ADVERTISEMENT

ಹರಪನಹಳ್ಳಿ: ಅನೈತಿಕ ಸಂಬಂಧ; ಇಬ್ಬರು ಕೊಲೆ ಆರೋಪಿಗಳ ಸೆರೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 3:58 IST
Last Updated 29 ಮಾರ್ಚ್ 2021, 3:58 IST
ಸಂತೋಷ್
ಸಂತೋಷ್   

ಹರಪನಹಳ್ಳಿ: 35 ದಿನಗಳ ಹಿಂದೆ ಕಾಣೆಯಾಗಿದ್ದ ಆಟೊ ಚಾಲಕ ಸಂತೋಷ್‌ (19) ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಆರೋಪಿಗಳು ಸಂತೋಷನ ಕೊಲೆಗೈದು ಅರಣ್ಯದಲ್ಲಿ ಬಿಸಾಡಿದ್ದರು. 12ನೇ ವಾರ್ಡ್ ಗುಡೆಕಟ್ಟಿಕೇರಿ ಆಟೊ ಚಾಲಕರಾದ ದುರುಗೇಶ್ (25), ಕಾರ್ತಿಕ್ (21) ಬಂಧಿತ ಆರೋಪಿಗಳು.

ಘಟನೆ ವಿವರ: ದುರಗೇಶನ ಅಕ್ಕನ ಮಗಳಾದ ಕೊಟ್ಟೂರಿನ ಆಶಾಳನ್ನು ಸಂತೋಷ್ 2019ರಿಂದ ಪ್ರೀತಿಸುತ್ತಿದ್ದ. ಈ ಸಂಬಂಧ ಇಬ್ಬರ ನಡುವೆ ಜಗಳವಾಗಿತ್ತು. ಹಿರಿಯರು ಇಬ್ಬರಿಗೂ ಜಗಳ ಆಡದಂತೆ ಬುದ್ಧಿಮಾತು ಹೇಳಿದ್ದರು. ನಂತರ ದುರುಗೇಶ್ ಆಶಾಳನ್ನು ವಿವಾಹವಾಗಿದ್ದನು. ಮದುವೆ ಬಳಿಕವೂ ಸಂತೋಷ್, ಆಶಾಳೊಂದಿಗೆ ಫೋನ್‌ ಮೂಲಕ ಸಂಪರ್ಕದಲ್ಲಿರುವ ವಿಚಾರ ದುರುಗೇಶ್‌ಗೆ ಗೊತ್ತಾಗಿದೆ. ಇದರಿಂದ ಕೋಪಗೊಂಡ ದುರುಗೇಶ್‌, ಪ್ರಕರಣದ 2ನೇ ಆರೋಪಿ ಕಾರ್ತಿಕ್ ಸಹಾಯ ಪಡೆದು ಸಂತೋಷ್‌ನನ್ನು ಕಳೆದ ಫೆಬ್ರುವರಿ 26ರ ರಾತ್ರಿ 11.30ಕ್ಕೆ ಹಡಗಲಿ ರಸ್ತೆ ಕೆಇಬಿ ಪಕ್ಕದ ನೀರಿನ ಟ್ಯಾಂಕ್ ಬಳಿ ಕರೆದುಕೊಂಡು ಹೋಗಿ, ಹೊಡೆದು ಸಾಯಿಸಿ ಹಡಗಲಿ ತಾಲ್ಲೂಕಿನ ಕುಮಾರನಹಳ್ಳಿ ತಾಂಡಾ ಬಳಿ ಇರುವ ಅರಣ್ಯದಲ್ಲಿ ಬೀಸಾಡಿ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಈ ವಿಷಯವನ್ನು ಇಬ್ಬರೂ ಆರೋಪಿಗಳು ಸ್ನೇಹಿತರಾದ ರಾಘವೇಂದ್ರ ಮತ್ತು ಮಧುಸೂದನ್ ಅವರ ಬಳಿ ಹಂಚಿಕೊಂಡಿದ್ದರಿಂದ ವಿಷಯ ಬೆಳಕಿಗೆ ಬಂದಿದೆ. ಸಂತೋಷ್ ಕಾಣೆಯಾಗಿದ್ದ ಬಗ್ಗೆ ಮಾರ್ಚ್‌ 3ರಂದು ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.