ADVERTISEMENT

ಹಿಜಾಬ್‌ ಅಂದರೆ ಸೆರಗು, ವಿವಾದವೇನಿದೆ: ಸಿ.ಎಂ. ಇಬ್ರಾಹಿಂ ಪ್ರಶ್ನೆ

ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 5:34 IST
Last Updated 14 ಫೆಬ್ರುವರಿ 2022, 5:34 IST
ಸಿ.ಎಂ. ಇಬ್ರಾಹಿಂ
ಸಿ.ಎಂ. ಇಬ್ರಾಹಿಂ   

ದಾವಣಗೆರೆ: ಹಿಜಾಬ್‌ ತಿಳಿಯುವುದರಲ್ಲೇ ತಪ್ಪು ಆಗಿದೆ. ಹಿಜಾಬ್‌ ಅಂದರೆ ತಲೆಗೆ ಹಾಕುವ ಸೆರಗು. ನಮ್ಮವ್ವ, ನಿಮ್ಮವ್ವ ಎಲ್ಲರೂ ಹಾಕಿಕೊಳ್ಳುತ್ತಿದ್ದರು ಇದರಲ್ಲಿ ವಿವಾದ ಮಾಡುವಂಥದ್ದೇನಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಪ್ರಶ್ನಿಸಿದರು.

ಸುದ್ದಿಗಾರರ ಜತೆಗೆ ಭಾನುವಾರ ಅವರು ಮಾತನಾಡಿ, ‘ಇಂದಿರಾ ಗಾಂಧಿ, ಪ್ರತಿಭಾ ಪಾಟೀಲ್‌ ಸೆರಗು ಹಾಕಿಕೊಳ್ಳುತ್ತಿದ್ದರು. ಮಾರವಾಡಿ ಸಮುದಾಯದವರು ಸೆರಗು ಹಾಕಿಕೊಳ್ಳುತ್ತಾರೆ. ಎಲ್ಲವರೂ ಅವರವರ ಸಂಸ್ಕೃತಿ. ಬಿಜೆಪಿಗೆ ಈ ಬಾರಿ ಚುನಾವಣೆಗೆ ಬೇರೆ ವಿಷಯ ಇರಲಿಲ್ಲ. ರಾಮಮಂದಿರ ಮುಗಿಯಿತು. ಗೋಹತ್ಯೆ ವಿಷಯ ಹಳತಾಯಿತು. ಹಾಗಾಗಿ ರಾಜಕಾರಣಕ್ಕಾಗಿ ವಿವಾದ ಮಾಡಲಾಗಿದೆ. ಕೆ.ಎಸ್‌. ಈಶ್ವರಪ್ಪ ಅವರ ಮಗನೇ ಕೇಸರಿ ಶಾಲು ಹಂಚಿರುವ ವಿಡಿಯೊ ವೈರಲ್‌ ಆಗಿದೆ’ ಎಂದು ಹೇಳಿದರು.

ಹಿಂದೆ ಬಟ್ಟೆಯೇ ಇಲ್ಲ ಎಂಬುದು ಚರ್ಚೆಯಾಗುತ್ತಿತ್ತು. ಈಗ ಇರುವ ಬಟ್ಟೆಯೇ ವಿವಾದವಾಗಿದೆ. ಸಮವಸ್ತ್ರ ಅಂದಾಗ ವಿದ್ಯಾರ್ಥಿನಿಯರು ವೇಲ್‌ ಕುತ್ತಿಗೆ ಮೇಲೆ ಹಾಕಿಕೊಂಡು ಬರುತ್ತಾರೆ. ಅದೇ ವೇಲನ್ನು ತಲೆ ಮೇಲೆ ಹಾಕಿದರೆ ಸಮಸ್ಯೆ ಏನು ಎಂದು ಕೇಳಿದರು.

ADVERTISEMENT

ರಾಜ್ಯದಲ್ಲಿ ಬದಲಾವಣೆ: ರಾಜ್ಯದಲ್ಲಿ ಕೋಮು ರಾಜಕೀಯ ಇಲ್ಲ. ಇಲ್ಲಿ ಜಾತಿ ರಾಜಕೀಯ ಇದೆ. ಲಿಂಗಾಯತರು, ಒಕ್ಕಲಿಗರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಈ ಪಂಚ ಶಕ್ತಿಗಳು ಯಾರ ಜತೆಗೆ ಹೋಗುತ್ತಾರೋ ಅವರು ಅಧಿಕಾರಕ್ಕೆ ಬರುತ್ತಾರೆ. ಉತ್ತಮ ಸರ್ಕಾರ ಬರುವ ಸಾಧ್ಯತೆ ಇದೆ ಎಂದು ಹೇಳಿದರು.

‘ಡಿ.ಕೆ. ಶಿವಕುಮಾರ್ ಬಗ್ಗೆ ಮಾತನಾಡಿದ ಸಲೀಂ ಅವರನ್ನು ಕಾಂಗ್ರೆಸ್‌ನಿಂದ ಅಮಾನತು ಮಾಡಿದರು. ಉಗ್ರಪ್ಪರ ಮೇಲೆ ಕ್ರಮ ಕೈಗೊಂಡಿಲ್ಲ. ಉಗ್ರಪ್ಪರನ್ನು ಮೊದಲು ಎಂಎಲ್‌ಸಿ ಮಾಡಿದ್ದೇ ನಾನು. ಅವರಿಗೆ ಓಡಾಡಲು ನನ್ನ ಹಳೇ ಕಾರು ನೀಡಿದ್ದೆ. ಅವರು ಸುಮ್ಮನಿರುವುದು ಒಳ್ಳೆಯದು. ಈಗಿನ ಬಿಜೆಪಿ ಸರ್ಕಾರ ಹೇಗೆ ಬಂತು ಎಂಬುದೂ ಗೊತ್ತಿದೆ. ಯಾರು ಕೂಡ ಸುಮ್ಮನೇ ನನ್ನನ್ನು ಕೆದಕಬಾರದು. ಕೆದಕಿದರೆ ಎಲ್ಲರನ್ನೂ ಬಜಾರಿಗೆ ಎಳೆಯಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ದಾವಣಗೆರೆಯಲ್ಲಿ ಮುಸ್ಲಿಮರಿಗೆ ಅವಕಾಶ ನೀಡಿ

‘ದಾವಣಗೆರೆಯಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಿರುವ ಕ್ಷೇತ್ರದಲ್ಲಿ ಅವರಿಗೆ ಅವಕಾಶ ಕೊಡಬೇಕು. ಎಲ್ಲವೂ ನನಗೇ ಬೇಕು ಎಂದು ಹೇಳಿದರೆ ಆಗಲ್ಲ. ಅಲ್ಪಸಂಖ್ಯಾತರಿಗೂ ಅವಕಾಶ ನೀಡಬೇಕು. ಅವರನ್ನೂ ಬೆಳೆಸಬೇಕು’ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಬಗ್ಗೆ ಸಿ.ಎಂ. ಇಬ್ರಾಹಿಂ ಪರೋಕ್ಷವಾಗಿ ಮಾತನಾಡಿದರು.

‘ನಾನು ರಾಜ್ಯ ರಾಜಕಾರಣ ಮಾಡಿದ್ದೇನೆಯೇ ಹೊರತು ಕ್ಷೇತ್ರ ರಾಜಕಾರಣ ಮಾಡಿಲ್ಲ. ಅಧಿಕಾರಕ್ಕಾಗಿ ಗೆಲ್ಲಬೇಕು ಎಂದಿದ್ದರೆ ನಾನು ಕ್ಷೇತ್ರ ರಾಜಕಾರಣ ಮಾಡುತ್ತಿದ್ದೆ. ಇಲ್ಲಿಯೂ ನಾನು ನಿಲ್ಲುವುದಿಲ್ಲ. ಆದರೆ ಸಮುದಾಯಕ್ಕೆ ಅವಕಾಶ ಸಿಗಬೇಕು. ಒಳ್ಳೆಯರು ರಾಜಕಾರಣಕ್ಕೆ ಬರಬೇಕು’ ಎಂದು ಹೇಳಿದರು.

ದಾವಣಗೆರೆ ರಾಜ್ಯದ ಮಧ್ಯದಲ್ಲಿದೆ. ಇಲ್ಲಿ ಒಂದು ಸಮಾವೇಶ ಮಾಡಬೇಕು ಎಂಬ ಉದ್ದೇಶ ಇದೆ. ಅಲ್ಪಸಂಖ್ಯಾತರು, ಲಿಂಗಾಯತರು, ಗೌಡರನ್ನು ಸೇರಿಸಿಕೊಂಡು ಅಲಿಂಗೌ ಎಂಬ ಕ್ರಾಂತಿಕಾರಿ ಹೋರಾಟ ಮಾಡಲು ಹೊರಟಿದ್ದೇವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.