ಹರಿಹರ: ‘ನಮ್ಮಜ್ಜ ನೆಟ್ಟ ಗಿಡಗಳನ್ನು ಕತ್ತರಿಸುವಾಗ ಕಣ್ಣಲ್ಲಿ ನೀರು ಬಂತು. ಮನೆಯಲ್ಲಿ ನಮ್ಮ ತಂದೆ, ತಾಯಿ, ಮಕ್ಕಳ ಮನಸ್ಸು ಭಾರವಾಗಿತ್ತು. ಏನು ಮಾಡೋದು? ನುಸಿ ಪೀಡೆಗೆ ಹೆದರಿ ಅನಿವಾರ್ಯವಾಗಿ ನಮ್ಮನ್ನು ಸಾಕಿದ ಗಿಡಗಳನ್ನೇ ಕತ್ತರಿಸಬೇಕಾಯಿತು...’
ತಮ್ಮ ಜಮೀನಿನಲ್ಲಿದ್ದ 220 ತೆಂಗಿನ ಮರಗಳ ಪೈಕಿ 100 ಗಿಡಗಳನ್ನು ಕೆಲ ದಿನಗಳ ಹಿಂದೆ ಕಡಿಸಿದ ತಾಲ್ಲೂಕಿನ ಹೊಳೆಸಿರಿಗೆರೆಯ ರೈತ ಎಂ.ಎಚ್. ಪಟೇಲ್ ಅವರ ಈ ಮಾತು ಸದ್ಯದ ತೆಂಗಿನ ಬೆಳೆಯ ದುಃಸ್ಥಿತಿಯನ್ನು ಬಿಂಬಿಸುತ್ತದೆ.
‘ಕಲ್ಪವೃಕ್ಷದ ಕಣಜ’ ಎಂಬ ಖ್ಯಾತಿಯ ಹೊಳೆಸಿರಿಗೆರೆಯಲ್ಲಿ ಅವರಷ್ಟೇ ಅಲ್ಲ, ಅವರಂತೆಯೇ ಇನ್ನೂ ಹಲವು ರೈತರು ತೆಂಗಿನ ಮರಗಳನ್ನು ಕತ್ತರಿಸಿದ್ದಾರೆ.
ರೈತರಾದ ಮಾಗೋಡು ರಾಜಣ್ಣ 100 ಮರ, ಮಾಗನೂರು ಶ್ರೀನಿವಾಸ್ ಅವರು 46 ಮರ ಸೇರಿದಂತೆ ಹತ್ತಾರು ರೈತರು ಇದುವರೆಗೆ ಒಟ್ಟು 500ಕ್ಕೂ ಹೆಚ್ಚು ತೆಂಗಿನ ಮರಗಳನ್ನು ತೆಗೆಯಿಸಿದ್ದಾರೆ.
ನುಸಿ ರೋಗ:
ತಾಲ್ಲೂಕಿನಲ್ಲಿ ಹೊಳೆಸಿರಿಗೆರೆ ತೆಂಗಿನ ಬೆಳೆಗೆ ಪ್ರಸಿದ್ಧಿ. ಕೆಲವು ವರ್ಷಗಳಿಂದ ಈ ಭಾಗದ ತೆಂಗಿನ ತೋಟಗಳಿಗೆ ಹಬ್ಬಿದ ನುಸಿ ಪೀಡೆಯು ಮರದಲ್ಲಿ ತೆಂಗಿನ ಹರಳು ಕಟ್ಟಲೂ ಅವಕಾಶ ನೀಡುತ್ತಿಲ್ಲ. ಹಸಿರು ಗರಿಗಳು ಕಪ್ಪಾಗಿ, ಶಕ್ತಿಹೀನವಾಗಿ ಮುರಿದು ಬೀಳುತ್ತಿವೆ.
ತಮ್ಮ ಮನೆಯಲ್ಲಿ ಬಳಸುವುದಲ್ಲದೆ ಸಂಬಂಧಿಕರ ಮನೆಗೂ ತೆಂಗಿನಕಾಯಿ ಕಳಿಸಿಕೊಡುತ್ತಿದ್ದ ಗ್ರಾಮದ ಹಲವು ರೈತರು ಈಗ ತಮ್ಮ ಮನೆಯ ನಿತ್ಯ ಬಳಕೆಗೂ ತೆಂಗಿನಕಾಯಿಯನ್ನು ಅಂಗಡಿಯಿಂದ ಖರೀದಿಸಬೇಕಾಗಿದೆ. ಇದು ನುಸಿ ರೋಗದ ಭಯಾನಕತೆ ತೆರೆದಿಡುತ್ತದೆ.
ಸದ್ಯಕ್ಕೆ ಗ್ರಾಮದಲ್ಲಿ ಒಂದೂವರೆ ತಿಂಗಳಿಂದ ತೆಂಗಿನ ಮರಗಳನ್ನು ಕತ್ತರಿಸುವುದು ಸಾಮಾನ್ಯ ಎಂಬಂತಾಗಿದೆ. ತಮಿಳುನಾಡಿನ ಫ್ಲೈವುಡ್ ಕಾರ್ಖಾನೆಯವರು ಮರಗಳನ್ನು ಕತ್ತರಿಸಿ ಲಾರಿಯಲ್ಲಿ ಸಾಗಿಸುತ್ತಿದ್ದಾರೆ. ಒಂದು ಗಿಡ ಕತ್ತರಿಸಿ ಸಾಗಿಸಲು ರೈತರೇ ₹ 200 ಪಾವತಿಸುತ್ತಿದ್ದಾರೆ.
ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ, ಈ ಗ್ರಾಮದ ಕಲ್ಪವೃಕ್ಷ ಬೆಳೆಗೆ ಕಾಡುತ್ತಿರುವ ನುಸಿ ರೋಗದಿಂದ ಮುಕ್ತಿ ದೊರಕಿಸಬೇಕಾಗಿದೆ ಎನ್ನುತ್ತಾರೆ ರೈತರು.
ಅಡಿಕೆ ಬೆಳೆ ವಾರ್ಷಿಕವಾಗಿ ಉತ್ತಮ ಆದಾಯ ಕೊಡುತ್ತದೆ ಎಂಬ ಭಾವನೆ ಸಾಮಾನ್ಯವಾಗಿದೆ. ತೆಂಗೂ ಅಷ್ಟೇ ಆದಾಯ ಕೊಡುವ ಬೆಳೆ. ಆದರೆ, ಈಗ ನುಸಿ ರೋಗದಿಮದ ರೈತರು ಕಂಗಾಲಾಗಿದ್ದಾರೆ ಎಂದು ರೈತ ಕುಂದೂರು ಮಂಜಪ್ಪ ಬೇಸರಿಸಿದರು.
ರೋಗಪೀಡಿತ ಮರಗಳನ್ನು ತೆಗೆಯಿಸಿದ್ದೇನೆ. ಮತ್ತೆ ತೆಂಗಿನ ಸಸಿ ನೆಡುತ್ತೇನೆ. ಉತ್ತಮ ಸಸಿಗಳಿಗೆ ಹುಡುಕಾಡುತ್ತಿದ್ದೇನೆ
-ಎಂ.ಎಚ್. ಪಟೇಲ್ ರೈತ ಹೊಳೆಸಿರಿಗೆರೆ
ಹೊಸ ಸಸಿ ಹಾಕಲು ಹೆಕ್ಟೇರ್‌ಗೆ ₹ 35000 ಸಹಾಯಧನ ಹೊಳೆಸಿರಿಗೆರೆ ಭಾಗದಲ್ಲಿ ತೆಂಗಿನಬೆಳೆಗೆ ನುಸಿ ರೋಗ ಕಾಡುತ್ತಿದೆ. ಈ ಬಗ್ಗೆ ರೈತರಿಗೆ ತಿಳಿವಳಿಕೆ ನೀಡಲಾಗಿದೆ. ರೋಗಪೀಡಿತ ಮರ ಕಡಿಸಿ ಹೊಸದಾಗಿ ಸಸಿ ನೆಡುವ ರೈತರಿಗೆ ಒಂದು ಹೆಕ್ಟೇರ್ ಪ್ರದೇಶಕ್ಕೆ ತೆಂಗು ಅಭಿವೃದ್ಧಿ ಮಂಡಳಿಯಿಂದ ₹ 35000 ಸಹಾಯಧನ ನೀಡುವ ಯೋಜನೆ ಇದೆ. ಈ ಬಗ್ಗೆ ರೈತರು ಮಾಹಿತಿ ಪಡೆಯಬೇಕು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಘವೇಂದ್ರ ಪ್ರಸಾದ್ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.