ADVERTISEMENT

ಐಸಿಎಂಆರ್ ಯುನಿಟ್‌ಗೆ ಚಾಲನೆ

ಆಸ್ಪತ್ರೆ ಬಗ್ಗೆ ವಿಶ್ವಾಸ ಮೂಡಿಸುವ ಕೆಲಸ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 14:39 IST
Last Updated 18 ಅಕ್ಟೋಬರ್ 2020, 14:39 IST
ದಾವಣಗೆರೆಯ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿನ ನೂತನ ಐಸಿಎಂಆರ್‌ ಘಟಕವನ್ನು (ಯುನಿಟ್) ಉದ್ಘಾಟಿಸಿದರು
ದಾವಣಗೆರೆಯ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿನ ನೂತನ ಐಸಿಎಂಆರ್‌ ಘಟಕವನ್ನು (ಯುನಿಟ್) ಉದ್ಘಾಟಿಸಿದರು   

ದಾವಣಗೆರೆ: ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ 12 ಬೆಡ್‌ಗಳ ಐಸಿಎಂಆರ್‌ ಘಟಕಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭಾನುವಾರ ಚಾಲನೆ ನೀಡಿದರು.

‘ವೆಂಟಿಲೇಟರ್‌ ಹಿಂದೆಯೇ ಬಂದಿತ್ತು. ಆದರೆ ಅದಕ್ಕೆ ಬೇಕಾದ ಮಾನವ ಸಂಪನ್ಮೂಲ ಇರಲಿಲ್ಲ. ನಾವು ಕೇಳಿದಷ್ಟು ಅಲ್ಲದೇ ಇದ್ದರೂ 13 ತಜ್ಞರನ್ನು ಸರ್ಕಾರ ನೀಡಿದೆ. ಜತೆಗೆ ನಮ್ಮ ವ್ಯಾಪ್ತಿಯ ಇತರ ಸರ್ಕಾರಿ ಆಸ್ಪತ್ರೆಗಳಲ್ಲಿರುವ ತಜ್ಞರನ್ನು ಕೂಡ ಬಳಕೆ ಮಾಡಿಕೊಂಡು ಕಾರ್ಯ ಆರಂಭಿಸಿದ್ದೇವೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಹಿಂದೆ 10 ಈಗ 12 ಒಟ್ಟು 22 ವೆಂಟಿಲೇಟರ್‌ಗಳು ಈಗ ಚಾಲನೆಯಲ್ಲಿವೆ. ಮತ್ತೆ 12 ವೆಂಟಿಲೇಟರ್‌ ಬೆಡ್‌ಗಳು ಕೂಡ ನಾಳೆಗೆ ತಯಾರಾಗುತ್ತವೆ. ಚಾಲನೆ ನೀಡಿರುವ 12 ಬೆಡ್‌ಗಳು ಹೇಗೆ ಕಾರ್ಯ ನಿರ್ಹಿಸುತ್ತವೆ ಎಂದು ನೋಡಿಕೊಂಡು ವಾರದ ನಂತರ ಉಳಿದ 12 ವೆಂಟಿಲೇಟರ್‌ಗಳನ್ನು ಬಳಸಲಾಗುವುದು ಎಂದು ತಿಳಿಸಿದರು.

ADVERTISEMENT

ಇಲ್ಲಿ ವೆಂಟಿಲೇಟರ್‌ಗಳಿರುವುದನ್ನು ನೋಡಿ ಖಾಸಗಿಯವರು ಬೇಡಿಕೆ ಇಟ್ಟಿದ್ದರು. ಕೆಲವು ಷರತ್ತುಗಳೊಂದಿಗೆ ಒಪ್ಪಂದ ಮಾಡಿಕೊಂಡು ನೀಡಲು ಸರ್ಕಾರ ಅನುಮತಿ ನೀಡಿತ್ತು. ಆದರೆ ಷರತ್ತುಗಳು ಸ್ವಲ್ಪ ಕಠಿಣ ಎಂದು ಖಾಸಗಿಯವರಿಗೆ ಕಂಡು ಬಂದಿದ್ದರಿಂದ ಅವರು ಉಪಯೋಗಿಸಲಿಲ್ಲ. ಈಗ ಎಲ್ಲವನ್ನೂ ಸರ್ಕಾರಿ ಆಸ್ಪತ್ರೆಯಲ್ಲಿಯೇ ಬಳಸುತ್ತಿದ್ದೇವೆ. ಇದರಿಂದ ಕೊರೊನಾ ಸಮರದಲ್ಲಿ ಆಸ್ಪತ್ತೆಗೆ ಮತ್ತಷ್ಟು ಬಲ ಬಂದಂತಾಗಿದೆ. ಆಸ್ಪತ್ರೆಯ ಬಗ್ಗೆ ಜನರಲ್ಲಿ ಇನ್ನಷ್ಟು ವಿಶ್ವಾಸ ಉಂಟಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಸರ್ಜನ್‌ ಡಾ. ಜಯಪ್ರಕಾಶ್‌, ಅರಿವಳಿಕೆ ತಜ್ಞ ಡಾ. ಸಂಜಯ್, ಶೂಶ್ರೂಷಕಾಧಿಕಾರಿ ಆಶಾ ಕಾಂಬ್ಳೆ, ಡಾ. ಮಂಜುನಾಥ್ ಪಾಟೀಲ್,ಜೆಜೆಎಂನ ಡಾ. ರವಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.