ADVERTISEMENT

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಕೊಟ್ಟರೆ ಬೇಡ ಎನ್ನಲಾರೆ: ಜಿ.ಎಂ ಸಿದ್ದೇಶ್ವರ್

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 2:25 IST
Last Updated 3 ಡಿಸೆಂಬರ್ 2020, 2:25 IST
ಜಿ.ಎಂ. ಸಿದ್ದೇಶ್ವರ
ಜಿ.ಎಂ. ಸಿದ್ದೇಶ್ವರ   

ದಾವಣಗೆರೆ: ಸುರೇಶ್‌ ಅಂಗಡಿ ಅವರ ನಿಧನದಿಂದಾಗಿ ತೆರವಾಗಿರುವ ಸಚಿವ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ. ಕೊಟ್ಟರೆ ಬೇಡ ಎನ್ನುವುದಿಲ್ಲ ಎಂದು ಸಂಸದ ಜಿ.ಎಂ ಸಿದ್ದೇಶ್ವರ್‌ಪುನರುಚ್ಚರಿಸಿದರು.

‘ಈಗ ಜಿಲ್ಲೆಯಲ್ಲಿ ಅಡ್ಡಾಡಿಕೊಂಡು ಕೆಲಸ ಮಾಡುತ್ತಿದ್ದೇನೆ. ಸಚಿವ ಸ್ಥಾನ ನೀಡಿದರೆ ಎಲ್ಲ ರಾಜ್ಯಗಳನ್ನು ಅಡ್ಡಾಡಬೇಕಾಗುತ್ತದೆ. ನನ್ನ ಕ್ಷೇತ್ರಕ್ಕೆ ನೀಡಲು ಸಮಯ ಸಿಗುವುದಿಲ್ಲ. ಹಾಗಾಗಿ ಗಣಪತಿ ಶಿವನಿಗೆ ಸುತ್ತು ಬಂದಂತೆ ನಾನೂ ಇಲ್ಲೇ ಸುತ್ತುತ್ತೇನೆ. ಷಣ್ಮುಖನಾಗುವುದಿಲ್ಲ’ ಎಂದು ಮಾಧ್ಯಮದವರ ಪ್ರಶ್ನೆಗೆ ಅವರು ಉತ್ತರಿಸಿದರು.

‘ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದೇನೆ. ಪಕ್ಷ ಮತ್ತು ಕಾರ್ಯಕರ್ತರು ಏನು ತೀರ್ಮಾನ ಕೈಗೊಳ್ಳುತ್ತಾರೆ ಅದರಂತೆ ನಡೆದುಕೊಳ್ಳುತ್ತೇನೆ. ನಾನು ಸ್ಪರ್ಧಿಸುವುದಿಲ್ಲ ಎಂಬುದು ಶೇ 90ರಷ್ಟು ಸತ್ಯ’ ಎಂದರು.

ADVERTISEMENT

ಸಿ.ಪಿ.ಯೋಗೇಶ್ವರ್ ಆ ಭಾಗದಲ್ಲಿ ಪ್ರಭಾವಿ ಒಕ್ಕಲಿಗ ನಾಯಕ. ಹಾಗಾಗಿ ಅವರಿಗೆ ಸಚಿವ ಸ್ಥಾನ ಕೊಡುತ್ತಿರಬಹುದು. ಎಚ್.ವಿಶ್ವನಾಥ್ ಹಿರಿಯರು. ಅವರಿಗೆ ಉತ್ತರ ಕೊಡುವಷ್ಟು ನಾನು ದೊಡ್ಡವನಲ್ಲ. ಅವರು ಮಾತುಗಳನ್ನು ಕೇಳಿದ್ದೇನೆ. ಹಾಗೆಲ್ಲ ಮಾತನಾಡಬಾರದು. ಎಲ್ಲವನ್ನು ಬಿಜೆಪಿ ಹೈಕಮಾಂಡ್, ಮುಖ್ಯಮಂತ್ರಿಗಳು ಗಮನಿಸುತ್ತಿದ್ದು, ಅವರು ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದ ಸಚಿವ ಸಂಪುಟದಲ್ಲಿ ಜಿಲ್ಲೆಯ ಯಾವ ಶಾಸಕನಿಗೆ ಸಚಿವ ಸ್ಥಾನ ನೀಡಿದರೂ ನನಗೆ ಸಂತೋಷವೇ. ಇಂಥವರಿಗೇ ನೀಡಬೇಕು ಎಂದು ನಾನು ಹೇಳಿಲ್ಲ. ಯಾರಿಗಾದರೂ ನೀಡಬೇಕು ಎಂದರು.

ಕಟ್ಟಡ ಅಕ್ರಮವಾಗಿ ಕಟ್ಟಿದರೆ ಕೆಲವನ್ನು ಸಕ್ರಮ ಮಾಡಲಾಗುತ್ತದೆ. ಸ್ವಂತ ಜಮೀನಲ್ಲಿ ಅನುಮತಿ ಪಡೆಯದೇ ಕಟ್ಟಿದ್ದರೆ ಅದು ಅಕ್ರಮ ಹೌದು. ಆದರೆ ಅದರೆ ಅವುಗಳನ್ನು ದಂಡ ಕಟ್ಟಿಸಿಕೊಂಡು ಸಕ್ರಮ ಮಾಡಲು ಅವಕಾಶ ಇದೆ. ಸರ್ಕಾರಿ ಜಾಗದಲ್ಲಿ ಕಟ್ಟಿದ್ದರೆ, ಸಕ್ರಮ ಮಾಡಲು ಬರುವುದಿಲ್ಲ. ಅವುಗಳನ್ನು ತೆರವುಗೊಳಿಸಬೇಕಾಗುತ್ತದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.