ADVERTISEMENT

ಬಡವರ ಪರ ಹೋರಾಟ ಹೃದಯವಂತಿಕೆಗೆ ಸಾಕ್ಷಿ

ಎಚ್.ಕೆ.ರಾಮಚಂದ್ರಪ್ಪಗೆ ನುಡಿನಮನ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:46 IST
Last Updated 8 ಮೇ 2025, 15:46 IST
ದಾವಣಗೆರೆಯ ಐಟಿಐ ಕಾಲೇಜು ಆವರಣದ ಚೌಡೇಶ್ವರಿ ಸಮುದಾಯ ಭವನದಲ್ಲಿ ಗುರುವಾರ ಎಚ್.ಕೆ.ರಾಮಚಂದ್ರಪ್ಪ ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು
ದಾವಣಗೆರೆಯ ಐಟಿಐ ಕಾಲೇಜು ಆವರಣದ ಚೌಡೇಶ್ವರಿ ಸಮುದಾಯ ಭವನದಲ್ಲಿ ಗುರುವಾರ ಎಚ್.ಕೆ.ರಾಮಚಂದ್ರಪ್ಪ ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು   

ದಾವಣಗೆರೆ: ‘ಬಡವರ ಪರವಾಗಿ ಕಾರ್ಮಿಕ ಮುಖಂಡ ಎಚ್.ಕೆ.ರಾಮಚಂದ್ರಪ್ಪ ಅವರು ನಡೆಸಿದ್ದಂತಹ ಹೋರಾಟ ಅವರ ಹೃದಯವಂತಿಕೆಗೆ ಸಾಕ್ಷಿಯಾಗಿದೆ’ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅಭಿಪ್ರಾಯಪಟ್ಟರು.

ಇಲ್ಲಿನ ಐಟಿಐ ಕಾಲೇಜು ಆವರಣದ ಚೌಡೇಶ್ವರಿ ಸಮುದಾಯ ಭವನದಲ್ಲಿ ‘ಕರ್ನಾಟಕ ರಾಜ್ಯ ದಿ.ಕಾಮ್ರೆಡ್ ಎಚ್.ಕೆ.ರಾಮಚಂದ್ರಪ್ಪ ಅಸಂಘಟಿತ ಕಾರ್ಮಿಕರ ಫೆಡರೇಷನ್’ ವತಿಯಿಂದ ಗುರುವಾರ ಆಯೋಜಿಸಿದ್ದ ದಿ. ಎಚ್.ಕೆ.ರಾಮಚಂದ್ರಪ್ಪ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ಕಾರ್ಮಿಕ ಸಂಘಟನೆಗಳು ವ್ಯಕ್ತಿಗತ ಲಾಭಕ್ಕೆ ಸೀಮಿತವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಂಘಟನೆಗಳು ಸದಾ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಹೋರಾಟಗಾರ ಪಂಪಾಪತಿ ಅವರ ಮಾರ್ಗದರ್ಶನದಲ್ಲಿ ಬೆಳೆದ ಎಚ್.ಕೆ.ರಾಮಚಂದ್ರಪ್ಪ ಅವರು ಕಾರ್ಮಿಕರ ಪರ ಹೋರಾಟ ನಡೆಸಿ ನ್ಯಾಯ ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಚ್‌ಕೆಆರ್‌ ನಗರಸಭೆಯ ಅಧ್ಯಕ್ಷರಾಗಿದ್ದಾಗ ಕಾರ್ಮಿಕರಿಗೆ ನಿವೇಶನ ಹಾಗೂ ವಸತಿ ಸೌಲಭ್ಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು’ ಎಂದರು. 

ADVERTISEMENT

‘ಎಚ್.ಕೆ.ರಾಮಚಂದ್ರಪ್ಪ ಕೇವಲ ವ್ಯಕ್ತಿಯಾಗಿರಲಿಲ್ಲ, ಅವರು ನಾಲ್ಕು ದಶಕಗಳ ಕಾರ್ಮಿಕ ಚಳವಳಿಯ ಜೀವಂತ ಸಾಕ್ಷಿಯಾಗಿದ್ದರು’ ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಘಟಕದ ಸಂಚಾಲಕ ಎ.ಬಿ.ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

‘ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿ ಹಲವು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು. ಅವರ ಅಗಲಿಕೆ ದಾವಣಗೆರೆಯ ಚಳವಳಿಗೆ ಒಂದು ದೊಡ್ಡ ನಷ್ಟವಾಗಿದ್ದು, ಅನುಪಸ್ಥಿತಿಯು ಸ್ಪಷ್ಟವಾಗಿ ಗೋಚರಿಸುತ್ತಿದೆ’ ಎಂದರು.

‘ದಾವಣಗೆರೆಯಲ್ಲಿ ಇಂದಿಗೂ ಕಾರ್ಮಿಕ ವರ್ಗದ ಪ್ರಾಬಲ್ಯವಿದೆ. ಇಲ್ಲಿ ಎಲ್ಲಾ ಬಗೆಯ ಕಾರ್ಮಿಕರು ಸಂಘಟಿತರಾಗಿ ಉತ್ತಮ ಜೀವನ ನಡೆಸುತ್ತಿದ್ದಾರೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ವೇತನ ₹400 ರಿಂದ ₹ 4,500 ಹೆಚ್ಚಳ ಆಗುವಲ್ಲಿ ರಾಮಚಂದ್ರಪ್ಪ ಅವರ ಹೋರಾಟ ಮಹತ್ವದ ಪಾತ್ರ ವಹಿಸಿತ್ತು’ ಎಂದು ಹೇಳಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್ ಕುಮಾರ್, ಮುಖಂಡರಾದ ಹೆಗ್ಗೆರೆ ರಂಗಪ್ಪ, ಆವರಗೆರೆ ಪರಮೇಶ್, ಎನ್.ಟಿ.ಬಸವರಾಜ್, ವಿಶಾಲಾಕ್ಷಮ್ಮ, ಹೊನ್ನಪ್ಪ ಮರಿಯಮ್ಮನವರ್, ಆವರಗೆರೆ ವಾಸು, ಮೃತ್ಯುಂಜಯ, ಶಾರದಮ್ಮ, ಸರ್ವಮ್ಮ, ಕಾಳಮ್ಮ, ಗಾಯತ್ರಿ ಜಾಧವ್, ಬಸುಲಾ ಕಿಲೇದಾರ್, ಬಸವರಾಜ್ ಶೀಲವಂತ, ನಾಗರತ್ನಮ್ಮ ಬಳ್ಳಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ದಾವಣಗೆರೆಯ ಅಶೋಕ ರಸ್ತೆಯಲ್ಲಿರುವ ಪಂಪಾಪತಿ ಭವನದಲ್ಲಿ ಸಿಪಿಐ ಹಾಗೂ ಎಐಟಿಯುಸಿ ವತಿಯಿಂದ ಹಿರಿಯ ಕಾರ್ಮಿಕ ಮುಖಂಡ ಎಚ್.ಕೆ.ರಾಮಚಂದ್ರಪ್ಪ ಅವರ 4ನೇ ವರ್ಷದ ಸ್ಮರಣೆ ಕಾರ್ಯಕ್ರಮ ನಡೆಯಿತು

ಎಚ್‌ಕೆಆರ್‌ 4ನೇ ವರ್ಷದ ಸ್ಮರಣೆ

ಇಲ್ಲಿನ ಅಶೋಕ ರಸ್ತೆಯಲ್ಲಿರುವ ಪಂಪಾಪತಿ ಭವನದಲ್ಲಿ ಸಿಪಿಐ ಹಾಗೂ ಎಐಟಿಯುಸಿ ವತಿಯಿಂದ ಹಿರಿಯ ಕಾರ್ಮಿಕ ಮುಖಂಡ ಎಚ್.ಕೆ.ರಾಮಚಂದ್ರಪ್ಪ ಅವರ 4ನೇ ವರ್ಷದ ಸ್ಮರಣೆ ಕಾರ್ಯಕ್ರಮ ನಡೆಯಿತು. ಕನ್ನಡ ಚಳವಳಿ ಹಿರಿಯ ಹೋರಾಟಗಾರ ಬಂಕಾಪುರ ಚನ್ನಬಸಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೀರಶೈವ ಲಿಂಗಾಯತ ಮಹಾಸಭಾದ ಮುಖಂಡ ಎಂ.ಶಿವಕುಮಾರ್ ಸಿಪಿಐ ಮುಖಂಡ ಜಿ.ಎ.ಬಸವರಾಜ್ ಮಾತನಾಡಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಅಧ್ಯಕ್ಷತೆ ವಹಿಸಿದ್ದರು.‌ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಜಿ.ಉಮೇಶ್ ಕಾರ್ಯಕ್ರಮ ನಿರ್ವಹಿಸಿದರು. ಇಫ್ತಾ ಭಾರತೀಯ ಜನಕಲಾ ಸಮಿತಿ ಸದಸ್ಯರು ಜಾಗೃತಿ ಗೀತೆ ಹಾಡಿದರು. ಪ್ರಮುಖರಾದ ಎಚ್.ಕೆ.ಕೊಟ್ರಪ್ಪ ಮಹಮ್ಮದ್ ರಫೀಕ್ ಜಿ.ಯಲ್ಲಪ್ಪ ಕೆ.ಜಿ.ಶಿವಮೂರ್ತಿ ಮಹಮ್ಮದ್ ಬಾಷಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.