ಎನ್.ಕೆ. ಆಂಜನೇಯ
ಹೊನ್ನಾಳಿ: ಬಹುನಿರೀಕ್ಷಿತ ಗದಗ–ಹೊನ್ನಾಳಿ ಚತುಷ್ಪಥ ರಸ್ತೆಯ (ರಾಜ್ಯ ಹೆದ್ದಾರಿ 26) ಕಾಮಗಾರಿ ನಿರ್ಣಾಯಕ ಹಂತ ತಲುಪಿದೆ. 2020ರಲ್ಲಿ ಆರಂಭವಾಗಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿ ಇದೀಗ ಹೊನ್ನಾಳಿ ಪಟ್ಟಣದ ಗಡಿವರೆಗೆ ತಲುಪಿದೆ. ಪಟ್ಟಣದಲ್ಲಿ 9.86 ಕಿ.ಮೀ. ರಸ್ತೆ ಅಭಿವೃದ್ಧಿಯಾಗುವುದು ಬಾಕಿಯಿದೆ.
ಹೊನ್ನಾಳಿಯಿಂದ ತುಮ್ಮಿನಕಟ್ಟೆ-ಹಲಗೇರಿ-ರಾಣೆಬೆನ್ನೂರು -ಹಾವೇರಿ-ಶಿಗ್ಗಾಂವಿ–ಲಕ್ಷ್ಮೇಶ್ವರ–ಶಿರಹಟ್ಟಿ ಮೂಲಕ ಗದಗವನ್ನು ಈ ಹೆದ್ದಾರಿ ಸಂಪರ್ಕಿಸುತ್ತದೆ.
ಭೂಸ್ವಾಧೀನ ಪ್ರಕ್ರಿಯೆ ಬಾಕಿ ಇರುವ ಕಡೆ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿಲ್ಲ. ಉಳಿದ ಕಡೆಗಳಲ್ಲಿ ಅಭಿವೃದ್ಧಿ ಮಾಡಲಾಗಿದೆ. ದ್ವಿಪಥವನ್ನು ಚತುಷ್ಪಥ ರಸ್ತೆಯನ್ನಾಗಿ ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ಕೆ-ಶಿಪ್‌ನ (ಕರ್ನಾಟಕ ಸ್ಟೇಟ್ ಹೈವೇ ಇಂಪ್ರೂವ್‍ಮೆಂಟ್ ಪ್ರಾಜೆಕ್ಟ್) ಸೋಷಿಯಲ್ ವೆಲ್‍ಫೆರ್ ಇನ್‌ಸ್ಪೆಕ್ಟರ್ ಡಿ.ವಿ. ಮಂಜುನಾಥ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪಟ್ಟಣದ ಗ್ಯಾಂಟ್ರಿ ಬೋರ್ಡ್‍ನಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗಿನ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ತಾಲ್ಲೂಕು ಗಡಿ ಆರಂಭದಿಂದ ಹೊನ್ನಾಳಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ 8.3 ಕಿಲೋ ಮೀಟರ್‌ವರೆಗೆ ಮತ್ತು ಅಲ್ಲಿಂದ ಮುಂದೆ 1.56 ಕಿಲೋ ಮೀಟರ್‌ವರೆಗೆ ಸೇರಿದಂತೆ ಒಟ್ಟು 9.86 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲಾಗುತ್ತದೆ.
ಚುತುಷ್ಪಥಕ್ಕಾಗಿ ರಸ್ತೆಯ ಮಧ್ಯಭಾಗದಿಂದ ಎರಡೂ ಬದಿಗಳಲ್ಲಿ (ಎಡಕ್ಕೆ 38 ಅಡಿ, ಬಲಕ್ಕೆ 38 ಅಡಿ) 76 ಅಡಿಯಷ್ಟು ಅಗಲೀಕರಣ ಮಾಡಲಾಗುತ್ತದೆ. ಎರಡೂ ಬದಿಯ ಅಂಗಡಿಗಳು ಹಾಗೂ ಕಟ್ಟಡಗಳನ್ನು ತೆರವು ಮಾಡಬೇಕಿದೆ. ರಸ್ತೆ ಅಗಲೀಕರಣಕ್ಕೆ ತಮ್ಮ ಸ್ವತ್ತುಗಳನ್ನು ಬಿಟ್ಟುಕೊಡುವ ಕಟ್ಟಡಗಳ ಮಾಲೀಕರಿಗೆ ಪರಿಹಾರ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.