ದಾವಣಗೆರೆ: ಇಲ್ಲಿನ ಎಸ್‌ಪಿಎಸ್ 2ನೇ ಹಂತದ ಸರ್ವೆ ನಂ–145/2ಪಿಯ 3 ಎಕರೆ ಜಾಗವನ್ನು ತೆರವುಗೊಳಿಸಲು ಹೈಕೋರ್ಟ್ ಸೂಚಿಸಿದ್ದು, ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.
ಎಸ್‌ಪಿಎಸ್ 2ನೇ ಹಂತದ ಸರ್ವೆ ನಂ–145/2ಪಿಯ 3 ಎಕರೆ ಪ್ರದೇಶದಲ್ಲಿ ಅಂದಾಜು 136ಕ್ಕೂ ಹೆಚ್ಚು ಮನೆಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ ಸೂಚಿಸಿದ್ದು, ಪ್ರಕರಣವನ್ನು ತ್ವರಿತ ವಿಲೇವಾರಿಗಾಗಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿದೆ.
ಎಸ್‌ಪಿಎಸ್ 2ನೇ ಹಂತದ ಸರ್ವೆ ನಂ–145/2ಪಿಯ 3 ಎಕರೆ ಜಾಗ ತಮಗೆ ಸೇರಿದ್ದು ಎಂದು ನಿವಾಸಿ ಆರಣಿ ರುದ್ರೇಶ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ರುದ್ರೇಶ್ ಪರ ತೀರ್ಪು ನೀಡಿದೆ. ಇದರಿಂದ ಜಾಗ ತೆರವುಗೊಳಿಸುವ ಭೀತಿ ಈ ಭಾಗದ ನಿವಾಸಿಗಳದ್ದು.
‘ಮನೆಗಳನ್ನು ನೆಲಸಮಗೊಳಿಸಿ ತಮ್ಮನ್ನು ತೆರವುಗೊಳಿಸಬಹುದು. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸಿಕೊಂಡು ದಶಕದಿಂದ ವಾಸಿಸುತ್ತಿರುವ ನಾವು ಏನು ಮಾಡುವುದು’ ಎಂಬ ಆತಂಕ ಅಲ್ಲಿನ ನಿವಾಸಿಗಳದ್ದು.
1999ರಲ್ಲಿ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಕೆ. ಶಿವರಾಂ ಅವರು ‘ಆಶ್ರಯ ಕಾಲೊನಿ’ ನಿರ್ಮಾಣಕ್ಕಾಗಿ ಜಾಗವನ್ನು ವಶಪಡಿಸಿಕೊಂಡಿದ್ದರು. ಅಲ್ಲಿ ಆಶ್ರಯ ಯೋಜನೆಯಡಿ ನಗರದ ನಿವಾಸಿಗಳಿಗೆ ಮನೆಯನ್ನು ನಿರ್ಮಿಸಿಕೊಡಲಾಗಿತ್ತು. ಎಸ್.ಎಂ. ಕೃಷ್ಣ ನಗರ ಹಾಗೂ ಎಸ್‌ಪಿಎಸ್ ನಗರದಲ್ಲಿ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಲಾಗಿತ್ತು.
ಜಾಗ ಸ್ವಾಧೀನ ವಿರೋಧಿಸಿ ಜಾಗದ ಮಾಲಿಕತ್ವ ತಮಗೆ ಸೇರಿದ್ದು ಎಂದು 1999ರಲ್ಲಿ ರುದ್ರೇಶ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಲ್ಲಿಂದ ಕಾನೂನು ಸಮರ ಆರಂಭವಾಗಿತ್ತು.
‘ನಂತರ ಹಲವು ವರ್ಷಗಳ ಕಾಲ ಅಧಿಕಾರಿಗಳೊಂದಿಗೆ ಪ್ರಕರಣ ಸಂಬಂಧ ವಾದ–ವಿವಾದ ನಡೆದಿತ್ತು. ಹಿಂದೆ ಪಟ್ಟಣಶೆಟ್ಟಿ ಜಿಲ್ಲಾಧಿಕಾರಿಯಾಗಿದ್ದಾಗ ಈ ಜಾಗಕ್ಕೆ ಪರ್ಯಾಯವಾಗಿ ಶಾಮನೂರಿನಲ್ಲಿ 5 ಎಕರೆ ಜಾಗ ನೀಡಲು ಮುಂದೆ ಬಂದಿದ್ದರು. ಆದರೆ ಅದು ಕಾರ್ಯಗತವಾಗಲಿಲ್ಲ. ನಂತರ ಹಲವು ಸುತ್ತಿನ ಮಾತುಕತೆ ಬಳಿಕವೂ ಯಾವುದೇ ಅಧಿಕಾರಿಗಳು ಸಮರ್ಪಕ ಕ್ರಮ ಕೈಗೊಳ್ಳಲಿಲ್ಲ’ ಎಂಬುದು ಆರಣಿ ರುದ್ರೇಶ್ ಅವರ ದೂರು.
ಜಾಗದ ಮಾಲೀಕತ್ವ ಕುರಿತ ಕಾನೂನು ಸಂಘರ್ಷದ ಅರಿವಿರದ ಇಲ್ಲಿನ ನಿವಾಸಿಗಳು ಮನೆ ನಿರ್ಮಿಸಿಕೊಂಡು ದಶಕ ಕಳೆದಿದೆ. ಈಗ ಮನೆ ತೆರವುಗೊಳಿಸಿದರೆ ನಾವು ಏನು ಮಾಡುವುದು ಎಂಬ ಭೀತಿ ಅಲ್ಲಿನ ನಿವಾಸಿಗಳದ್ದು. ಅಭಿವೃದ್ಧಿ ಕಾಮಗಾರಿಗಾಗಿ ಹೆಗಡೆ ನಗರ ಸ್ಥಳಾಂತರದ ಬಳಿಕ ಅಲ್ಲಿನ ನಿವಾಸಿಗಳ ಬದುಕು ಬೀದಿಗೆ ಬಿದ್ದಿದೆ. ‘ಇದೇ ರೀತಿ ನಮಗೂ ಆದರೆ ಏನು’ ಎಂಬ ಆತಂಕ ಎಸ್‌ಪಿಎಸ್ ನಗರದ ನಿವಾಸಿಗಳದ್ದು.
‘ಆಶ್ರಯ ಕಾಲೊನಿ ನಿರ್ಮಾಣ ಮಾಡುವಾಗಲೇ ಜಾಗದ ಸಂಬಂಧ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೆ. ಆದರೂ ಅದನ್ನು ಲೆಕ್ಕಿಸದೇ ಕಾಲೊನಿ ಮಾಡಿ ನಿವೇಶನ ಹಂಚಲಾಯಿತು. ಜಾಗದ ವಿವಾದ ನ್ಯಾಯಾಲಯದಲ್ಲಿ ಇರುವಾಗ ಯಾವುದೇ ಕಾಮಗಾರಿ ಮಾಡುವಂತಿಲ್ಲ. ಅದನ್ನು ಉಲ್ಲಂಘಿಸಿ ಮನೆಗಳ ನಿರ್ಮಾಣ ಮಾಡಲಾಯಿತು’ ಎಂದು ಆರಣಿ ರುದ್ರೇಶ್ ದೂರುತ್ತಾರೆ.
‘ನ್ಯಾಯಾಲಯದ ಆದೇಶದ ಕಾರಣ ಈ ಭಾಗದ ನಿವಾಸಿಗಳಲ್ಲಿ ಸಹಜವಾಗಿ ಆತಂಕ ಇದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿಯನ್ನೂ ಸಲ್ಲಿಸಲಾಗಿದೆ. ಏಕಾಏಕಿ ನಮ್ಮನ್ನು ತೆರವು ಮಾಡಿದರೆ ಏನು ಮಾಡುವುದು? ಈ ಬಗ್ಗೆ ಜಿಲ್ಲಾಡಳಿತ, ಜನಪ್ರನಿತಿಧಿಗಳು ಕ್ರಮ ಕೈಗೊಳ್ಳಬೇಕು’ ಎಂದು ನಿವಾಸಿ ಆರ್.ರವಿಕುಮಾರ್ ಒತ್ತಾಯಿಸಿದರು.
‘ಮನೆ ತೆರವುಗೊಳಿಸುತ್ತಾರೆ ಎಂದು ನಿವಾಸಿಗಳು ಆತಂಕಗೊಂಡಿದ್ದಾರೆ. ಜಿಲ್ಲಾಡಳಿತ ಜನರ ಭಯ ನಿವಾರಿಸಬೇಕು’ ಎಂದು ನಿವಾಸಿ ಪ್ರಭು ಮನವಿ ಮಾಡಿದರು.
‘ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಮಾಡಿದ್ದೇವೆ. ಮನೆಗಳನ್ನು ತೆರವು ಮಾಡದೇ ಆ ಜಾಗದ ಮಾಲೀಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಿ’ ಎಂದು ದಲಿತ ಸಂಘರ್ಷ ಸಮಿತಿಯ (ಶೋಷಿತರ ವಾದ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಪ್ಪ ಆಗ್ರಹಿಸಿದರು.
ಎಸ್‌ಪಿಎಸ್ ನಗರದ ನಿವಾಸಿಗಳ ಆತಂಕ ನಿವಾರಿಸಬೇಕು. ಯಾವುದೇ ಕಾರಣಕ್ಕೂ ನಿವಾಸಿಗಳನ್ನು ತೆರವುಗೊಳಿಸಬಾರದು. ಜಾಗದ ವಿವಾದವನ್ನು ಜಿಲ್ಲಾಡಳಿತ ಬಗೆಹರಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಆವರಗೆರೆವಾಸು ಕಾರ್ಮಿಕ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.