
ಹರಿಹರ: ಕುರಿ ಕಾಳಗದಲ್ಲಿ ಉತ್ತಮ ಸ್ಪರ್ಧೆ ನೀಡಿ ಹಲವು ಬಹುಮಾನ ಗೆದ್ದಿದ್ದ, ಮೃತ ಕಾಳಿ ಹೆಸರಿನ ಕುರಿಯ (ಟಗರು) ಸ್ಮರಣೆಗಾಗಿ ನಿರ್ಮಿಸಿರುವ ಸ್ಮಾರಕವನ್ನು ಭಾನುವಾರ ಗಣ್ಯರು ಲೋಕಾರ್ಪಣೆ ಮಾಡಿದರು.
ಗ್ರಾಮದ ಹೊರವಲಯದ ಹೊಸಪೇಟೆ–ಶಿವಮೊಗ್ಗ ಹೆದ್ದಾರಿಯ ಪಕ್ಕದಲ್ಲಿ ₹ 9 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಸ್ಮಾರಕವನ್ನು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀ, ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀ, ಚಿತ್ರದುರ್ಗ ಮಾದಾರ ಗುರುಪೀಠದ ಬಸವ ಮಾದಾರಚನ್ನಯ್ಯ ಶ್ರೀ, ನಾಗೇನಹಳ್ಳಿ ಮಹಾದೇವಯ್ಯ ಒಡೆಯರ್ ಲೋಕಾರ್ಪಣೆಗೊಳಿಸಿದರು.
ಗೋಕಾಕ್‌ನಿಂದ ಆಗಮಿಸಿದ್ದ ಕಾಳಿಯ ಅಭಿಮಾನಿಗಳು, ಕಾಳಿಯ ಕುರಿತು ಜನಪದ, ಲಾವಣಿ ಹಾಡುಗಳನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು. ಸ್ಮಾರಕದ ಸುತ್ತಲು ಆನೆಗಳ ಸಾಲು, ಎತ್ತರದ ಕಟ್ಟೆ ಮೇಲೆ ಕಾಳಿಯ ಸುಂದರ ಪ್ರತಿಕೃತಿ, ನಕ್ಷತ್ರಗಳನ್ನು ಕೆತ್ತಲಾಗಿದೆ.
ಚಲನಚಿತ್ರ ನಟ ನವೀನ್ ಶಂಕರ್, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕರಾದ ಎಸ್. ರಾಮಪ್ಪ, ಎಚ್.ಎಸ್. ಶಿವಶಂಕರ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಬಿಜೆಪಿ ಮುಖಂಡರಾದ ಚಂದ್ರಶೇಖರ ಪೂಜಾರ, ವೀರೇಶ್ ಹನಗವಾಡಿ, ಕಾಳಿ ಸ್ಮಾರಕದ ನಿರ್ಮಾತೃಗಳಾದ ಪೂಜಾರ ದೊಡ್ಡಕೆಂಚಪ್ಪಳರ, ರಾಘವೇಂದ್ರ ಡಿ.ಕೆ., ಮೋಹನ್ ಎಸ್., ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು, ಕಾಳಿ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಪ್ರಯುಕ್ತ ರಕ್ತದಾನ ಶಿಬಿರ, ರಾಜ್ಯ ಮಟ್ಟದ ಟಗರು ಕಾಳಗ, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.