ಹರಿಹರ: ಸಂಚಾರ ಪೊಲೀಸ್ ಠಾಣೆ ಇಲ್ಲದ ಹರಿಹರದಲ್ಲಿ ವಾಹನ ಸಂಚಾರ ನಿಯಂತ್ರಣಕ್ಕೆ ಸಿವಿಲ್ ಪೊಲೀಸರು ಧ್ವನಿವರ್ಧಕದ ಮೊರೆ ಹೋಗಿ ಬಹು ಮಟ್ಟಿಗೆ ಸಾಫಲ್ಯತೆಯನ್ನು ಪಡೆದಿದ್ದಾರೆ.
ಹೊಸಪೇಟೆ– ಶಿವಮೊಗ್ಗ ಮತ್ತು ಬೀರೂರು–ಸಮ್ಮಸಗಿ (ಹಳೆ ಪಿ.ಬಿ.ರಸ್ತೆ) ರಾಜ್ಯ ಹೆದ್ದಾರಿಗಳು ಕೂಡುವ ನಗರದ ಗಾಂಧಿ ಸರ್ಕಲ್‌ನಲ್ಲಿ ದಿನದ 24 ಗಂಟೆಯೂ ಭಾರಿ ಹಾಗೂ ಲಘು ವಾಹನ ಸಂಚಾರ ದಟ್ಟಣೆ ಇರುತ್ತದೆ. ಹಗಲಿನಲ್ಲಿ ವಾಹನ ದಟ್ಟಣೆ ಕೊಂಚ ಹೆಚ್ಚಾಗಿರುತ್ತದೆ.
ಸಂಚಾರ ಠಾಣೆ ಇಲ್ಲದ್ದರಿಂದ ಸಿವಿಲ್ ಪೊಲೀಸರೇ ಹೆಚ್ಚುವರಿಯಾಗಿ ಗಾಂಧಿ ಸರ್ಕಲ್‌ನಲ್ಲಿ ಸಂಚಾರ ನಿಯಂತ್ರಣ ಕಾರ್ಯ ಮಾಡುತ್ತಿದ್ದರು. ವಾಹನ ದಟ್ಟಣೆ ಅಧಿಕವಾಗಿ ಇರುವುದರಿಂದ ಒಂದು ವಿಷಲ್ ಊದುತ್ತಾ ನಿಲ್ಲುವ ಪೊಲೀಸ್ ಸಿಬ್ಬಂದಿ ಕಾರ್ಯ ಪ್ರಭಾವಿಯಾಗುತ್ತಿರಲಿಲ್ಲ. ಈ ಸರ್ಕಲ್‌ನಲ್ಲಿ ಸಿಗ್ನಲ್ ಇದ್ದರೂ ಇಲ್ಲದಂತಾಗಿತ್ತು. ಪ್ರಯಾಣಿಕರನ್ನು ಸೆಳೆಯಲು ಸುತ್ತಾಡುವ ಆಟೋಗಳು, ಫುಟ್‌ಪಾತ್ ಬಿಟ್ಟು ರಸ್ತೆಯಲ್ಲೇ ವ್ಯಾಪಾರ ಮಾಡುವ ಹೂವು, ತರಕಾರಿ ಇತರೆ ಫುಟ್‌ಪಾತ್ ವ್ಯಾಪಾರಿಗಳಿಂದಾಗಿ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಸರ್ಕಲ್ ದಾಟುವುದು ಎಂದರೆ ಜೀವ ಕೈಗೆ ಬರುವಂತಿತ್ತು.
ನಗರ ಠಾಣೆಗೆ ವರ್ಗಾವಣೆಯಾಗಿ ಬಂದ ಇನ್‌ಸ್ಪೆಕ್ಟರ್ ಆರ್.ಎಫ್. ದೇಸಾಯಿ ಅವರು ಸರ್ಕಲ್‌ನ ನಾಲ್ಕೂ ಕಡೆ ಧ್ವನಿವರ್ಧಕದ ಹಾರ್ನ್ ಅಳವಡಿಸಿ ಪೊಲೀಸ್ ಸಿಬ್ಬಂದಿಗೆ ಮೈಕ್ ವ್ಯವಸ್ಥೆ ಮಾಡಿಸಿದರು. ವಿಷಲ್ ಊದಿ ದಣಿದರೂ ಸಂಚಾರ ನಿಯಂತ್ರಣ ಆಗದಿದ್ದ ವಾತಾವರಣ ಮೈಕ್ ಬಳಕೆಯಿಂದಾಗಿ ಜಾದೂ ಮಾಡಿದ ರೀತಿಯಲ್ಲಿ ಬದಲಾಯಿತು. ಕೇವಲ ಒಬ್ಬ ಸಿಬ್ಬಂದಿ ಮೈಕ್ ಮೂಲಕ ಇಡೀ ಸರ್ಕಲ್ ಸೇರಿದಂತೆ ನಾಲ್ಕೂ ರಸ್ತೆಗಳ 50 ಮೀಟರ್ ದೂರದವರೆಗಿನ ವಾಹನ ಸಂಚಾರವನ್ನು ಸುಲಭವಾಗಿ ನಿಭಾಯಿಸುತ್ತಿದ್ದಾರೆ.
ವಾಹನ ಸವಾರರು, ಪಾದಚಾರಿಗಳು ಮೈಕ್ ಸಹಕಾರದಿಂದ ಈ ಸರ್ಕಲ್‌ನಲ್ಲಿ ಸುಲಭವಾಗಿ ಸಂಚರಿಸುತ್ತಿದ್ದಾರೆ. ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಸರ್ಕಲ್‌ನ ಗಿರಕಿ ಹೊಡೆಯುತ್ತಿದ್ದ ಆಟೋಗಳು, ಕಾರ್ ಪಾರ್ಕಿಂಗ್, ಫುಟ್‌ಪಾತ್ ವ್ಯಾಪಾರಿಗಳು ರಸ್ತೆ ಅಕ್ರಮಿಸಿಕೊಳ್ಳುತ್ತಿದ್ದ ಸಮಸ್ಯೆಗೆ ಬಹುಮಟ್ಟಿಗೆ ಪರಿಹಾರ ಸಿಕ್ಕಿದೆ.
ಮೈಕ್ ಮೂಲಕವೆ 50 ಮೀ. ದೂರದಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರಿಗೆ ವಾಹನದ ಬಣ್ಣ ಹೇಳುವ ಮೂಲಕ, ತ್ರಿಬಲ್ ರೈಡಿಂಗ್, ಸಿಗ್ನಲ್ ಜಂಪ್ ಮಾಡುವವರಿಗೆ ಮೈಕ್‌ನಲ್ಲಿ ತಿಳಿ ಹೇಳುತ್ತಾ, ವಾಹನ ಸಂಚಾರವನ್ನು ಬಹು ಮಟ್ಟಿಗೆ ಸುಲಭಗೊಳಿಸಿದ್ದಾರೆ.
ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹರಿಹರದಲ್ಲಿ ಸಂಚಾರ ಠಾಣೆ ಮಂಜೂರಾಗುವುದು ಹದಗೆಟ್ಟಿರುವ ನಗರದ ವಾಹನ ಸಂಚಾರಕ್ಕೆ ಔಷಧಿಯಾಗಲಿದೆ. ಈ ಬಗ್ಗೆ ಜನಪ್ರತಿನಿಧಿಗಳು ಸರ್ಕಾರಕ್ಕೆ ಗಮನಕ್ಕೆ ತರಬೇಕಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಐರಣಿ ಹನುಮಂತಪ್ಪ.
‘ಸೌಲಭ್ಯಗಳು ಬೇಕು’
‘ಚಳ್ಳಕೆರೆಯಲ್ಲಿ ಸೇವೆ ಸಲ್ಲಿಸುವಾಗ ಮೈಕ್ ಮೂಲಕ ಸಂಚಾರ ನಿಯಂತ್ರಣ ಮಾಡಿದ ಅನುಭವ ಇತ್ತು. ಅದನ್ನು ಇಲ್ಲಿ ಅಳವಡಿಸಿದ್ದೇನೆ. ಕೋರಿಕೆ ಮೇರೆಗೆ ಇಷ್ಟರಲ್ಲೇ 2 ಟ್ರಾಫಿಕ್ ಬೂತ್ ಬರಲಿವೆ. ನಗರಸಭೆಯಿಂದ ಸೈನ್ ಬೋರ್ಡ್ ಕೆಟ್ಟಿರುವ ಸಿಗ್ನಲ್ ರಿಪೇರಿ ರಸ್ತೆ ಅಕ್ರಮಿಸಿಕೊಂಡಿರುವ ವ್ಯಾಪಾರಿಗಳ ತೆರವು ಸಿ.ಸಿ.ಟಿ.ವಿ ಅಳವಡಿಕೆ ಮಾಡಿದರೆ ನಗರದಲ್ಲಿ ವಾಹನ ಸಂಚಾರ ಇನ್ನಷ್ಟು ಸುಧಾರಣೆ ಮಾಡಬಹುದೆನ್ನುತ್ತಾರೆ ನಗರಠಾಣೆ ಇನ್‌ಸ್ಪೆಕ್ಟರ್ ಆರ್.ಎಫ್. ದೇಸಾಯಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.