
ಹೊನ್ನಾಳಿ: ಪಟ್ಟಣದ ದೊಡ್ಡಕೇರಿಯ ಬೀರಲಿಂಗೇಶ್ವರ ದೇವರ 63ನೇ ವರ್ಷದ ಕಾರ್ತಿಕೋತ್ಸವದ ಅಂಗವಾಗಿ, ಬೀರಪ್ಪ ದೇವರು ಹಾಗೂ ವೀರಭದ್ರೇಶ್ವರ ದೇವರ ಗುಗ್ಗಳ ಮಹೋತ್ಸವ ಮಂಗಳವಾರ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
ಮಂಗಳವಾರ ನಸುಕಿನಲ್ಲಿಯೇ ಉತ್ಸವ ಮೂರ್ತಿಗಳೊಂದಿಗೆ ದೇವರ ಸೇವೆಗೆ ಮೀಸಲಿದ್ದ ಸೇವಕರು ತುಂಗಭದ್ರಾ ನದಿಗೆ ಹೊಳೆಪೂಜೆ ತೆರಳಿದರು. ಅಲ್ಲಿ ಅಭಿಷೇಕ, ವಿಶೇಷ ಪೂಜೆಗಳು ನಡೆದ ಬಳಿಕ ದೇವರ ಗಣಮಕ್ಕಳಾದ ಪ್ರಭುಸ್ವಾಮಿ ಹಾಗೂ ಅಣ್ಣಪ್ಪಸ್ವಾಮಿ ಅವರು ನದಿಗೆ ಸ್ನಾನ, ಪೂಜಾ ಕೈಂಕರ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ಬೀರಪ್ಪ ದೇವರಿಗೆ ಪ್ರಿಯವಾದ ಡೊಳ್ಳುಗಳನ್ನು ಬಾರಿಸಲಾಯಿತು. ಡೊಳ್ಳಿನ ಶಬ್ದ ಕಿವಿಗಡಚಿಕ್ಕುತ್ತಿದ್ದಂತೆ ಗಣಮಕ್ಕಳು ನರ್ತಿಸಿದರು. ಪ್ರಭುಸ್ವಾಮಿ ಅವರು ಮುಳ್ಳು ಪಲ್ಲಕ್ಕಿಯ ಮೇಲೆ ಹಾಗೂ ಅಣ್ಣಪ್ಪ ಸ್ವಾಮಿ ಅವರು ಕಬ್ಬಿಣದ ಮೊಳೆಯ ಪಲ್ಲಕ್ಕಿಯ ಮೇಲೆ ಆಸೀನರಾದರು. ಬೀರಪ್ಪ ದೇವರಿಗೆ ಜಯವಾಗಲಿ ಎಂಬ ಜಯಘೋಷ ಮುಗಿಲು ಮುಟ್ಟಿತು.
ದೇವತಾ ಮೂರ್ತಿಗಳ ಮೆರವಣಿಗೆ ಹೊರಟಿತು. ಮಹಿಳೆಯರು, ದೇವರ ಬೆತ್ತ ಹೊತ್ತವರು, ಜೋಗಪ್ಪ ಹಾಗೂ ಜೊಗತಿಯರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಶಿವತಾಂಡವ ನೃತ್ಯ ಕಲಾವಿದರು, ಡೊಳ್ಳು ಕಲಾವಿದರು ದೇವರ ಕಥೆಗಳನ್ನು ಹೇಳುತ್ತಾ ನಡೆದರು. ದುರ್ಗಮ್ಮ ದೇವಸ್ಥಾನ ಮುಂಭಾಗದಲ್ಲಿ ವ್ಯವಸ್ಥೆ ಮಾಡಿದ್ದ ಕೆಂಡದ ಹೊಂಡಕ್ಕೆ ಮೆರವಣಿಗೆ ತಲುಪಿತು.
ಹೊಸದುರ್ಗ ಶಾಖಾಮಠದ ಈಶ್ವರಾನಂದ ಪುರಿ ಸ್ವಾಮೀಜಿ ಹಾಗೂ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಕೆಂಡ ಹಾಯುವ ಹೊಂಡವನ್ನು ಪೂಜಿಸಿದರು. ನಂತರ ದೇವರ ಗಣಮಗ ಪ್ರಭುಸ್ವಾಮಿ ಅವರು ನಿಗಿನಿಗಿ ಕೆಂಡವನ್ನು ತುಳಿಯುವ ಮೂಲಕ ಕೆಂಡೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಅಣ್ಣಪ್ಪ ಸ್ವಾಮಿ ಕೆಂಡದ ಮೇಲೆ ಹಾದು ಹೋದರು. ನಂತರ ಗಾಳಿದುರ್ಗಮ್ಮ ದೇವಿ, ಸುಡುಗಾಡು ಸಿದ್ದಪ್ಪ ದೇವರು, ಗೋಪೆನಹಳ್ಳಿ ಸಿದ್ದಪ್ಪ, ವೀರಭದ್ರ ದೇವರು ಸೇರಿದಂತೆ ಇತರೆ ದೇವತಾಮೂರ್ತಿಗಳ ಪಲ್ಲಕ್ಕಿ ಹೊತ್ತ ಭಕ್ತರು ಕೆಂಡ ಹಾಯ್ದರು. ಭಕ್ತರಿಗೂ ಕೆಂಡ ತುಳಿಯಲು ಅವಕಾಶ ಕಲ್ಪಿಸಲಾಗಿತ್ತು. ಬಯಲುಸೀಮೆ ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಬಿ. ಮಂಜಪ್ಪ ಅವರೂ ಕೆಂಡತುಳಿದು ಭಕ್ತಿ ಸಮರ್ಪಿಸಿದರು. ನಂತರ ಪಲ್ಲಕ್ಕಿಗಳನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಯಜಮಾನ್ ಎಚ್.ಬಿ. ಗಿಡ್ಡಪ್ಪ, ತೆಂಗಿನಮರದ ಮಾದಪ್ಪ, ಬುದ್ಧಿವಂತರ ನರಸಿಂಹಪ್ಪ, ಗೌಡರ ಗಾಳೇಶಪ್ಪ, ಎಚ್.ಡಿ. ವಿಜೇಂದ್ರಪ್ಪ, ಎಚ್.ಬಿ. ಅಣ್ಣಪ್ಪ, ಸತ್ತಿಗೆ ಮಂಜಪ್ಪ, ಮಾಜಿ ಸೈನಿಕ ಎಂ. ವಾಸಪ್ಪ, ಸೊರಟೂರು ಗಣೇಶ್, ಕಾಟ್ಯಾ ಕುಮಾರ್, ಸತ್ತಿಗೆ ಲೋಕೇಶ್, ಬಿ.ಕೆ. ಮಾದಪ್ಪ, ಎನ್.ಕೆ. ಆಂಜನೇಯ, ಬಿಸಾಟಿ ನಾಗರಾಜಪ್ಪ, ಇಟ್ಟಿಗೆ ಬಸವರಾಜಪ್ಪ, ಕವಳಿ ಮಾದಪ್ಪ ಹಾಜರಿದ್ದರು.
ಕುಸ್ತಿ ಪಂದ್ಯಾವಳಿ: ಕಾರ್ತಿಕೋತ್ಸವದ ಅಂಗವಾಗಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪಕ್ಕದ ಮೈದಾನದಲ್ಲಿ ನ. 26 ರಿಂದ ನ. 28ವರೆಗೆ ಬಯಲು ಖಾಟಾ ಜಂಗಿ ಕುಸ್ತಿ ಏರ್ಪಡಿಸಲಾಗಿದೆ. ವಿಶೇಷವಾಗಿ ಈ ಬಾರಿ ಮಹಿಳಾ ಕುಸ್ತಿಪಟುಗಳು ಭಾಗವಹಿಸಲಿದ್ದಾರೆ. ಹೊರ ರಾಜ್ಯಗಳಿಂದ ಕುಸ್ತುಪಟುಗಳು ಬಂದಿದ್ದಾರೆ ಎಂದು ಕುಸ್ತಿ ಸಮಿತಿ ಅಧ್ಯಕ್ಷ ಎಚ್.ಬಿ. ಅಣ್ಣಪ್ಪ ತಿಳಿಸಿದರು. ಕುಸ್ತಿ ಕಮಿಟಿಯ ಗೌರವಾಧ್ಯಕ್ಷ ಎನ್.ಕೆ. ಆಂಜನೇಯ, ಕಾಳಿಂಗಪ್ಪ, ಮುಖಂಡರಾದ ಬಿಸಾಟಿ ನಾಗರಾಜಪ್ಪ, ಇಟ್ಟಿಗೆ ಬಸವರಾಜಪ್ಪ, ಕವಳಿ ಮಾದಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.