ಹರಿಹರ: ತಾಲ್ಲೂಕಿನ ಕಡ್ಲೆಗೊಂದಿ ಗ್ರಾಮದ ನಿರ್ವಸತಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಮಂಗಳವಾರ ಹೊರವಲಯದ ಪ್ರೊ.ಬಿ.ಕೃಷ್ಣಪ್ಪ ಅವರ ಸಮಾಧಿ ಸ್ಥಳದಿಂದ ತಾಲ್ಲೂಕು ಕಚೇರಿವರೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ನೇತೃತ್ವದಲ್ಲಿ ನೂರಾರು ನಿರ್ವಸತಿಕರು ಪಾದಯಾತ್ರೆ ಮೂಲಕ ಬಂದು ತಹಶೀಲ್ದಾರ್ ಗುರುಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು.
ಇದಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಗಾಂಧಿ ವೃತ್ತದಲ್ಲಿ ಕೆಲ ಸಮಯ ಮಾನವ ಸರಪಳಿ ರಚಿಸಿದರು. ನಂತರ ತಾಲ್ಲೂಕು ಕಚೇರಿಗೆ ಬಂದರು.
‘ಕಡ್ಲೆಗೊಂದಿ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಬಡ ಕುಟುಂಬಗಳು ಅತ್ಯಂತ ಚಿಕ್ಕ ಗುಡಿಸಲು, ನೆರಿಕೆಗಳಲ್ಲಿ ಅನಾರೋಗ್ಯಕರ, ಕಲುಷಿತ ವಾತಾವರಣದಲ್ಲಿ ಹಲವು ವರ್ಷಗಳಿಂದ ವಾಸ ಮಾಡುತ್ತಿದ್ದಾರೆ’ ಎಂದು ದಸಂಸ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ ಹೇಳಿದರು.
‘ಗ್ರಾಮದಲ್ಲಿ ಲಭ್ಯವಿರುವ ಸರ್ಕಾರಿ ಜಮೀನನ್ನು ನಿವೇಶನಗಳನ್ನಾಗಿ ವಿಂಗಡಿಸಿ ಬಡಜನರಿಗೆ ವಿತರಿಸಲು ಸಂಘಟನೆಯಿಂದ 3 ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದರೂ ತಾಲ್ಲೂಕು ಮತ್ತು ಜಿಲ್ಲಾಡಳಿತ ಸಮಸ್ಯೆ ನಿವಾರಣೆ ಮಾಡಿಲ್ಲ. ಗ್ರಾಮದ ಸರ್ವೆ ನಂ. 37ರಲ್ಲಿನ 10 ಎಕರೆ ಸರ್ಕಾರಿ ಜಮೀನಿನಲ್ಲಿ ವಿವಿಧ ಯೋಜನೆಗಳಿಗೆ ನೀಡಿದ ನಂತರ ಇನ್ನೂ 5.35 ಎಕರೆ ಜಮೀನು ಉಳಿದಿದ್ದು, ಅದರಲ್ಲಿ ಕೂಡಲೇ ವಸತಿ ಯೋಜನೆ ರೂಪಿಸಬೇಕು’ ಎಂದು ಆಗ್ರಹಿಸಿದರು.
‘ಈ ಹಿಂದೆಯೂ ವಸತಿ ಯೋಜನೆಗಾಗಿ ಪಾದಯಾತ್ರೆ, ರಸ್ತೆ ತಡೆ, 60 ದಿನ ತಾಲ್ಲೂಕು ಕಚೇರಿ ಎದುರು ಧರಣಿ ಸತ್ಯಾಗ್ರಹ ಸೇರಿ ಹಲವು ರೀತಿಯ ಪ್ರತಿಭಟನೆಯನ್ನು ಮಾಡಿದ್ದರೂ ಭೂ ನ್ಯಾಯ ಮಂಡಳಿ ರಚನೆಯಾಗಬೇಕೆಂದು ತಾಲ್ಲೂಕು ಆಡಳಿತ ಕಾರಣ ಹೇಳಿತ್ತು, ಈಗ ಮಂಡಳಿ ರಚನೆಯಾಗಿದ್ದು, ಸಮಸ್ಯೆಗೆ ಪರಿಹಾರ ನೀಡಬೇಕು’ ಎಂದು ದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಆಗ್ರಹಿಸಿದರು.
ಸಮಸ್ಯೆ ಪರಿಹಾರಕ್ಕೆ ಮುಂದಾಗದಿದ್ದಲ್ಲಿ ಸಂಘಟನೆಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಮಹಿಳಾ ಸಂಚಾಲಕಿ ವಿಜಯಲಕ್ಷ್ಮಿ, ಜಿಲ್ಲಾ ಸಂಘಟನಾ ಸಂಚಾಲಕ ಚನ್ನಗಿರಿ ಚಿತ್ರಲಿಂಗಪ್ಪ, ನ್ಯಾಮತಿ ತಾಲ್ಲೂಕು ಸಂಚಾಲಕ ಚಂದ್ರಪ್ಪ, ಹೊನ್ನಾಳಿ ತಾಲ್ಲೂಕು ಸಂಚಾಲಕ ಪರಮೇಶ್ ಬೆನಕನಾಳ್, ಜಗಳೂರು ತಾಲ್ಲೂಕು ಸಂಚಾಲಕ ಕುಬೇರಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಾತಂಗೆಮ್ಮ ತಿಮ್ಮಣ್ಣ, ಪದಾಧಿಕಾರಿಗಳಾದ ನಾಗರಾಜ್ ಚಿತ್ತನಹಳ್ಳಿ, ಶಿವಶಂಕರ್ ಎಸ್.ಎಂ, ಪ್ರದೀಪ್, ಮಂಜುನಾಥ ಎಲೆಕ್ಟ್ರಿಕಲ್, ಉಮೇಶ್ ಹಿರೇಬಿದರಿ, ಸಂಜೀವಪ್ಪ, ಭಾನುವಳ್ಳಿ ಚೌಡಪ್ಪ ಸಿ, ರಂಗಪ್ಪ, ಕೊಟ್ರಪ್ಪ, ಬಸವರಾಜ್, ರಾಜಪ್ಪ, ನಾಗರಾಜ್, ಹನುಮಂತಪ್ಪ ನಂದಿಗಾವಿ, ಹನುಮಂತಪ್ಪ ಕೆ.ಎಚ್, ಸಣ್ಣ ನಿಂಗಪ್ಪ, ಹಾಲಪ್ಪ, ಜ್ಯೋತಿ, ಚಂದ್ರಶೇಖರ್, ನಾಗರತ್ನ, ಅಣ್ಣಪ್ಪ ಶೈಲೂ, ಶಿವರಾಜ್ ವೈ, ರಘು, ಮಲ್ಕಾಬಿ, ಮುಬೀನಾ, ಫಾತೀಮಾ, ನಾಗಮ್ಮ, ಟಿಪ್ಪುಸಾಬ್ ಹಾಗೂ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.