ಹರಿಹರ: ಆಧ್ಯಾತ್ಮಿಕ ಜ್ಞಾನ ಮತ್ತು ಚಿಂತನೆ ಅಳವಡಿಸಿಕೊಂಡವರು ಬದುಕಿನಲ್ಲಿ ಸಹಜವಾಗಿ ಹೆಚ್ಚಿನ ಆತ್ಮವಿಶ್ವಾಸ ಹೊಂದಿರುತ್ತಾರೆ ಎಂದು ದಾವಣಗೆರೆ ಜಡೆ ಸಿದ್ದಾಶ್ರಮದ ವೇದಾಂತ ವಾರಿಧಿ ಶಿವಾನಂದ ಸ್ವಾಮೀಜಿ ಹೇಳಿದರು.
ನಗರದ ಜೆ.ಸಿ.ಬಡಾವಣೆಯ ಬ್ರಹ್ಮಾನಂದ ಮಠದಲ್ಲಿ ಸೀಮಾ ವಿವೇಕಾನಂದ ಸ್ವಾಮಿ ಶೈಕ್ಷಣಿಕ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಗುರುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಧ್ಯಾತ್ಮಿಕತೆ ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೂ ದಾರಿ ಮಾಡಿಕೊಡುತ್ತದೆ ಎಂದು ಪ್ರವಚನಕಾರ ಮಲ್ಲಿಕಾರ್ಜುನ ದೇವಾಂಗದ ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಬಿ.ರೇವಣಸಿದ್ದಪ್ಪ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕನ್ನಡ ಕುವರ, ಕನ್ನಡ ಕುವರಿ ಪ್ರಶಸ್ತಿ ನೀಡಿ ಪುರಸ್ಕರಿಸಿದರು. ಇದಕ್ಕೂ ಮುನ್ನ, ಬ್ರಹ್ಮಾನಂದ ಶ್ರೀಗಳ 55ನೇ, ಮಾತೋಶ್ರೀ ದೊಡ್ಡಮ್ಮನವರ 27ನೇ ಹಾಗೂ ಕೃಪಾನಂದ ಭಾರತೀ ಶ್ರೀಗಳ 24ನೇ ಸ್ಮರಣೋತ್ಸವದ ಕಾರ್ಯಕ್ರಮ ನಡೆದವು.
ತುಮ್ಮಿನಕಟ್ಟೆಯ ಮಾರ್ಕಂಡೇಶ್ವರ ಗುರುಪೀಠದ ಪ್ರಭುಲಿಂಗ ಶ್ರೀ, ಹದಡಿ ಚಂದ್ರಗಿರಿ ಮಠದ ಮುರುಳೀಧರ ಶ್ರೀ ಸಾನಿಧ್ಯ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ದುರುಗಪ್ಪ, ಅಮರಾವತಿ ಕಾಲೊನಿಯ ಸತ್ಯಸಾಯಿ ಶಿವಬಸವ ಟ್ರಸ್ಟ್ ಅಧ್ಯಕ್ಷ ಅಮರಾವತಿ ಪರಮೇಶ್ವರಪ್ಪ, ಸಾಮಾಜಿಕ ಕಾರ್ಯಕರ್ತರಾದ ಬಿ.ಮಗ್ದುಮ್, ಎಸ್.ಫಾಲಾಕ್ಷಪ್ಪ, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಮಠದ ಆಡಳಿತಾಧಿಕಾರಿ ವಿವೇಕಾನಂದಸ್ವಾಮಿ, ಜಿಗಳಿ ಪ್ರಕಾಶ್, ಟಿ.ಜಿ.ಉಮಾಪತಿ, ಗೀತಾ ಸ್ವಾಮಿ, ಪ್ರಿಯಾಂಕ ಮತ್ತಿತರರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.