ADVERTISEMENT

ದಾವಣಗೆರೆ: ಮನೆ ಮನೆಗೆ ಮಕ್ಕಳ ಅರಿಶಿನ ಗಣಪ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಂದ ಜಾಗೃತಿ ಅಭಿಯಾನ

ಚಂದ್ರಶೇಖರ ಆರ್‌.
Published 21 ಆಗಸ್ಟ್ 2020, 15:31 IST
Last Updated 21 ಆಗಸ್ಟ್ 2020, 15:31 IST
ಮನೆಗಳಿಗೆ ಅರಿಶಿನದ ಗಣೇಶ ಮೂರ್ತಿ ಹಂಚುತ್ತಿರುವ ವಿದ್ಯಾರ್ಥಿನಿ
ಮನೆಗಳಿಗೆ ಅರಿಶಿನದ ಗಣೇಶ ಮೂರ್ತಿ ಹಂಚುತ್ತಿರುವ ವಿದ್ಯಾರ್ಥಿನಿ   

ದಾವಣಗೆರೆ: ಗಣೇಶ ಹಬ್ಬದಲ್ಲಿ ಪರಿಸರಸ್ನೇಹಿ ಗಣಪನ ಮೂರ್ತಿಗೆ ಒತ್ತು ನೀಡಬೇಕು ಎಂಬ ಕೂಗಿಗೆ ಇಲ್ಲಿನ ಮಕ್ಕಳು ದನಿಯಾಗಿದ್ದಾರೆ. ಮನೆ ಮನೆಗೆ ಅರಿಶಿನ, ಮಣ್ಣಿನ ಗಣಪನನ್ನು ನೀಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

ಕೊರೊನಾ ಕಾರಣ ಇದಕ್ಕೆ ಹೆಚ್ಚಿನ ಮಹತ್ವ ಬಂದಿದೆ.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆಯ ಬನ್ನಿ, ಕಬ್, ಬುಲ್ ಬುಲ್, ಸ್ಕೌಟ್ಸ್, ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಮನೆಯಲ್ಲೇ ಅರಿಶಿನ ಗಣಪತಿಯನ್ನು ಸಿದ್ಧಪಡಿಸಿ ಉಚಿತವಾಗಿ ನೆರೆಯವರಿಗೆ ಹಂಚುತ್ತಿದ್ದಾರೆ. ಶುಕ್ರವಾರ ಹಲವೆಡೆ ಮಕ್ಕಳು ಗಣಪನ ಮೂರ್ತಿ ಹಂಚಿದರು.

ADVERTISEMENT

ಏನಿದು ಜಾಗೃತಿ

ಗಣೇಶ ಹಬ್ಬದಲ್ಲಿ ಪಿಒಪಿ ಗಣಪ ಹಾಗೂ ಇತರೆ ರಾಸಾಯನಿಕಯುಕ್ತ ಗಣಪನ ವಿಗ್ರಹಗಳನ್ನು ಪ್ರತಿಷ್ಠಾಪಿಸುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದ್ದು, ಮಣ್ಣಿನ ಗಣಪನಿಗೆ ಪ್ರಾಮುಖ್ಯ ನೀಡಬೇಕು ಎಂಬ ಕೂಗು ಕೇಳಿಬರುತ್ತಿತ್ತು. ಇದನ್ನು ಮನಗಂಡ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಮಕ್ಕಳಿಗೆ ಅರಿಶಿನ ಹಾಗೂ ಮಣ್ಣಿನ ವಿನಾಯಕನ ಮೂರ್ತಿ ತಯಾರಿಸುವ ಕಾರ್ಯಾಗಾರ ನಡೆಸಿತು.

ಕೊರೊನಾ ಕಾರಣ ವೆಬಿನಾರ್‌, ಝೂಮ್‌ ಆ್ಯಪ್‌ ಮೂಲಕ ಕಾರ್ಯಾಗಾರ ನಡೆಸಿ, ಮಕ್ಕಳಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ 1000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷ. ಅರಿಶಿನ, ಮೈದಾ, ಗೋಧಿಹಿಟ್ಟಿನಿಂದ ಗಣಪನ ಮೂರ್ತಿ ಸಿದ್ಧಪಡಿಸಿದರು.

ಪಿಒಪಿ ಗಣಪನ ಬದಲು ಪರಿಸರ ಸ್ನೇಹಿ ಗಣಪತಿಯನ್ನು ಪ್ರತಿಷ್ಠಾಪಿಸಿ ಎಂದು ಜಾಗೃತಿ ಮೂಡಿಸುತ್ತಿದ್ದು, ಮನೆ ಮನೆಗೆ ಮೂರ್ತಿ ಹಂಚುತ್ತಿದ್ದಾರೆ.

ಅಲ್ಲದೇ ತಾವು ತಯಾರಿಸಿರುವ ಗಣಪತಿಯ ವಿಗ್ರಹ ಛಾಯಾಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವ ಮೂಲಕ ಜನಸಾಮಾನ್ಯರಲ್ಲಿ ಅರಿವು ಮೂಡಿಸುತ್ತಿದ್ದಾರೆ.

‘ಇದೊಂದು ವಿನೂತನ ಕಾರ್ಯಕ್ರಮ. ಜಿಲ್ಲೆಯ ಹರಿಹರ, ಚನ್ನಗಿರಿ, ಸಂತೇಬೆನ್ನೂರು ಸೇರಿ ಹಲವೆಡೆಯ ವಿದ್ಯಾರ್ಥಿಗಳು ಭಾಗವಹಿಸಿ ತಾವೇ ಗಣಪನನ್ನು ತಯಾರಿಸಿದ್ದಾರೆ. ಮಕ್ಕಳಿಂದ ಜಾಗೃತಿ ಮೂಡಿಸಿದರೆ ಅರ್ಥಪೂರ್ಣ ಎಂದು ಈ ಆಂದೋಲನ ಕೈಗೊಂಡಿದ್ದೇವೆ’ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಮುರುಘರಾಜೇಂದ್ರ ಚಿಗಟೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.