
ಹೊನ್ನಾಳಿ: ‘ರಾಜಕಾರಣದಲ್ಲಿ ಸೇವಾ ಮನೋಭಾವ ಇರಬೇಕು, ಆ ಕೆಲಸವನ್ನು ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮಾಡಿದ್ದರು’ ಎಂದು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಎ.ಎಚ್. ಶಿವಯೋಗಿ ಸ್ವಾಮಿ ಸ್ಮರಿಸಿದರು.
ಶನಿವಾರ ಪಟ್ಟಣದ ಗುರುಭವನದಲ್ಲಿ ಬಿಜೆಪಿ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ‘ಅಟಲ್ ಸ್ಮೃತಿ ವರ್ಷ’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಮಗುವಿನಂಥ ಮುಗ್ಧ ಮನಸ್ಸಿನ ವ್ಯಕ್ತಿತ್ವದ ಯಾರಿಗೂ ಕೇಡನ್ನುಂಟು ಮಾಡದ ವಾಜಪೇಯಿ ಅವರು, ರಾಜಕಾರಣ ಅಂದರೆ ಏನು ಎನ್ನುವುದನ್ನು ತಮ್ಮ ನಡೆ, ನುಡಿಗಳಲ್ಲಿ ತೋರಿಸಿಕೊಟ್ಟವರು. ತಮ್ಮ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತಮ್ಮ ಹೆಸರನ್ನು ಅಚ್ಚು ಹಾಕಿಸಬೇಡಿ ಎಂದು ಹೇಳುವ ಮೂಲಕ ನಿಸ್ವಾರ್ಥ ಸೇವೆ ಮಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದರು’ ಎಂದು ಹೇಳಿದರು.
‘ಅಟಲ್ ಬಿಹಾರಿ ವಾಜಪೇಯಿ ಅವರು 1996ರಲ್ಲಿ ಪಕ್ಷ ಸಂಘಟನೆಗಾಗಿ ಹೊನ್ನಾಳಿಗೆ ಬಂದಿದ್ದಾಗ, ನಾನು ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದೆ’ ಎಂದು ಕಾರ್ಯಕ್ರಮದ ಅಧ್ಯಕ್ಷತೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಪ್ರಧಾನಿ ವಾಜಪೇಯಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಪಾಕಿಸ್ತಾನದೊಂದಿಗೆ ಸ್ನೇಹಹಸ್ತ ಚಾಚುವ ಉದ್ದೇಶದಿಂದ ದಿಲ್ಲಿಯಿಂದ ಲಾಹೋರ್‌ಗೆ ಬಸ್ ಸಂಚಾರ ಆರಂಭಿಸಿದ್ದು ಇತಿಹಾಸದ ಪುಟವನ್ನು ಸೇರಿದೆ ಎಂದರು.
‘ಮುಂಬರುವ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ತಾ.ಪಂ. ಜಿ.ಪಂ. ಹಾಗೂ ಹೊನ್ನಾಳಿ ಪುರಸಭೆ ಮತ್ತು ನ್ಯಾಮತಿ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆಯಲಿದ್ದು, ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಸಾರ್ವತ್ರಿಕ ಚುನಾವಣೆಗೂ ಸಜ್ಜಾಗಬೇಕು’ ಎಂದು ಸಲಹೆ ನೀಡಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ನಾಗಪ್ಪ ಪಕ್ಷ ಸಂಘಟನೆ ಹಾಗೂ ವಾಜಪೇಯಿ ಅವರ ಜನಪ್ರಿಯ ಕಾರ್ಯಕ್ರಮಗಳ ಕುರಿತು ಮಾತನಾಡಿದರು. ಜಿಲ್ಲಾ ಮುಖಂಡ ನೆಲಹೊನ್ನೆ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಹಿಂದುಳಿದ ವರ್ಗಗಳ ರಾಜ್ಯ ಬಿಜೆಪಿ ಉಪಾಧ್ಯಕ್ಷ ಕೆ.ಪಿ. ಕುಬೇಂದ್ರಪ್ಪ, ಜಿಲ್ಲಾ ಕಾರ್ಯದರ್ಶಿ ಕಡ್ಲೆಬಾಳು ಧನಂಜಯ, ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ. ಸುರೇಶ್, ಕೊನಾಯಕನಹಳ್ಳಿ ಮಂಜುನಾಥ್, ತರಗನಹಳ್ಳಿ ರಮೇಶ್‍ಗೌಡ, ಎಸ್.ಎಸ್. ಬೀರಪ್ಪ, ದೊಡ್ಡೇರಿ ರಾಜಣ್ಣ, ಸುರೇಂದ್ರನಾಯ್ಕ, ಮಾರುತಿನಾಯ್ಕ, ದೊಡ್ಡೇರಿ ಗಿರೀಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.