
ಚನ್ನಗಿರಿ: ಸಾರ್ವಜನಿಕವಾಗಿ ಒಂದೇ ವೇದಿಕೆಯಡಿ 3 ನೇ ವರ್ಷದ ಹಿಂದೂ ಏಕತಾ ಗಣಪತಿ ವಿಸರ್ಜನೆ ಅಂಗವಾಗಿ ಭಾನುವಾರ ಪಟ್ಟಣದಲ್ಲಿ ಸಡಗರದಿಂದ ಶೋಭಾಯಾತ್ರೆ ನಡೆಯಿತು.
ಪಟ್ಟಣದ 27 ಸಮಾಜದವರು ಸೇರಿ ಒಂದೇ ವೇದಿಕೆಯಲ್ಲಿ ಹಿಂದೂ ಏಕತಾ ಗಣಪತಿಯನ್ನು ಪ್ರತಿಷ್ಠಾಪಿಸಿ 11 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದರು.
ಹಿಂದೂ ಏಕತಾ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಗೌರವಾಧ್ಯಕ್ಷ ವಡ್ನಾಳ್ ರಾಜಣ್ಣ ಟ್ರ್ಯಾಕ್ಟರ್ ಚಾಲನೆ ಮಾಡಿ ಯಾತ್ರೆಗೆ ಚಾಲನೆ ನೀಡಿದರು. ಡಿಜೆ ಸಂಗೀತಕ್ಕೆ ತಕ್ಕಂತೆ ಯುವಕರು ಕುಣಿದು ಕುಪ್ಪಳಿಸಿದರು.
ಡೊಳ್ಳು, ವೀರಗಾಸೆ, ನಾಸಿಕ್ ಡೋಲು, ಕೀಲು ಕುದುರೆ, ಗೊಂಬೆ ಕುಣಿತಗಳು ಮೆರವಣಿಗೆಯ ಕಳೆ ಹೆಚ್ಚಿಸಿದವು. ರಾಜಬೀದಿಗಳಲ್ಲಿ ವಿನಾಯಕ ಮೂರ್ತಿಯ ಮೆರವಣಿಗೆ ನಡೆಸಲಾಯಿತು. ಕಲ್ಲುಸಾಗರ ರಸ್ತೆ, ಗೌರಮ್ಮನ ಬೀದಿ, ಕಣದಸಾಲು ಬಡಾವಣೆ, ಬಿಇಒ ಕಚೇರಿ ರಸ್ತೆ. ಮಾರುತಿ ವೃತ್ತ, ಮೇಲಿನ ಬಸ್ ನಿಲ್ದಾಣದ ಮೂಲಕ ಮೆರವಣಿಗೆ ನಡೆಯಿತು.
ಸಮಿತಿ ಕಾರ್ಯದರ್ಶಿ ಸಿ.ಎಚ್. ಶ್ರೀನಿವಾಸ್, ಕೆ.ಆರ್. ಗೋಪಿ, ಉಪಾಧ್ಯಕ್ಷ ಎಚ್.ಬಿ. ಕೃಷ್ಣಪ್ಪ, ಸುರೇಶಾಚಾರ್, ಕೆಂಚಪ್ಪ, ಕೃಷ್ಣ ಉಪಾಧ್ಯ, ರಾಜಶೇಖರಯ್ಯ, ಸಿ.ಕೆ.ಎಚ್. ಮಹೇಶ್ವರಪ್ಪ, ಜಿ.ಪಿ. ರವಿಕುಮಾರ್, ಸಿ.ಆರ್. ಅಣ್ಣಯ್ಯ, ಎಂ.ಬಿ. ರಾಜಪ್ಪ, ಚಿನ್ನಸ್ವಾಮಿ, ಖಜಾಂಚಿಗಳಾದ ಸಿ. ನಾಗರಾಜ್, ಎ.ಸಿ. ಚಂದ್ರು, ಕೆ.ಎಸ್. ರಾಜು ಇದ್ದರು.
ಶೋಭಾಯಾತ್ರೆಯ ಅಂಗವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಡಿವೈಎಸ್ ಪಿ ಮಂಜುನಾಥ್ ಕೆ. ಗಂಗಲ್ ನೇತೃತ್ವವನ್ನು ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.