ಹರಿಹರ: ಅನುದಾನದ ಕೊರತೆಯಿಂದ ಸಾರ್ವಜನಿಕ ಕಟ್ಟಡ ನಿರ್ಮಾಣ ಕಾಮಗಾರಿ ಕುಂಠಿತಗೊಳ್ಳುವುದನ್ನು ಕೇಳಿದ್ದೇವೆ. ಆದರೆ ಅನುದಾನ ಇದ್ದರೂ ಇಲ್ಲಿನ ನಗರಸಭೆಯ ಹೊಸ ಕಟ್ಟಡ ಕಾಮಗಾರಿ ಕುಂಠಿತಗೊಂಡು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಆರು ದಶಕಗಳ ಹಿಂದೆ ನಿರ್ಮಾಣಗೊಂಡಿದ್ದ ನಗರಸಭೆಯ ಹಳೆ ಕಟ್ಟಡವನ್ನು ತೆರವುಗೊಳಿಸಿದ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸಲು 2021ರಲ್ಲಿ ರಾಜ್ಯ ಸರ್ಕಾರ ₹4.22 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಬೆಂಗಳೂರಿನ ಗುತ್ತಿಗೆದಾರ ಟೆಂಡರ್ ಪಡೆದಿದ್ದರು.
ಹಳೆ ಕಟ್ಟಡ ತೆರವುಗೊಳಿಸಲು ಒಂದು ವರ್ಷ ಸಮಯ ತೆಗೆದುಕೊಂಡ ಗುತ್ತಿಗೆದಾರ, ನಂತರ ಆ ಜಾಗದಲ್ಲಿ ಬುನಾದಿ ಹಾಕಿ ಒಂದು ವರ್ಷ ಸುಮ್ಮನಿದ್ದರು. ‘ಬುನಾದಿ ಹಂತದಿಂದ ಮೇಲೇಳದ ಕಟ್ಟಡ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಕಳೆದ ಜು.25 ರಂದು ವಿಶೇಷ ಸುದ್ದಿ ಪ್ರಕಟಿಸಿದ ಬಳಿಕ, ಗೋಡೆ ಹಂತದವರೆಗೆ ನಿರ್ಮಾಣ ಕಾರ್ಯ ನಡೆಯಿತು.
ಆದರೆ ಕಳೆದ 3 ತಿಂಗಳಿಂದ ಕಾಮಗಾರಿ ಮತ್ತೆ ಸ್ಥಗಿತಗೊಂಡಿದೆ. ಆರ್‌ಸಿಸಿ ಹಾಕಿ ಉಳಿದ ಕೆಲಸಗಳನ್ನು ಪೂರ್ಣಗೊಳಿಸಲು ಅಂದಾಜು 2-3 ತಿಂಗಳು ಸಾಕಾಗಬಹುದು. ನಗರಸಭೆಯಿಂದ ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಗುತ್ತಿಗೆದಾರ ಕಾಮಗಾರಿ ಪೂರ್ಣಗೊಳಿಸಲು ಮುಂದೆ ಬರುತ್ತಿಲ್ಲ.
ನಗರಸಭೆಯ ಕಂದಾಯ, ಆರೋಗ್ಯ, ಎಂಜಿನಿಯರಿಂಗ್, ದಾಖಲೆ, ಸಮುದಾಯ ಅಭಿವೃದ್ಧಿ, ಕಂಪ್ಯೂಟರ್, ಲೆಕ್ಕಪತ್ರ ಶಾಖೆ ಸೇರಿ ವಿವಿಧ ವಿಭಾಗಗಳ ಕೆಲಸಗಳನ್ನು ಕಿಷ್ಕಿಂಧೆಯಂತಹ ತಾತ್ಕಾಲಿಕ ಕೊಠಡಿಗಳಲ್ಲಿ ನಡೆಸಲಾಗುತ್ತಿದೆ. ಸಿಬ್ಬಂದಿ ಕುಳಿತು ಕೆಲಸ ಮಾಡಲು ಹಾಗೂ ತಮ್ಮ ಶಾಖೆಗೆ ಸೇರಿದ ದಾಖಲೆಗಳನ್ನು ಇಟ್ಟುಕೊಳ್ಳಲೂ ಸಾಧ್ಯವಾಗುತ್ತಿಲ್ಲ.
ಪೌರಾಯುಕ್ತ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಭೇಟಿ ಮಾಡಲು ಬರುವ ಜನರಿಗೆ ತೊಂದರೆಯಾಗುತ್ತಿದೆ. ಕಂದಾಯ, ಆರೋಗ್ಯ, ಎಂಜಿನಿಯರಿಂಗ್ ಶಾಖೆಗಳು ಮೊದಲ ಮಹಡಿಯಲ್ಲಿರುವುದರಿಂದ ಹಿರಿಯ ನಾಗರಿಕರಿಗೆ ಹತ್ತಿ ಇಳಿಯುವುದು ದುಸ್ತರವಾಗಿದೆ.
ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರಿಗೆ ಒಂದು ರೀತಿ ತೊಂದರೆಯಾಗುತ್ತಿದ್ದರೆ, ಕಿಷ್ಕಿಂಧೆಯಂತಿರುವ ಕಟ್ಟಡ ಇನ್ನೊಂದು ರೀತಿಯ ಅಡ್ಡಿ ಉಂಟು ಮಾಡುತ್ತಿದೆ. ಗುತ್ತಿಗೆದಾರರ ಮೇಲೆ ಒತ್ತಡ ಹೇರಿ ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಹೊತ್ತಿಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಟೆಂಡರ್ ಅವಧಿ ಮುಗಿಯುತ್ತಾ ಬಂದಿದ್ದು ಗುತ್ತಿಗೆದಾರರ ವಿರುದ್ಧ ನೋಟಿಸ್ ಜಾರಿ ಮಾಡುತ್ತೇವೆವಿನಯ್ಕುಮಾರ್ ಎಇಇ
ನಗರಸಭಾ ಸದಸ್ಯರೂ ಸೇರಿ ನಾಗರಿಕರಿಗೆ ತೊಂದರೆಯಾಗಿದೆ. ಗುತ್ತಿಗೆದಾರರನ್ನು ಕರೆಯಿಸಿ ಕಾಮಗಾರಿ ಬೇಗನೇ ಪೂರ್ಣಗೊಳಿಸಲು ತಾಕೀತು ಮಾಡುವಂತೆ ಅಧ್ಯಕ್ಷರು ಹಾಗೂ ಪೌರಾಯುಕ್ತರ ಗಮನ ಸೆಳೆಯಲಾಗುವುದುಸೈಯದ್ ಅಬ್ದುಲ್ ಅಲೀಂ ನಗರಸಭಾ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.