ADVERTISEMENT

ಜಗಳೂರು: ಭಾರಿ ಮಳೆಗೆ ಮೈದುಂಬಿದ ಹಳ್ಳಕೊಳ್ಳ

ಜಗಳೂರು: 70 ಹೆಕ್ಟೇರ್ ಬೆಳೆ ನಾಶ, 17 ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 16:09 IST
Last Updated 14 ಆಗಸ್ಟ್ 2024, 16:09 IST
ಜಗಳೂರು ತಾಲ್ಲೂಕಿನ ದೊಣೆಹಳ್ಳಿ-ಬಿದಕರೆರೆ ಮಾರ್ಗದ ರಸ್ತೆಯ ಮೇಲೆ ಹಳ್ಳ ಹರಿಯುತ್ತಿದ್ದು, ರಸ್ತೆ ಸಂಚಾರ ಸ್ಥಗಿತವಾಗಿತ್ತು
ಜಗಳೂರು ತಾಲ್ಲೂಕಿನ ದೊಣೆಹಳ್ಳಿ-ಬಿದಕರೆರೆ ಮಾರ್ಗದ ರಸ್ತೆಯ ಮೇಲೆ ಹಳ್ಳ ಹರಿಯುತ್ತಿದ್ದು, ರಸ್ತೆ ಸಂಚಾರ ಸ್ಥಗಿತವಾಗಿತ್ತು   

ಜಗಳೂರು: ಬುಧವಾರ ಮುಂಜಾನೆ ಗುಡುಗು ಮಿಂಚುಗಳ ಆರ್ಭಟದೊಂದಿಗೆ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು, ತಾಲ್ಲೂಕಿನ ಬಹುತೇಕ ಚೆಕ್ ಡ್ಯಾಂಗಳು, ಗೋಕಟ್ಟೆಗಳು ಭರ್ತಿಯಾಗಿ ಹಳ್ಳಗಳು ಕೆರೆಗಳತ್ತ ಮೈದುಂಬಿ ಹರಿಯುತ್ತಿವೆ. 

ಸತತ ಎರಡು ತಾಸು ಬಿರುಸು ಮಳೆಯಾದ ಕಾರಣ ಹೊಲಗಳಲ್ಲಿರುವ ಏರಿಗಳು, ಒಡ್ಡುಗಳು ಒಡೆದು ಬೆಳೆಗಳು ನೀರಿನಿಂದ ಆವೃತವಾಗಿವೆ. 17ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ. 

ಪ್ರಸಕ್ತ ಮುಂಗಾರಿನಲ್ಲಿ ನಿರಂತರವಾಗಿ ತುಂತುರು ಮಳೆಯಾಗಿದ್ದು ಹೊರತುಪಡಿಸಿ ಕಳೆದ ಎರಡು ವರ್ಷದಿಂದ ಒಂದೇ ಒಂದು ದೊಡ್ಡ ಮಳೆಯಾಗಿರಲಿಲ್ಲ. ಕಳೆದ ವರ್ಷ ಮಳೆ ಇಲ್ಲದೇ ಬೆಳೆಹಾನಿಯಾಗಿ ಅಪಾರ ಹಾನಿ ಅನುಭವಿಸಿದ್ದ ರೈತರಿಗೆ ಮಳೆ ಸಂತಸ ತಂದಿದೆ. ಸಾವಿರಾರು ಹೆಕ್ಟೇರ್‌ನಲ್ಲಿರುವ ಮೆಕ್ಕೆಜೋಳ, ಹತ್ತಿ, ಸೂರ್ಯಕಾಂತಿ, ಶೇಂಗಾ ಮುಂತಾದ ಬೆಳೆಗಳಿಗೆ ಸಕಾಲದಲ್ಲಿ ಸಮೃದ್ಧವಾಗಿ ಮಳೆಯಾಗಿರುವುದು ರೈತರಲ್ಲಿ ನಿರೀಕ್ಷೆಗಳು ಗರಿಗೆದರಿವೆ. 

ADVERTISEMENT

ತಾಲ್ಲೂಕಿನ ದೊಡ್ಡ ಕೆರೆಗಳಾಗಿರುವ ಜಗಳೂರು ಕೆರೆ, ಗಡಿಮಾಕುಂಟೆ ಕೆರೆ ಹಾಗೂ ಭರಮಸಮುದ್ರ ಕೆರೆಗಳಿಗೆ ಇಡೀ ದಿನ ಹಳ್ಳದ ನೀರು ಹರಿಯಿತು. 

‘ತಾಲ್ಲೂಕಿನಲ್ಲಿ 72 ಮಿ.ಮೀ ಮಳೆಯಾಗಿದೆ. ಪಟ್ಟಣ ಹಾಗೂ ತಾಲೂಕಿನ ಉದ್ದಗಟ್ಟ, ಸಿದ್ದಮ್ಮನಹಳ್ಳಿ, ಚಿಕ್ಕಮಲ್ಲನಹೊಳೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ 17 ಮನೆಗಳು ಕುಸಿತಗೊಂಡು ಭಾಗಶಃ ಹಾನಿಗೊಳಗಾಗಿವೆ. 70 ಹೆಕ್ಟೇರ್ ಪ್ರದೇಶದ ಜಮೀನಿನಲ್ಲಿ ಮೆಕ್ಕೆಜೋಳ, ಈರುಳ್ಳಿ, ಅಡಿಕೆ ಮುಂತಾದ ಬೆಳೆಗಳು ಜಲಾವೃತಗೊಂಡಿವೆ’ ಎಂದು ತಹಶೀಲ್ದಾರ್ ಕಲೀಂ ಉಲ್ಲಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. 

ತಾಲ್ಲೂಕಿನ ದೊಣೆಹಳ್ಳಿ –ಬಿದರಕೆರೆ ಮಾರ್ಗದ ರಸ್ತೆ, ಜಗಳೂರು-ಗಡಿಮಾಕುಂಟೆ ಹಾಗೂ ಗಿಡ್ಡನಕಟ್ಟೆ, ದೊಡ್ಡಬೊಮ್ಮನಹಳ್ಳಿ ಸೇರಿದಂತೆ ಕೆಲ ರಸ್ತೆ ಮಾರ್ಗಗಳಲ್ಲಿ ಸೇತುವೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. 

ಪಟ್ಟಣದಲ್ಲಿ ಜೆಸಿಆರ್ ಬಡಾವಣೆ, ಅಬ್ದುಲ್ ಲತೀಫ್ ಬಡಾವಣೆ, ಲೋಕೇಶ್ ರೆಡ್ಡಿ ಬಡಾವಣೆ, ತುಮಾಟಿ, ಬೈಪಾಸ್ ರಸ್ತೆ, ದೇವೇಗೌಡ ಬಡಾವಣೆಯ ತಗ್ಗು ಪ್ರದೇಶಗಳಲ್ಲಿ ಗುಡಿಸಲು ಮತ್ತು ಮನೆಗಳಿಗೆ ನೀರು ನುಗ್ಗಿದೆ. 

ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಸಮೀಪ ಜಿನಿಗಿ ಹಳ್ಳಕ್ಕೆ ನಿರ್ಮಿಸಿರುವ ಚೆಕ್ ಡ್ಯಾಂ ತುಂಬಿ ಹರಿಯುತ್ತಿದೆ.

ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಸಮೀಪ ಜಿನಿಗಿ ಹಳ್ಳಕ್ಕೆ ನಿರ್ಮಿಸಿರುವ ಚೆಕ್ ಡ್ಯಾಂ ತುಂಬಿ ಹರಿಯುತ್ತಿದೆ
ಜಗಳೂರು ತಾಲ್ಲೂಕಿನ ಭರಮಸಮುದ್ರ ಗ್ರಾಮದ ಸುಮಕ್ಕ ಎಂಬುವವರ ಮೆಕ್ಕೆಜೋಳ ಹೊಲ ಜಲಾವೃತವಾಗಿರುವುದು
ಜಗಳೂರು ತಾಲ್ಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದಲ್ಲಿ ಮಳೆಗೆ ಭಾಗಶಃ ಹಾನಿಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.