
ಹೊನ್ನಾಳಿ: ಬುದ್ಧಿವಂತಿಕೆ ಹಾಗೂ ಜ್ಞಾನಕ್ಕೆ ತಕ್ಕಂತೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ದೇಶ ಸೇವೆ ಮಾಡಿ ಎಂದು ಐಎಎಸ್ ಇನ್ಸೈಟ್ಸ್ ಸಂಸ್ಥಾಪಕ ಜಿ.ಬಿ. ವಿನಯ್‍ಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶುಕ್ರವಾರ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ವೇಳೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಆಲ್ ಇಂಡಿಯಾ ಸರ್ವೀಸ್ ಎಂದು ಕರೆಯಲಾಗುವ ಐಎಎಸ್, ಐಪಿಎಸ್, ಐಆರ್‌ಎಸ್ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿವೆ. ಕ್ಲಾಟ್ ಪರೀಕ್ಷೆ ಬಗ್ಗೆ ತಿಳಿದುಕೊಳ್ಳಿ. ಏಷ್ಯಾದಲ್ಲಿಯೇ ಅತ್ಯುತ್ತಮ ಕಾನೂನು ಕಾಲೇಜು ಎನಿಸಿರುವ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್‌ನಲ್ಲಿ ಓದಿದವರಿಗೆ ವಾರ್ಷಿಕ ₹2 ಕೋಟಿ ವೇತನವಿದೆ. ನೂರಾರು ಕಾರ್ಪೊರೆಟ್ ಕಂಪನಿಗಳಿದ್ದು, ಅಲ್ಲಿಯೂ ಅಧಿಕ ವೇತನವಿದೆ’ ಎಂದರು.
‘ಪಠ್ಯದ ಜೊತೆ ಇತರೆ ಪುಸ್ತಕಗಳನ್ನು ಓದಿ. ಉತ್ತಮ ಸಾಹಿತ್ಯದ ಪುಸ್ತಕಗಳಿಂದ ಜ್ಞಾನ ವೃದ್ಧಿಸುತ್ತದೆ. ನಿಮ್ಮ ಶಕ್ತಿ ಇಮ್ಮಡಿಯಾಗಿ, ಪ್ರಬುದ್ಧರಾಗುತ್ತೀರಿ’ ಎಂದು ಸಲಹೆ ನೀಡಿದರು.
ಉಪಪ್ರಾಂಶಪಾಲ ಎ.ಕೆ. ಚನ್ನೇಶ್ ಸಂವಾದ ನಡೆಸಿಕೊಟ್ಟರು. ಪ್ರಾಂಶುಪಾಲ ಧನಂಜಯ್, ಎಸ್‍ಡಿಎಂಸಿ ಅಧ್ಯಕ್ಷ ಕರಿಬಸಪ್ಪ, ಉಪಾಧ್ಯಕ್ಷೆ ಉಷಾ, ಸದಸ್ಯರಾದ ಪರಮೇಶ್ವರ್, ಪರಮೇಶ್ವರನಾಯ್ಕ, ಲೋಕೇಶಪ್ಪ, ರೂಪಾಬೀರಪ್ಪ ಉಪಸ್ಥಿತರಿದ್ದರು. ನೂರಾರು ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.