸುವ ಮೂಲಕ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿದರು.

ವಿವಿಧ ವಾದ್ಯ ಮೇಳಗಳು, ಕಲಾತಂಡಗಳೊಂದಿಗೆ ರಥಬೀದಿಯಲ್ಲಿ ಪಾಲಿಕೋತ್ಸವ ವೈಭವದಿಂದ ನಡೆಯಿತು. ದೇವಸ್ಥಾನದ ಒಳಾವರಣ, ಪ್ರಾಂಗಣ ಹಾಗೂ ರಥ ಬೀದಿಗಳಲ್ಲಿ ಭಕ್ತರು, ದೇವಸ್ಥಾನ ಸಮಿತಿಯವರು ಕಡ್ಲಿಬತ್ತಿ ದೀಪಗಳನ್ನು ಹಚ್ಚಿ ಸಂಭ್ರಮಿಸಿದರು.

ADVERTISEMENT

ವಾಸನದ ಮಾಲತೇಶ ನೇತೃತ್ವದ ಕಲಾತಂಡ ಪ್ರಸ್ತುತಪಡಿಸಿದ ಅಜ್ಜಯ್ಯನ ಹಾಡುಗಳು ಎಲ್ಲರ ಗಮನ ಸೆಳೆದವು. ಎಂ.ಕೆ. ಲೇಖನ ಭರತನಾಟ್ಯ ಪ್ರದರ್ಶನ ನೀಡಿದರು. 

ಭಜನಾ ಸ್ಪರ್ಧೆ: ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಪುರುಷ ಮತ್ತು ಮಹಿಳೆಯರ 45 ತಂಡಗಳು ಭಾಗವಹಿಸಿದ್ದವು. ಪುರುಷರ ವಿಭಾಗದಲ್ಲಿ, ಧಾರವಾಡ ಜಿಲ್ಲೆಯ ಬಾಡಾ ಗ್ರಾಮದ ಕರಿಯಮ್ಮದೇವಿ ಭಜನಾ ತಂಡಕ್ಕೆ ಪ್ರಥಮ, ಧಾರವಾಡದ ಶೆಲವಡಿಯ ಗುರು ಶಾಂತೇಶ್ವರ ಕಲಾ ತಂಡಕ್ಕೆ ದ್ವಿತೀಯ ಹಾಗೂ ದಾವಣಗೆರೆಯ ಮಟ್ಟಿ ಆಂಜನೇಯ ಭಜನಾ ಮಂಡಳಿಗೆ ತೃತೀಯ ಬಹುಮಾನ ಲಭಿಸಿತು.

ಮಹಿಳೆಯರ ವಿಭಾಗದಲ್ಲಿ, ಭದ್ರಾವತಿಯ ಶ್ರೀನಿವಾಸಪುರದ ಶ್ರೀರಾಮ ಮಹಿಳಾ ಭಜನಾ ತಂಡಕ್ಕೆ ಪ್ರಥಮ, ಗುಬ್ಬಿ ತಾಲ್ಲೂಕಿನ ಎನ್.ರಾಂಪುರದ ಬಸವೇಶ್ವರ ಸ್ವಾಮಿ ಮಹಿಳಾ ಭಜನಾ ಸಂಘಕ್ಕೆ ದ್ವಿತೀಯ ಹಾಗೂ ಹುಬ್ಬಳ್ಳಿಯ ಘಂಟಿಕೇರಿಯ ದುರ್ಗಾ ಮಹಿಳಾ ಭಜನಾ ಮಂಡಳಿಗೆ ತೃತೀಯ ಬಹುಮಾನ ಸಿಕ್ಕಿತು. ನಂದಿಗುಡಿ ಶ್ರೀಗಳು ಮತ್ತು ಟ್ರಸ್ಟ್ ಸಮಿತಿ ಪದಾಧಿಕಾರಿಗಳು ಬಹುಮಾನ ವಿತರಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಸ್ಥಾನದ ಟ್ರಸ್ಟ್ ಸಮಿತಿ ಕಾರ್ಯದರ್ಶಿ ಎಸ್. ಸುರೇಶ್, ಸದಸ್ಯರಾದ ಆನಂದ ಪಾಟೀಲ್, ಪ್ರಕಾಶ್ ಕೋಟೆಗೌಡ, ಗದಿಗಯ್ಯ ಪಾಟೀಲ್, ಬಸವನಗೌಡ ಬೇವಿನಹಳ್ಳಿ, ಶಿವಕುಮಾರ್ ಸ್ವಾಮಿ, ಕೆ.ಎಚ್. ಮಾಲತೇಶ, ಮಹಾಂತಯ್ಯ ಚೊಗಚಿಕೊಪ್ಪ, ಕೆ. ಬಸವರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.