ADVERTISEMENT

ಪ್ರತಿ ಜೀವಿಯ ಹಕ್ಕು ಗೌರವಿಸಿ

ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 5:22 IST
Last Updated 11 ಡಿಸೆಂಬರ್ 2025, 5:22 IST
ದಾವಣಗೆರೆಯ ಆರ್.ಎಲ್. ಕಾನೂನು ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಉದ್ಘಾಟಿಸಿದರು
ದಾವಣಗೆರೆಯ ಆರ್.ಎಲ್. ಕಾನೂನು ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಉದ್ಘಾಟಿಸಿದರು   

ದಾವಣಗೆರೆ: ಪ್ರತಿಯೊಬ್ಬರು ತಮ್ಮ ಜವಾಬ್ದಾರಿಗಳನ್ನು ಅರಿತು ಮತ್ತೊಬ್ಬರಿಗೆ ತೊಂದರೆಯಾಗದಂತೆ ಬದುಕಿದರೆ ಮಾನವ ಹಕ್ಕುಗಳ ಉಲ್ಲಂಘನೆ ಆಗದು. ಮಾನವ ಹಕ್ಕುಗಳು ದೊಡ್ಡ ಕಾನೂನುಗಳಲ್ಲ, ಬದುಕಿನ ರೀತಿ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಆರ್.ಎಲ್. ಕಾನೂನು ಕಾಲೇಜಿನಲ್ಲಿ ಜಿಲ್ಲಾಡಳಿತ, ಮಾನವ ಹಕ್ಕುಗಳ ವೇದಿಕೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂವಿಧಾನಿಕವಾಗಿ ಮಾನವ ಹಕ್ಕುಗಳನ್ನು ಕಾಪಾಡುವ ಸದುದ್ದೇಶದಿಂದ ಸರ್ಕಾರ ಮಾನವ ಹಕ್ಕುಗಳ ಆಯೋಗ ರಚಿಸಿದೆ. ಮಾನವ ಹಕ್ಕುಗಳ ರಕ್ಷಣೆಗೆ ಹಲವು ಕಾಯ್ದೆಗಳನ್ನು ರೂಪಿಸಿದೆ. ಆದರೆ, ಇಂದಿಗೂ ಮಕ್ಕಳು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸಾಚಾರ ನಿಂತಿಲ್ಲ. ಸಂಚಾರ ನಿಯಮ ಉಲ್ಲಂಘನೆ ಸೇರಿದಂತೆ ಹಲವು ರೀತಿಯಲ್ಲಿ ಮಾನವ ಹಕ್ಕುಗಳು ಉಲ್ಲಂಘನೆ ಆಗುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಮಾನವ ಹಕ್ಕುಗಳು ಕೇವಲ ಮಾನವನಿಗೆ ಸಂಬಂಧಿಸಿದ ವಿಷಯವಲ್ಲ. ಈ ನೆಲದ ಮೇಲೆ ಜೀವಿಸುವ ಪ್ರತಿಯೊಂದು ಪ್ರಾಣಿ ಪಕ್ಷಿಗೂ ಅನ್ವಯಿಸುತ್ತದೆ. ಪರಿಸರದ ಮೇಲಿನ ದಾಳಿ ಕೂಡ ಮಾನವ ಹಕ್ಕುಗಳ ಉಲ್ಲಂಘನೆಯ ವ್ಯಾಪ್ತಿಗೆ ಬರುತ್ತದೆ. ನಗರದ ಹೃದಯ ಭಾಗದಲ್ಲಿ ಸಾವಿರಾರು ಗಿಳಿ, ಬಾವಲಿಗಳು ವಾಸಿಸುತ್ತವೆ. ಡಿಜೆ, ಪಟಾಕಿ ಮೂಲಕ ಪಕ್ಷಿಗಳಿಗಳ ಹಕ್ಕುಗಳನ್ನು ಕಸಿದುಕೊಂಡಂತೆ ಆಗುತ್ತದೆ’ ಎಂದು ಹೇಳಿದರು.

‘ದೇಶದಲ್ಲಿ ಇಂದಿಗೂ ಶೇ 20ರಷ್ಟು ಬಡತನವಿದೆ. ಬಡತನವನ್ನು ಸಂಪೂರ್ಣ ನಿರ್ಮೂಲನೆ ಮಾಡುವುದರೊಂದಿಗೆ ಸಮಸಮಾಜ ನಿರ್ಮಿಸಬೇಕಾಗಿದೆ. ಪ್ರತಿಯೊಬ್ಬರಿಗೂ ಸಂಪನ್ಮೂಲಗಳು ಸಮನಾಗಿ ಹಂಚಿಕೆಯಾಗಬೇಕು. ಅದಕ್ಕಾಗಿ ಎಲ್ಲರೂ ಸಮನಾಗಿ ಕೆಲಸ ನಿರ್ವಹಿಸಬೇಕು. ಪಾರದರ್ಶಕತೆ ಮತ್ತು ಪ್ರಜ್ಞಾವಂತರಾಗಬೇಕು. ಆಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ’ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರಣ್ಣವರ, ‘ಸಮಾಜದಲ್ಲಿ ನ್ಯಾಯ, ಸಮಾನತೆ ಕಾಪಾಡುವ ಉದ್ದೇಶದಿಂದ ಈ ದಿನಾಚರಣೆ ಮುನ್ನೆಲೆಗೆ ಬಂದಿದೆ. ಮಾನವ ಹಕ್ಕುಗಳಿಗೆ ಧಕ್ಕೆ ಉಂಟಾದರೆ ಸಮಾನತೆ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ನಿರ್ಭಯ, ನಿರ್ಭೀತಿಯಿಂದ ಜನರು ಜೀವಿಸುವಂತಹ ವಾತಾವರಣ ನಿರ್ಮಿಸುವುದೇ ಮಾನವ ಹಕ್ಕುಗಳ ರಕ್ಷಣೆ. ಬಾಲಕಾರ್ಮಿಕ, ಬಾಲ್ಯವಿವಾಹದಂತಹ ಸಾಮಾಜಿಕ ಪಿಡುಗುಗಳು ನಿರ್ಮೂಲನೆ ಆಗಬೇಕು. ಮಹಿಳೆ ಮತು ಮಕ್ಕಳ ಹಕ್ಕುಗಳ ರಕ್ಷಣೆಯಾಗಬೇಕಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೂ ಸಮಾಜದಲ್ಲಿ ಸಮಾನ ಅವಕಾಶ ನೀಡಿದಾಗ ಮಾನವ ಹಕ್ಕುಗಳಿಗೆ ಅರ್ಥ ಸಿಗಲಿದೆ’ ಎಂದರು.

‘ಸಮಾಜದಲ್ಲಿ ಕೆಲವರು ಅಂಗವಿಕಲತೆ, ಕುಷ್ಠರೋಗ, ಏಡ್ಸ್‌ನಂತಹ ರೋಗಗಳಿಂದ ಬಳಲುತ್ತಿದ್ದಾರೆ. ಘನತೆಯಿಂದ ಬದುಕುವ ತುಡಿತ, ಆಸೆ ಅವರಲ್ಲಿಯೂ ಇದೆ. ಅವರನ್ನು ದೂಷಿಸಿ ದೂರವಿಡುವುದು ತಪ್ಪು. ಅವರಿಗೆ ಅನುಕಂಪ ತೋರಿಸುವ ಬದಲಾಗಿ ಅವಕಾಶ ನೀಡಬೇಕು. ಅಹಿಂಸಾತತ್ವ ಪಾಲಿಸಿದರೆ ಯಾರ ಹಕ್ಕುಗಳನ್ನು ಕಸಿಯಲು ಸಾಧ್ಯವಿಲ್ಲ. ಅಂತಹ ಮನೋಭಾವವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಾನೂನು ಕಾಲೇಜು ಸಹಾಯಕ ಪ್ರಾಧ್ಯಾಪಕಿ ತೃಪ್ತಿ ಮಾನವ ಹಕ್ಕುಗಳ ಕುರಿತ ಪ್ರತಿಜ್ಞಾವಿಧಿ ಭೋದಿಸಿದರು. ಪತ್ರಕರ್ತ ಬಿ.ಎನ್. ಮಲ್ಲೇಶ್ ಉಪನ್ಯಾಸ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ರೇಷ್ಮ ಕೌಸರ್, ಆರ್.ಎಲ್. ಕಾನೂನು ಕಾಲೇಜು ಪ್ರಾಂಶುಪಾಲ ಬಿ.ಪಿ. ಬಸವನಗೌಡ, ನಿರ್ದೇಶಕ ಸೋಮಶೇಖರಪ್ಪ, ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗುರುಬಸವರಾಜ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.