
ದಾವಣಗೆರೆ: ‘ಮನೆಯಲ್ಲಿ ಗ್ರಂಥಾಲಯವನ್ನು ಹೊಂದಿದ್ದರೆ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಹೆಚ್ಚಿಸಬಹುದು’ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅಭಿಪ್ರಾಯಪಟ್ಟರು.
ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಆಶ್ರಯದಲ್ಲಿ ಬುಧವಾರ ನಡೆದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಅನುಷ್ಠಾನ ಹಾಗೂ ಜಿಲ್ಲಾ ಜಾಗೃತಿ ಸಮಿತಿ ರಚನಾ ಸಭೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಮನೆಯಲ್ಲೊಂದು ಗ್ರಂಥಾಲಯವಿದ್ದರೆ, ಪುಸ್ತಕಗಳ ಖರೀದಿಯೂ ಹೆಚ್ಚುತ್ತದೆ. ಇದರಿಂದ ಮನೆಯ ಸದಸ್ಯರ ಪುಸ್ತಕ ಪ್ರೀತಿ ದುಪ್ಪಟ್ಟಾಗುತ್ತದೆ. ದಾವಣಗೆರೆಯಲ್ಲಿ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಗುರಿ ಹೊಂದಲಾಗಿದೆ’ ಎಂದು ತಿಳಿಸಿದರು.
‘ತಂತ್ರಜ್ಞಾನದ ಈ ಕಾಲದಲ್ಲಿ ಪುಸ್ತಕಗಳು ಸುಲಭವಾಗಿ ದೊರೆಯುತ್ತಿವೆ. ಆದರೆ, ಓದುವವರ ಸಂಖ್ಯೆ ಕ್ಷೀಣಿಸಿದೆ. ಪುಸ್ತಕಗಳ ಓದನ್ನು ಹೆಚ್ಚಿಸಲು ‘ಅಂಗಳದಲ್ಲಿ ತಿಂಗಳ’ ಕಾರ್ಯಕ್ರಮ ಅನುಷ್ಠಾನಕ್ಕೆ ತರಲಾಯಿತು’ ಎಂದರು.
‘ಪುಸ್ತಕಗಳನ್ನು ಖರೀದಿಸಿ ಓದುವ ಪ್ರವೃತ್ತಿಯನ್ನು ಬೆಳೆಸುವುದರ ಜೊತೆಗೆ ಪುಸ್ತಕ ಪ್ರೀತಿಯನ್ನು ಹೆಚ್ಚಿಸುವುದು ಜನಸಾಮಾನ್ಯರ ಕರ್ತವ್ಯವೂ ಹೌದು. ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದ ಉದ್ದೇಶವು ಪುಸ್ತಕ ಪ್ರೀತಿಯನ್ನು ಬೆಳೆಸುವುದಾಗಿದೆ’ ಎಂದು ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಬಿ. ವಾಮದೇವಪ್ಪ ಹೇಳಿದರು.
ಸಾಹಿತಿ ಎನ್.ಟಿ.ಎರ‍್ರಿಸ್ವಾಮಿ ಅವರು ಕರಪತ್ರ ಬಿಡುಗಡೆ ಮಾಡಿದರು.
ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ, ಶ್ರೀನಿವಾಸ ಕರಿಯಪ್ಪನವರ್, ಶಿವಪ್ರಸಾದ್, ರಾಜೇಂದ್ರ ಪ್ರಸಾದ್ ನೀಲಗುಂದ, ಫಕ್ಕೀರೇಷ ಆದಾಪುರ, ಅನ್ನಪೂರ್ಣಮ್ಮ ಪಾಟೀಲ, ಟಿ.ಎಸ್. ಶೈಲಜಾ, ಸುಕನ್ಯಾ ತ್ಯಾವಣಿಗೆ, ಕೆ.ಜಿ. ಸರೋಜಾ, ನಾಗರಾಜ್ ಪಾಂಡೋಮಟ್ಟಿ, ಹಿರಿಯ ಕಲಾವಿದ ಮಹಾಲಿಂಗಪ್ಪ, ಹಿರಿಯ ಸಾಹಿತಿ ಕುಲಕರ್ಣಿ ಸೇರಿದಂತೆ ಇನ್ನಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.