ADVERTISEMENT

ಅಧ್ಯಕ್ಷೆ ಗಂಗಮ್ಮ ವಿರುದ್ಧ ಅವಿಶ್ವಾಸಕ್ಕೆ ಸಿದ್ಧತೆ

ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮ ಪಂಚಾಯಿತಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 6:54 IST
Last Updated 15 ಜೂನ್ 2022, 6:54 IST
ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮ ಪಂಚಾಯಿತಿ ಕಚೇರಿ.
ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮ ಪಂಚಾಯಿತಿ ಕಚೇರಿ.   

ಹರಿಹರ: ತಾಲ್ಲೂಕಿನ ದೊಡ್ಡ ಗ್ರಾಮ ಪಂಚಾಯಿತಿಗಳಲ್ಲಿ ಒಂದಾದ ಬೆಳ್ಳೂಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಅರ್ಜಿ ಸಲ್ಲಿಕೆಯಾಗಿದ್ದು, ಸದಸ್ಯರ ನಡುವೆ ಚಟುವಟಿಕೆ ಗರಿಗೆದರಿದೆ.

ಬೆಳ್ಳೂಡಿ, ಎಕ್ಕೆಗೊಂದಿ ಮತ್ತು ಬ್ಯಾಲದಹಳ್ಳಿ ಗ್ರಾಮಗಳನ್ನು ಒಳಗೊಂಡ 23 ಜನ ಸದಸ್ಯ ಸಂಖ್ಯಾ ಬಲದ ಪಂಚಾಯಿತಿಗೆ 2021ರಫೆಬ್ರುವರಿಯಲ್ಲಿ ಬೆಳ್ಳೂಡಿ ಗ್ರಾಮದ 3ನೇ ವಾರ್ಡ್‌ನಿಂದ ಆಯ್ಕೆಯಾಗಿದ್ದ ಗಂಗಮ್ಮ ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು.

ಆಯ್ಕೆಯ ಸಂದರ್ಭದಲ್ಲಿ ಸದಸ್ಯರ ಗುಂಪಿನ ಮಧ್ಯೆ ನಡೆದ ಒಡಂಬಡಿಕೆಯಂತೆ 10 ತಿಂಗಳ ಅವಧಿ ಇವರಿಗೆ ನಿಗದಿಯಾಗಿತ್ತು. ಆ ಪ್ರಕಾರ ಅಧ್ಯಕ್ಷೆ ಗಂಗಮ್ಮ ಅವರು ಕಳೆದ ಡಿಸೆಂಬರ್‌ನಲ್ಲಿ ಸ್ಥಾನ ತೆರವು ಮಾಡಬೇಕಿತ್ತು. ಆದರೆ, ಅವರು ಒಡಂಬಡಿಕೆಯಂತೆ ನಡೆದುಕೊಳ್ಳದ ಕಾರಣ 23 ಸದಸ್ಯರ ಪೈಕಿ 19 ಸದಸ್ಯರು ಸೇರಿಕೊಂಡು ಜೂನ್‌ 3ರಂದು ಉಪವಿಭಾಗಾಧಿಕಾರಿ ಅವರಿಗೆ ಅವಿಶ್ವಾಸದ ಅರ್ಜಿ ಸಲ್ಲಿಸಿದ್ದರು.ಇದೀಗ ಉಪವಿಭಾಗಾಧಿಕಾರಿ ಅವರು ಜೂನ್‌ 23ರಂದು ಅವಿಶ್ವಾಸ ನಿರ್ಣಯ ಸಭೆಯನ್ನು ನಿಗದಿ ಮಾಡಿ ಸದಸ್ಯರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ADVERTISEMENT

ಸಾಮಾನ್ಯ ಮಹಿಳೆ ಮೀಸಲಿನ ಅಧ್ಯಕ್ಷ ಸ್ಥಾನಕ್ಕೆ ಪಂಚಾಯಿತಿಯಲ್ಲಿರುವ ಎಲ್ಲಾ 13 ಮಹಿಳಾ ಸದಸ್ಯರು ಅರ್ಹರಿದ್ದಾರೆ. ಅವಿಶ್ವಾಸ ಮಂಡನೆ ಯಶಸ್ವಿಯಾದರೆ ತೆರವಾಗುವ ಅಧ್ಯಕ್ಷ ಸ್ಥಾನಕ್ಕೆ ಅಕಾಂಕ್ಷಿಗಳ ಪಟ್ಟಿ ದೊಡ್ಡದಿದೆ.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿರುವ ಕೆ.ಎಸ್. ಮಂಜಪ್ಪನವರು ಈ ಹಿಂದೆ ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ. ಇವರೂ ಕೂಡ 10 ತಿಂಗಳ ನಂತರ ಸ್ಥಾನ ಬಿಟ್ಟುಕೊಡಲು ಒಡಂಬಡಿಕೆ ಆಗಿತ್ತು ಎನ್ನಲಾಗಿದೆ. ಅಧ್ಯಕ್ಷರ ಅವಿಶ್ವಾಸ ಮಂಡನೆ ಸಭೆ ನಂತರ ಉಪಾಧ್ಯಕ್ಷರೂ ತಮ್ಮ ಸ್ಥಾನವನ್ನು ಬಿಟ್ಟುಕೊಡುತ್ತಾರೆ ಎಂದು ಪಂಚಾಯಿತಿ ಮೂಲಗಳು ತಿಳಿಸಿವೆ.

ಮಹಿಳಾ ಸದಸ್ಯರ ಸಂಖ್ಯೆಯೇ ಹೆಚ್ಚಾಗಿರುವ ಈ ಗ್ರಾಮ ಪಂಚಾಯಿತಿಯಲ್ಲಿ ಸದ್ಯ ಅವಿಶ್ವಾಸ ಯಶಸ್ಸಾಗುವ ವಾತಾವರಣವಿದೆ. ಅವಿಶ್ವಾಸ ನಿರ್ಣಯದ ಸಭೆಗೆ ಇನ್ನೂ ಎಂಟು ದಿನಗಳಿದ್ದು, ಇನ್ನೂ ಏನೇನು ಬೆಳವಣಿಗೆಗಳು ಆಗಲಿವೆ ಎಂಬುದನ್ನು ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.