ಹರಿಹರ: ನಿಷೇಧಿತ ದೇವದಾಸಿ ಪದ್ಧತಿಯನ್ನು ಅನುಸರಿಸುವವರು ಹಾಗೂ ಪ್ರೋತ್ಸಾಹಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಎಚ್ಚರಿಕೆ ನೀಡಿದರು.
ನಗರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಜಿಲ್ಲಾ ದೇವದಾಸಿ ಪುನರ್ವಸತಿ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದೇವದಾಸಿ ಸಮರ್ಪಣೆ ನಿಷೇಧ ಕುರಿತ ಜಾಗೃತಿ ಮತ್ತು ಕಾನೂನು ಅರಿವು ಹಾಗೂ ಬೇಟಿ ಬಚಾವೂ, ಬೇಟಿ ಪಡಾವೊ ಯೋಜನೆಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರವು ದೇವದಾಸಿ ಪದ್ಧತಿಯನ್ನು ನಿಷೇಧಿಸಿ 2009ರಲ್ಲಿ ಕಾಯ್ದೆ ಜಾರಿಗೆ ತಂದಿದೆ. ಅನಿಷ್ಠ ಪದ್ಧತಿ ಎಂದು ತಿಳಿದಿದ್ದರೂ ಮಹಿಳೆಯರಿಗೆ ಮುತ್ತು ಕಟ್ಟುವುದು, ದೇವದಾಸಿಯರಾಗಿ ಬಿಡುವುದು, ಆಚರಣೆಯನ್ನು ಪ್ರೋತ್ಸಾಹಿಸುವುದು ಕಾನೂನು ಬಾಹಿರ. ಬ್ಯಾಕ್ಟೀರಿಯಾ, ವೈರಸ್‌ಗಳಿಂದಾಗಿ ತಲೆಯಲ್ಲಿ ಜಡೆ ಮೂಡುತ್ತದೆಯೇ ಹೊರತು ಬೇರಾವ ಕಾರಣಗಳಿಂದ ಅಲ್ಲ ಎಂದು ಹೇಳಿದರು.
2007-08ನೇ ಸಾಲಿನಲ್ಲಿ ನಡೆದ ಸಮಿಕ್ಷೆಯಲ್ಲಿ ಜಿಲ್ಲೆಯಲ್ಲಿ 1,604 ಜನ ದೇವದಾಸಿಯರನ್ನು ಗುರುತಿಸಲಾಗಿತ್ತು. ಅದರಲ್ಲಿ 617 ದೇವದಾಸಿಯರು ಮೃತಪಟ್ಟಿದ್ದಾರೆ. ಉಳಿದ 987 ದೇವದಾಸಿಯರಿಗೆ ಪ್ರತಿ ತಿಂಗಳು ₹ 2,000 ಮಾಶಾಸನ ನೀಡಲಾಗುತ್ತಿದೆ. ಹರಿಹರ ತಾಲ್ಲೂಕಿನಲ್ಲಿ 365 ಜನ ದೇವದಾಸಿಯರನ್ನು ಗುರುತಿಸಿದ್ದು, 202 ಜನ ದೇವದಾಸಿಯರು ಬದುಕಿದ್ದಾರೆ ಎಂದರು.
ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ‘ದೇವದಾಸಿ ಪದ್ಧತಿ ಸಾಮಾಜಿಕ ಪಿಡುಗಾಗಿದ್ದು, ಸಮಸ್ಯೆ ನಿವಾರಿಸಲು ಸಮುದಾಯದ ಸಹಕಾರ ಅಗತ್ಯ’ ಎಂದು ಹೇಳಿದರು.
ತಹಶೀಲ್ದಾರ್ ಕೆ.ಎಂ.ಗುರುಬಸವರಾಜ್, ದೇವದಾಸಿ ಪುನರ್ವಸತಿ ಜಿಲ್ಲಾ ಯೋಜನಾಧಿಕಾರಿ ಮಂಜುಳಾ ಐ.ಟಿ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಕೆ.ಎಸ್.ಶುಭಾ, ನಗರಸಭೆ ಸದಸ್ಯರಾದ ಎಂ.ಆರ್.ಮುಜಮ್ಮಿಲ್ ದಾದಾ ಖಲಂದರ್, ಆಟೊ ಹನುಮಂತಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹನುಮಂತಪ್ಪ, ಸಂಪನ್ಮೂಲ ವ್ಯಕ್ತಿ ನಾಗವೇಣಿ, ಕಂದಾಯ ನಿರೀಕ್ಷಕ ಸಮೀರ್ ಅಹಮ್ಮದ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.