ADVERTISEMENT

ವಸತಿ ಶಾಲೆ ನಿರ್ಮಾಣಕ್ಕೆ ₹ 50 ಕೋಟಿ ಅನುದಾನ

ತಾಲ್ಲೂಕು ಬಂಜಾರ ಸೇವಾ ಸಂಘದಿಂದ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 6:16 IST
Last Updated 12 ಅಕ್ಟೋಬರ್ 2025, 6:16 IST
ಹೊನ್ನಾಳಿಯ ಹಿರೇಕಲ್ಮಠದಲ್ಲಿ ನಡೆದ ಸಮಾರಂಭದಲ್ಲಿ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಮಾತನಾಡಿದರು
ಹೊನ್ನಾಳಿಯ ಹಿರೇಕಲ್ಮಠದಲ್ಲಿ ನಡೆದ ಸಮಾರಂಭದಲ್ಲಿ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಮಾತನಾಡಿದರು   

ಹೊನ್ನಾಳಿ: ‘ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿರುವ ಸೇವಾಲಾಲ್ ಜನ್ಮಸ್ಥಳದಲ್ಲಿ ಬಂಜಾರ ಸಮುದಾಯದಿಂದ ವಲಸೆ ಹೋಗುವ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವ ದೃಷ್ಠಿಯಿಂದ ನಮ್ಮ ಸರ್ಕಾರ ವಸತಿ ಶಾಲೆ ನಿರ್ಮಾಣಕ್ಕೆ ₹ 50 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಟೆಂಡರ್ ಕರೆಯಲಾಗಿದೆ’ ಎಂದು ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಹೇಳಿದರು.

ಶನಿವಾರ ಹಿರೇಕಲ್ಮಠದಲ್ಲಿ ತಾಲ್ಲೂಕು ಬಂಜಾರ (ಲಂಬಾಣಿ) ಸೇವಾ ಸಂಘದಿಂದ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

‘ಶಿವಮೊಗ್ಗದಿಂದ ಸೂರಗೊಂಡನಕೊಪ್ಪ ಮೂಲಕ ರಾಣೆಬೆನ್ನೂರಿಗೆ ರೈಲು ವ್ಯವಸ್ಥೆ ಮಾಡಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿಯೇ ರೈಲು ಹೊರಡಲಿದೆ. ಇದಕ್ಕೆ ಕಾರಣರಾದ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಅಭಿನಂದಿಸಲಾಗುವುದು’ ಎಂದರು.

ADVERTISEMENT

‘ಬಂಜಾರ ಭವನ ನಿರ್ಮಾಣಕ್ಕೆ ಶಾಸಕ ಶಾಂತನಗೌಡರು ಹಾಗೂ ಬಯಲು ಸೀಮೆ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಅವರು ತಮ್ಮ ಅನುದಾನದ ನೀಡಬೇಕು’ ಎಂದು ಮನವಿ ಮಾಡಿದರು.

ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ‘ಬಂಜಾರ ಸಮುದಾಯದೊಂದಿಗೆ ನಮ್ಮ ಸಂಬಂಧ ಉತ್ತಮವಾಗಿದ್ದು, ಸೂರಗೊಂಡನಕೊಪ್ಪದಲ್ಲಿ ವಸತಿ ಶಾಲೆಗೆ ₹ 50 ಕೋಟಿ ಅನುದಾನವನ್ನು ನಮ್ಮ ಸರ್ಕಾರದಿಂದ ಬಿಡುಗಡೆ ಮಾಡಿಸಿದ್ದೇನೆ ಎಂದರು. ಸಮುದಾಯ ಅನೇಕ ಪ್ರತಿಭಾವಂತರನ್ನು ಹೊಂದಿದ್ದು, ಅವರಿಗೆ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ’ ಎಂದರು.

ರಾಜ್ಯ ಬಯಲುಸೀಮೆ ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಬಂಜಾರ ಸಮುದಾಯ ತಾಲ್ಲೂಕಿನಲ್ಲಿ ಇದುವರೆಗೂ ಒಂದೇ ಒಂದು ಜಾತಿ ನಿಂದನೆ ದೂರು ದಾಖಲಿಸಿಲ್ಲ. ಮೀಸಲಾತಿ ವಿಚಾರದಲ್ಲಿ ಸರ್ಕಾರ ಅಳೆದು ತೂಗಿ ಒಂದು ತೀರ್ಮಾನಕ್ಕೆ ಬಂದಿದೆ. ಆದರೂ ಮನವಿಯನ್ನು ಸರ್ಕಾರದ ಗಮನ ತರುವ ಪ್ರಯತ್ನ ಮಾಡಲಾಗುವುದು ಎಂದರು.

ಇನ್‌ಸೈಟ್‌ ಐಎಎಸ್‌ನ ಸಂಸ್ಥಾಪಕ ವಿನಯ್‍ಕುಮಾರ್ ಮಾತನಾಡಿ, ವಲಸೆ ಹೋಗುವ, ಕೂಲಿ ಮಾಡುವವರ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ಬಂದರೆ ಅವರಿಗೆ ಉಚಿತ ತರಬೇತಿ ಕೊಡಿಸುತ್ತೇನೆ ಎಂದರು. 

ಎನ್‍ಎಸ್‍ಎಸ್ ಕ್ಷೇತ್ರದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಲೋಕೇಶ್ ನಾಯ್ಕ, ಮೌಂಟ್ ಎವರೆಸ್ಟ್ ಶಿಖರ ಏರಿದ ವಿಕ್ರಂ ನಾಯ್ಕ ಸೇರಿದಂತೆ ಜಿಲ್ಲಾ ಉತ್ತಮ ಶಿಕ್ಷಕ ಪಡೆದ ಪ್ರತಿಭಾವಂತರಿಗೆ, ನಾಯಕ್, ಡಾವ್, ಕಾರಬಾರಿಗಳಿಗೆ ಹಾಗೂ ಗಣ್ಯರಿಗೆ ಸನ್ಮಾನಿಸಲಾಯಿತು.

ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವನಾಯ್ಕ, ಬಂಜಾರ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಂಜನಾಯ್ಕ, ಮುಖಂಡರಾದ ಎಚ್.ಎ. ಉಮಾಪತಿ, ಆರ್. ನಾಗಪ್ಪ ಮಾತನಾಡಿದರು.

ಬಂಜಾರ ಸೇವಾ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರವಿನಾಯ್ಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಎಲ್. ರುದ್ರನಾಯ್ಕ, ಕಾರ್ಯದರ್ಶಿ ಕೃಷ್ಣನಾಯ್ಕ, ಉಪಾಧ್ಯಕ್ಷ ಚೇತನ್‍ ಕುಮಾರ್, ವಿಜಯ್, ರುದ್ರುಪುನೀತ್ ಸಮಾರಂಭವನ್ನು ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.