ADVERTISEMENT

ಹೊನ್ನಾಳಿ: ಹತ್ತೂರು ಶಾಲೆಗೆ 100ರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2025, 12:41 IST
Last Updated 9 ಫೆಬ್ರುವರಿ 2025, 12:41 IST
ಹೊನ್ನಾಳಿ ತಾಲ್ಲೂಕು ಹತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭವನ್ನು ಸಿದ್ದರಾಮೇಶ್ವರ ಶಿವಾಚಾರ್ಯ ಶ್ರೀ ಉದ್ಘಾಟಿಸಿದರು
ಹೊನ್ನಾಳಿ ತಾಲ್ಲೂಕು ಹತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭವನ್ನು ಸಿದ್ದರಾಮೇಶ್ವರ ಶಿವಾಚಾರ್ಯ ಶ್ರೀ ಉದ್ಘಾಟಿಸಿದರು   

ಹೊನ್ನಾಳಿ: ಸರ್ಕಾರಿ ಶಾಲೆಗಳು ಉಳಿಯುವುದೇ ದುಸ್ತರವಾಗಿರುವ ಈಗಿನ ಪರಿಸ್ಥಿತಿಯಲ್ಲಿ ಕನ್ನಡ ಶಾಲೆಯೊಂದು ನೂರು ವಸಂತಗಳನ್ನು ಪೂರೈಸಿ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿರುವುದು ಸಂತಸದ ಸಂಗತಿಯಾಗಿದೆ ಎಂದು ನಂದಿಗುಡಿ ಬೃಹನ್ಮಠದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. 

ತಾಲ್ಲೂಕಿನ ಹತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಶನಿವಾರ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಶಾಲೆ (1925) ಆರಂಭಗೊಂಡು 2025ಕ್ಕೆ ನೂರು ವರ್ಷ ಪೂರೈಸಿದೆ. ಇಲ್ಲಿ ಓದಿದ ಹಳೆ ವಿದ್ಯಾರ್ಥಿಗಳ ಒಕ್ಕೂಟ, ಮೇಲುಸ್ತುವಾರಿ ಸಮಿತಿ, ಗ್ರಾಮ ಪಂಚಾಯಿತಿ, ಗ್ರಾಮಸ್ಥರ ಸಹಯೋಗದಲ್ಲಿ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ADVERTISEMENT

ಹತ್ತೂರು, ಮಾದೇನಹಳ್ಳಿ, ಜೀನಹಳ್ಳಿ ಸೇರಿದಂತೆ ಈ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟು ಶಿಕ್ಷಣ ಸಂಸ್ಥೆಗಳನ್ನು ಪೋಷಿಸಿದವರು ಜೆ.ರಾಮಪ್ಪ ಎಂದು ಶಾಸಕ ಡಿ.ಜಿ.ಶಾಂತನಗೌಡ ಸ್ಮರಿಸಿದರು.

‘ನಮ್ಮ ದೇಶ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ನೀಡುತ್ತಿದೆ ಎಂದರೆ ಅದಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆ, ಸಂಸ್ಕೃತಿ, ಸಂಸ್ಕಾರಗಳು ಕಾರಣ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಭಿಪ್ರಾಯಪಟ್ಟರು.

ಮಾಜಿ ಶಾಸಕ ಡಿ.ಬಿ.ಗಂಗಪ್ಪ, ಬಿಇಒ ಕೆ.ಟಿ.ನಿಂಗಪ್ಪ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎನ್.ಪಿ.ಮಂಜುಳಾ, ಶಾಲೆಯ ಮುಖ್ಯ ಶಿಕ್ಷಕ ಮೇಘರಾಜ್ ಮಾತನಾಡಿದರು. ಸಮುದಾಯ ಭವನದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಶಾಲೆಯಲ್ಲಿ ಓದಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದವರು, ನಿವೃತ್ತ ಶಿಕ್ಷಕರು, ಗ್ರಾಮದ ಹಿರಿಯರನ್ನು ಸನ್ಮಾನಿಸಲಾಯಿತು.

ನಿವೃತ್ತ ಶಿಕ್ಷಕರಾದ ಜಯಪ್ಪ, ಎಸ್.ಡಿ.ಎಂ.ಸಿ. ಅಧ್ಯಕ್ಷ ಡಿ.ವಿ.ಉಮೇಶ, ಕೃಷಿಕ ದೊಡ್ಡಬಸಪ್ಪ, ಮುಖಂಡ ನೇಮಿಚಂದ್ರಪ್ಪ, ಎಂ. ಈಶ್ವರಪ್ಪ, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.