ADVERTISEMENT

ದಾವಣಗೆರೆ: ಹರಿಹರ, ಚನ್ನಗಿರಿಯಲ್ಲೇ ಉಳಿದ ಆಂಧ್ರ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 8 ಮೇ 2020, 15:30 IST
Last Updated 8 ಮೇ 2020, 15:30 IST
ಹರಿಹರ ತಾಲ್ಲೂಕಿನ ನೆಹರೂ ಕ್ಯಾಂಪ್‌ನ ವಲಸೆ ಕಾರ್ಮಿಕರು
ಹರಿಹರ ತಾಲ್ಲೂಕಿನ ನೆಹರೂ ಕ್ಯಾಂಪ್‌ನ ವಲಸೆ ಕಾರ್ಮಿಕರು   

ದಾವಣಗೆರೆ: ಜಿಲ್ಲೆಯ ಹರಿಹರ ಹಾಗೂ ಚನ್ನಗಿರಿ ತಾಲ್ಲೂಕುಗಳಲ್ಲಿ ಸಿಲುಕಿರುವ ಆಂಧ್ರಪ್ರದೇಶದ 59 ಕಾರ್ಮಿಕರು ಸ್ವಂತ ಸ್ಥಳಕ್ಕೆ ಹೋಗಲು ಪರಿತಪಿಸುತ್ತಿದ್ದಾರೆ.

ಹರಿಹರ ತಾಲ್ಲೂಕಿನ ನೆಹರೂ ಕ್ಯಾಂಪ್‌ 29 ಹಾಗೂ ಚನ್ನಗಿರಿ ತಾಲ್ಲೂಕಿನ ಕಣಿವೆ ಬಿಳಚಿ ಕ್ಯಾಂಪ್‌ನ 30 ಕಾರ್ಮಿಕರು ಸಿಲುಕಿದ್ದು, ಅವರು ಸಂಕಷ್ಟದಲ್ಲಿದ್ದಾರೆ.

ಭತ್ತದ ನಾಟಿ ಸಮುಯದಲ್ಲಿ ಗದ್ದೆಗಳಲ್ಲಿ ಇಲಿಗಳನ್ನು ಕೊಲ್ಲಲು ರೈತರು ಪ್ರತಿ ವರ್ಷ ಆಂಧ್ರಪ್ರದೇಶದಿಂದ ಕರೆಸಿಕೊಳ್ಳುತ್ತಾರೆ. ಎಕರೆಗೆ ಇಂತಿಷ್ಟು ಎಂದು ಕೂಲಿ ನಿಗದಿ ಮಾಡಿ ಕಾರ್ಮಿಕರು ನೀಡುತ್ತಾರೆ. ಜಿಲ್ಲೆಯಲ್ಲೇ ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿಕೊಂಡು ಎರಡು ತಿಂಗಳು ಇಲ್ಲಿಯೇ ಇದ್ದು, ಕೆಲಸ ಮುಗಿದ ನಂತರ ಊರಿಗೆ ತೆರಳುತ್ತಾರೆ. ಆದರೆ ಅವರು ಹೊರಡುವ ವೇಳೆಗೆ ಕೊರೊನಾ ವೈರಸ್‌ನಿಂದಾಗಿ ಲಾಕ್‌ಡೌನ್ ಘೋಷಣೆಯಾಯಿತು. ಇದರಿಂದಾಗಿ ಊರಿಗೆ ಹೋಗಲು ಆಗದೇ ತೊಂದರೆಗೀಡಾಗಿದ್ದಾರೆ.

ADVERTISEMENT

ನೆಹರೂ ಕ್ಯಾಂಪ್‌ನಲ್ಲಿ ಈ ಕಾರ್ಮಿಕರಿಗೆ ಫುಡ್‌ಕಿಟ್‌ಗಳನ್ನು ನೀಡಿದ್ದಾರೆ. ಆದರೆ ಇದು ಸಾಲುತ್ತಿಲ್ಲ. ಕಣಿವೆಬಿಳಚಿ ಕ್ಯಾಂಪ್‌ನಲ್ಲಿರುವ ಕಾರ್ಮಿಕರಿಗೆ ಫುಡ್‌ಕಿಟ್‌ಗಳು ಸಿಕ್ಕಿಲ್ಲ. ಆದ್ದರಿಂದ ಇವರಿಗೆ ಜೀವನ ನಡೆಸುವುದು ಕಷ್ಟವಾಗಿದೆ.

‘ಸೇವಾಸಿಂಧು’ವಿನಲ್ಲಿ ಅರ್ಜಿ ಸಲ್ಲಿಸಿದ್ದು, ಹರಿಹರ ಆರೋಗ್ಯ ಕೇಂದ್ರದಲ್ಲಿ ಸ್ಕ್ರೀನಿಂಗ್ ಮಾಡಲಾಗಿದೆ. ಆದರೆ ಹೋಗಲು ಇವರಿಗೆ ಸೌಲಭ್ಯವಿಲ್ಲದಂತಾಗಿದೆ.

‘ಲಾಕ್‌ಡೌನ್ ಆದಾಗಿನಿಂದ ನಮಗೆ ಊಟ ಸಿಗದೇ ಜೀವನ ನಡೆಸುವುದು ಕಷ್ಟವಾಗಿದೆ. ನಾವು ಕ್ವಾರಂಟೈನ್ ಆಗಲು ತಯಾರಿಗಿದ್ದು, ಊರಿಗೆ ಹೋಗಲು ಸಾರಿಗೆ ವೆಚ್ಚವನ್ನು ಭರಿಸಲು ಸಿದ್ಧವಿದ್ದೇವೆ. ದಯವಿಟ್ಟು ನಮ್ಮನ್ನು ಊರಿಗೆ ಕಳುಹಿಸಿಕೊಡಿ’ ಎಂದು ಬೇಡಿಕೊಳ್ಳುತ್ತಾರೆ ತಂಡದ ಮೇಸ್ತ್ರಿ ಶ್ರೀನಿವಾಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.