
ಹೊನ್ನಾಳಿ: ಪಟ್ಟಣದ ದೊಡ್ಡಕೇರಿಯ ಬೀರಲಿಂಗೇಶ್ವರ ದೇವರ ಕಾರ್ತಿಕ, ಮುಳ್ಳುಗದ್ದುಗೆ ಉತ್ಸವ, ಕೆಂಡದಾರ್ಚನೆ ಅಂಗವಾಗಿ ಹಮ್ಮಿಕೊಂಡಿರುವ ಬಯಲು ಕಾಟಾ ಜಂಗಿ ಕುಸ್ತಿ ಟೂರ್ನಿಗೆ ಬುಧವಾರ ಚಾಲನೆ ಸಿಕ್ಕಿತು.
ಕುಸ್ತಿ ಪರವಾನಗಿದಾರ ಎಚ್.ಬಿ. ಗಿಡ್ಡಪ್ಪ ಹಾಗೂ ದೇವರ ಗಣಮಕ್ಕಳಾದ ಅಣ್ಣಪ್ಪಸ್ವಾಮಿ, ಪ್ರಭುಸ್ವಾಮಿ ಅವರು ಕುಸ್ತಿ ಅಖಾಡಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪಕ್ಕದ ಮೈದಾನದಲ್ಲಿ ಶುರುವಾದ ಟೂರ್ನಿಯ ಮೊದಲನೇ ದಿನ 50ಕ್ಕೂ ಹೆಚ್ಚು ಪೈಲ್ವಾನರು ಅಖಾಡಕ್ಕೆ ಇಳಿದಿದ್ದು ವಿಶೇಷ. ಮೈಸೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಕಲಬುರಗಿ, ವಿಜಯಪುರ, ಮಾಸೂರು, ಶಿಕಾರಿಪುರ, ಹರಿಹರದಿಂದ ಪೈಲ್ವಾನರು ಬಂದಿದ್ದರು.
ಬಯಲುಸೀಮೆ ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷ ಮಂಜಪ್ಪ, ಯಜಮಾನ್ ತೆಂಗಿನಮರದ ಮಾದಪ್ಪ, ಗೌಡರ ಗಾಳೇಶಪ್ಪ, ನರಸಿಂಹಪ್ಪ, ಪುರಸಭೆ ಮಾಜಿ ಅಧ್ಯಕ್ಷ ಮೈಲಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ. ಅರುಣ್‍ಕುಮಾರ್, ಕುಸ್ತಿ ಸಮಿತಿ ಅಧ್ಯಕ್ಷ ಎಚ್.ಬಿ. ಅಣ್ಣಪ್ಪ, ಗೌರವಾಧ್ಯಕ್ಷ ಎನ್.ಕೆ. ಆಂಜನೇಯ, ಮುಖಂಡರಾದ ಎಚ್.ಡಿ. ವಿಜೇಂದ್ರಪ್ಪ, ರವಿಗಾಳಿ, ಕ್ರೀಡಾಧಿಕಾರಿ ಕಾಳಿಂಗಪ್ಪ, ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಮಂಜಪ್ಪ, ಮಾಜಿ ಸೈನಿಕ ಎಂ. ವಾಸಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದರು.
ನ.26 ಮತ್ತು 27ರಂದು ಪಂದ್ಯ ನಡೆಯಲಿವೆ. ಬಹುಮಾನವಾಗಿ ಬೆಳ್ಳಿ ಗದೆ ಹಾಗೂ ಬೆಳ್ಳಿ ಬಳೆ ನೀಡುವುದಾಗಿ ಸಮಿತಿಯವರು ತಿಳಿಸಿದ್ದರು. ಮೂರನೇ ದಿನದ ಪಂದ್ಯದಲ್ಲಿ ಮಹಾರಾಷ್ಟ್ರ ಹಾಗೂ ಗುಜರಾತ್ ಭಾಗದ ಪೈಲ್ವಾನರು ಹಾಗೂ ಮಹಿಳಾ ಕುಸ್ತಿಪಟುಗಳು ಭಾಗಿಯಾಗಲಿದ್ದಾರೆ ಎಂದು ಸಮಿತಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.