ADVERTISEMENT

ಕಳಪೆ ಬೀಜ ವಿತರಿಸಿದರೆ ಅಧಿಕಾರಿಗಳೇ ಹೊಣೆ: ಶಾಸಕ ಬಿ.ಪಿ. ಹರೀಶ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2023, 5:28 IST
Last Updated 8 ಜೂನ್ 2023, 5:28 IST
ಹರಿಹರ: ಹರಿಹರದ ಎಪಿಎಂಸಿ ಆವರಣದ ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣಾ ಕಾರ್ಯಕ್ಕೆ ಶಾಸಕ ಬಿ.ಪಿ.ಹರೀಶ್ ಚಾಲನೆ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ನಾರನಗೌಡ ಇದ್ದರು.
ಹರಿಹರ: ಹರಿಹರದ ಎಪಿಎಂಸಿ ಆವರಣದ ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣಾ ಕಾರ್ಯಕ್ಕೆ ಶಾಸಕ ಬಿ.ಪಿ.ಹರೀಶ್ ಚಾಲನೆ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ನಾರನಗೌಡ ಇದ್ದರು.   

ಹರಿಹರ: ‘ಅಧಿಕಾರಿಗಳು ಬಿತ್ತನೆ ಬೀಜಗಳ ಗುಣಮಟ್ಟವನ್ನು ಸರಿಯಾಗಿ ಪರಿಶೀಲಿಸಿ, ಖಾತ್ರಿಪಡಿಸಿಕೊಂಡ ನಂತರವೇ ರೈತರಿಗೆ ವಿತರಿಸಬೇಕು. ಕಳಪೆ ಬೀಜ ವಿತರಿಸಿದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು’ ಎಂದು ಶಾಸಕ ಬಿ.ಪಿ. ಹರೀಶ್ ಎಚ್ಚರಿಸಿದರು.

ನಗರದ ಎಪಿಎಂಸಿ ಆವರಣದ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ಬಿತ್ತನೆ ಬೀಜ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಸರ್ಕಾರ ರಿಯಾಯಿತಿ ದರದಲ್ಲಿ ನೀಡುವ ಬಿತ್ತನೆ ಬೀಜಗಳು ಕಳಪೆಯಾಗಿದ್ದರೆ ಬಂಡವಾಳ ಹೂಡಿ ಬಿತ್ತನೆ ಮಾಡುವ ರೈತರು ತೀವ್ರ ಸಂಕಷ್ಟ ಎದುರಿಸುತ್ತಾರೆ. ಈ ರೀತಿ ಆಗದಂತೆ ನೋಡಿಕೊಳ್ಳಬೇಕು’ ಎಂದರು.

‘ಬೀಜ ವಿತರಣೆಯಲ್ಲಿ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳು ಜಾಗೃತಿ ವಹಿಸಬೇಕು. ಯಾವುದೇ ರೀತಿಯ ತಾರತಮ್ಯ, ದುರ್ಬಳಕೆ ಆಗಬಾರದು. ಸಂಪರ್ಕ ಕೇಂದ್ರಕ್ಕೆ ಬರುವ ರೈತರೊಂದಿಗೆ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಬೇಕು’ ಎಂದು ಹೇಳಿದರು.

ADVERTISEMENT

‘ತಾಲ್ಲೂಕಿನ ಕೆಲ ಭಾಗಗಳಲ್ಲಿ ಮಾತ್ರ ಈಗ ಮಳೆಯಾಗಿದ್ದು, ಹದ ಮಳೆ ಬಂದ ಕೂಡಲೇ ಹೆಚ್ಚಿನ ಸಂಖ್ಯೆಯ ರೈತರು ಬಿತ್ತನೆಗೆ ಮುಂದಾಗುವುದರಿಂದ ಅವರನ್ನು ಅಲೆದಾಡುವಂತೆ ಮಾಡಬಾರದು. ಬೀಜ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಕೃಷಿ ಅಧಿಕಾರಿಗಳು ಕಾಲ, ಕಾಲಕ್ಕೆ ರೈತರ ಜಮೀನುಗಳಿಗೆ ಭೇಟಿ ನೀಡಿ, ಅಗತ್ಯ ಸಲಹೆ– ಸೂಚನೆ ನೀಡಬೇಕು’ ಎಂದರು.

ಸಹಾಯಕ ಕೃಷಿ ನಿರ್ದೇಶಕ ನಾರನಗೌಡ, ಕೃಷಿ ಅಧಿಕಾರಿಗಳಾದ ಮಲ್ಲಿಕಾರ್ಜುನ್, ವಿಕಾಶ್, ಪ್ರಸಾದ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜೀತ್ ಸಾವಂತ್, ಪ್ರಧಾನ ಕಾರ್ಯದರ್ಶಿ ಮಂಜನಾಯ್ಕ ಎಚ್, ಮುಖಂಡರಾದ ವಿನಾಯಕ ಆರಾಧ್ಯಮಠ, ಹನಗವಾಡಿ ಮಂಜುನಾಥ, ರೈತರಾದ ಮೈಲಪ್ಪ ಎ.ಕೆ. ಬನ್ನಿಕೊಡು, ಅಶೋಕ ರಾಜನಹಳ್ಳಿ, ಭೀಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.