ADVERTISEMENT

ಸರ್ಕಾರಿ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ: ಮಲ್ಲಿಕಾರ್ಜುನ್‌ ವಿರುದ್ಧ ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 12:45 IST
Last Updated 14 ಜನವರಿ 2026, 12:45 IST
   

ದಾವಣಗೆರೆ: ತಾಲ್ಲೂಕಿನ ಕಾಡಜ್ಜಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರಕ್ಕೆ ಸೇರಿದ ಜಮೀನಿನಲ್ಲಿ ಗಣಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅಕ್ರಮ ಮಣ್ಣು ಗಣಿಗಾರಿಕೆ ನಡೆಸಿದ್ದಾರೆ. ರಾಜಧನ ಪಾವತಿಸದೇ ಆನೆಕೊಂಡದ ತಮ್ಮ ಭೂಮಿಗೆ ಮಣ್ಣು ಹಾಕಿಕೊಂಡಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್‌ ಆರೋಪಿಸಿದರು.

‘ಆನೆಕೊಂಡದ ಕಲ್ಲೇಶ್ವರ ಮಿಲ್‌ ಸಮೀಪ ನಡೆದ ಶಾಮನೂರು ಶಿವಶಂಕರಪ್ಪ ನುಡಿನಮನ ಸಮಾರಂಭದ ಸ್ಥಳಕ್ಕೆ ಮಣ್ಣು ರವಾನೆಯಾಗಿದೆ. ಸರ್ಕಾರಿ ಅಧಿಕಾರಿಗಳೇ ಮುಂದೆ ನಿಂತು ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದು ಈಗಲೂ ಮುಂದುವರಿಯುತ್ತಿದೆ. ನಿತ್ಯ ನೂರಾರು ಲಾರಿಗಳು ಮಣ್ಣು ಸಾಗಣೆ ಮಾಡುತ್ತಿವೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಕಾಡಜ್ಜಿಯಲ್ಲಿ 283 ಎಕರೆ ಭೂಮಿ ಕೃಷಿ ಇಲಾಖೆ ವ್ಯಾಪ್ತಿಯಲ್ಲಿದೆ. ಇದರಲ್ಲಿ ತೊಗರಿ ಸೇರಿ ಇತರ ಬೆಳೆ ಬೆಳೆಯಲಾಗಿದೆ. ಈ ಜಮೀನು ಮಧ್ಯಭಾಗದಲ್ಲಿ 33 ಎಕರೆಯನ್ನು ಕೆರೆ ನಿರ್ಮಾಣಕ್ಕೆ ಮೀಸಲಿಡಲಾಗಿದೆ. ಇಲ್ಲಿಂದ ಮಣ್ಣು ಸಾಗಣೆ ಅಕ್ರಮವಾಗಿ ನಡೆಯುತ್ತಿದೆ. ಗಣಿ ಮತ್ತು ಭೂವಿಜ್ಞಾನ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ತಾರೇಶ್ ನಾಯ್ಕ, ಮುಖಂಡರಾದ ಹಾಲೇಶ್ ನಾಯ್ಕ, ಡಿ.ವಿ. ಜಯರುದ್ರಪ್ಪ ಹಾಜರಿದ್ದರು.

ಬಾತಿ ಗುಡ್ಡವನ್ನು ಈಗಾಗಲೇ ಕರಗಿಸಲಾಗಿದೆ. ಕಾಡಜ್ಜಿಯ ಸರ್ಕಾರಿ ಜಮೀನಿನಲ್ಲಿ ಮಣ್ಣು ತೆಗೆಯಲಾಗುತ್ತಿದೆ. ಜಿಲ್ಲಾಡಳಿತ ಸಚಿವರ ಮನೆ ಅಡಿಯಾಳಾಗಿ ಕೆಲಸ ಮಾಡುತ್ತಿದೆ
ಲೋಕಿಕೆರೆ ನಾಗರಾಜ್‌, ಉಪಾಧ್ಯಕ್ಷ ರಾಜ್ಯ ಬಿಜೆಪಿ ರೈತ ಮೋರ್ಚಾ
ಅಕ್ರಮ ಮಣ್ಣು ಗಣಿಗಾರಿಕೆ ತಡೆಯಬೇಕಿದ್ದ ಸಚಿವ ಮಲ್ಲಿಕಾರ್ಜುನ್‌ ಜವಾಬ್ದಾರಿ ಮರೆತು ವರ್ತಿಸುತ್ತಿದ್ದಾರೆ. ಸಚಿವ ಸ್ಥಾನದಲ್ಲಿ ಮುಂದುವರಿಯಲು ಅನರ್ಹರಾಗಿದ್ದು, ರಾಜೀನಾಮೆ ನೀಡಬೇಕು
ಕೊಳೇನಹಳ್ಳಿ ಬಿ.ಎಂ.ಸತೀಶ್, ವಕ್ತಾರ ಬಿಜೆಪಿ ಜಿಲ್ಲಾ ಘಟಕ

ಸ್ವಪಕ್ಷದ ಶಾಸಕರ ವಿರುದ್ಧ ಕಿಡಿ

ಅಕ್ರಮ ಮಣ್ಣು ಗಣಿಗಾರಿಕೆಯನ್ನು ಎರಡು ದಿನಗಳ ಹಿಂದೆಯೇ ವಿರೋಧಿಸಿದ ಹರಿಹರ ಶಾಸಕ ಬಿ.ಪಿ. ಹರೀಶ್‌ ವಿರುದ್ಧ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಶಾಸಕ ಬಿ.ಪಿ. ಹರೀಶ್‌ ಅವರು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಟಿಕೆಟ್ ಮೇಲೆ ಕಣ್ಣಿಟ್ಟುಕೊಂಡು ಅಕ್ರಮ ಮಣ್ಣು ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ್ದಾರೆ. ಅವರಿಗೆ ಅಕ್ರಮ ತಡೆಯುವ ಬದ್ಧತೆ ಇದ್ದರೆ ಹರಿಹರದ ತುಂಗಭದ್ರಾ ನದಿ ತೀರದಲ್ಲಿ ನಡೆಯುವ ಅಕ್ರಮ ಮರಳು ಸಾಗಣೆ ವಿರುದ್ಧ ಮಾತನಾಡಲಿ’ ಎಂದು ಹರಿಹಾಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.