ಹೊನ್ನಾಳಿ: ಪಟ್ಟಣದಲ್ಲಿ ಸುಗಮ ಸಂಚಾರಕ್ಕಾಗಿ ಒಂದು ಬದಿ ಪಾರ್ಕಿಂಗ್ ವ್ಯವಸ್ಥೆಗೆ ತೀರ್ಮಾನ ಕೈಗೊಂಡಿದ್ದು, ವರ್ತಕರು ಸಹಕಾರ ನೀಡಬೇಕು ಎಂದು ಚನ್ನಗಿರಿ ಉಪವಿಭಾಗದ ಎಎಸ್‌ಪಿ ಸ್ಯಾಮ್ ವರ್ಗೀಸ್ ಹೇಳಿದರು.
ಬುಧವಾರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸುಗಮ ಸಂಚಾರ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕೆನರಾ ಬ್ಯಾಂಕ್‍ವರೆಗೂ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಗೆ ತೀರ್ಮಾನಿಸಲಾಗಿದೆ. ವಾಹನಗಳ ಮಾಲೀಕರು ರಸ್ತೆಯ ಒಂದು ಬದಿಯಲ್ಲಿ ಪೊಲೀಸರು ಗುರುತು ಮಾಡಿರುವ ಸ್ಥಳದಲ್ಲೇ ವಾಹನಗಳನ್ನು ನಿಲ್ಲಿಸಬೇಕು ಎಂದರು.
ಉಪ ವಿಭಾಗಾಧಿಕಾರಿ ವಿ.ಅಭಿಷೇಕ್ ಮಾತನಾಡಿ, ಪುರಸಭೆಯಿಂದ ಯಾವುದೇ ಟ್ರೇಡ್ ಪರವಾನಗಿ ತೆಗೆದುಕೊಳ್ಳದ ಅನಧಿಕೃತ ಅಂಗಡಿ ಹಾಗೂ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಮುಖ್ಯಾಧಿಕಾರಿ ಟಿ. ಲೀಲಾವತಿ ಅವರಿಗೆ ಸೂಚಿಸಿದರು.
ಪ್ರತಿ ಬುಧವಾರ ಕೆನರಾ ಬ್ಯಾಂಕ್ ಸರ್ಕಲ್‌ನಲ್ಲಿ ಎತ್ತುಗಳ ವ್ಯಾಪಾರದ ವೇಳೆ ಸಂಚಾರ ವ್ಯವಸ್ಥೆ ಹಡಗೆಡುತ್ತದೆ. ಇದರಿಂದ ಸಾರ್ವಜನಿಕರು ಸೇರಿದಂತೆ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಸಿಪಿಐ ಸುನಿಲ್‍ಕುಮಾರ್ ಮಾತನಾಡಿ, ಸರ್ಕಾರಿ ಬಸ್‍ಗಳನ್ನು ನಿಲುಗಡೆ ಮಾಡಲು ಸ್ಥಳ ನಿಗದಿಯಾಗಿದ್ದರೂ, ಚಾಲಕರು ಎಲ್ಲೆಂದರಲ್ಲಿ ಬಸ್‍ಗಳನ್ನು ನಿಲ್ಲಿಸುತ್ತಾರೆ. ಈ ಬಗ್ಗೆ ಸರ್ಕಾರಿ ಬಸ್ ಡಿಪೋದ ವ್ಯವಸ್ಥಾಪಕರು ಕ್ರಮ ಕೈಗೊಳ್ಳಬೇಕು. ರಸ್ತೆಯ ಇಕ್ಕೆಲಗಳಲ್ಲಿ ತಳ್ಳುವ ಗಾಡಿಗಳನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡಲಾಗುತ್ತಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಇನ್ನು ಮುಂದೆ ಇದಕ್ಕೆ ಅವಕಾಶ ಕೊಡಬಾರದು ಎಂದರು.
ಪುರಸಭೆ ಅಧ್ಯಕ್ಷ ಮೈಲಪ್ಪ, ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ, ಸದಸ್ಯರಾದ ಕೆ.ವಿ.ಶ್ರೀಧರ್, ರಂಗನಾಥ್, ಹೊಸಕೇರಿ ಸುರೇಶ್, ಗ್ರೇಡ್ –2 ತಹಶೀಲ್ದಾರ್ ಸುರೇಶ್, ಎಂಜಿನಿಯರ್ ದೇವರಾಜ್ ಹಾಗೂ ವರ್ತಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.