ಹೊನ್ನಾಳಿ: ತಾಲ್ಲೂಕಿನ ಕುಂದೂರು ಗುಡ್ಡದಿಂದ ಎಂಟತ್ತು ದಿನಗಳಿಂದ ಹಗಲು ಮತ್ತು ರಾತ್ರಿ ಎನ್ನದೆ ನಿರಂತರವಾಗಿ ಮಣ್ಣು ಅಕ್ರಮ ಸಾಗಣಿ ಮಾಡಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಕುಂದೂರು ಪ್ರಸನ್ನಕುಮಾರ್ ದೂರಿದರು.
‘ಕುಂದೂರು ಕೆರೆ ಸರ್ವೆ ನಡೆಯುತ್ತಿರುವ ಸಂದರ್ಭದಲ್ಲಿ ನಾನು, ಗ್ರಾಮಲೆಕ್ಕಾಧಿಕಾರಿ, ರಾಜಸ್ವ ನಿರೀಕ್ಷಕರು ಹಾಗೂ ಪಿಡಿಒ ಅವರು ಅಲ್ಲಿಯೇ ನಿಂತುಕೊಂಡಿದ್ದೆವು. ಬೆಳಿಗ್ಗೆ 11.30ರ ಸಮಯದಲ್ಲಿ ಮಣ್ಣು ತುಂಬಿದ 4 ಲಾರಿಗಳು ಹಾದು ಹೋದವು. ತಕ್ಷಣವೇ ಗ್ರಾಮಲೆಕ್ಕಾಧಿಕಾರಿ, ರಾಜಸ್ವ ನಿರೀಕ್ಷಕರು ಲಾರಿಗಳನ್ನು ತಡೆ ಹಿಡಿದು ಕೂಲಂಬಿ ಉಪ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದರು. ಅದೇ ದಿನ ಸಂಜೆ ಬಂದು ನೋಡಿದರೆ ಪೊಲೀಸ್ ಠಾಣೆ ಮುಂದೆ ಯಾವ ಲಾರಿಗಳೂ ಇರಲಿಲ್ಲ. ಕಾರಣ ಕೇಳಿದಾಗ ದಂಡ ಕಟ್ಟಿಸಿಕೊಂಡು ಲಾರಿಗಳನ್ನು ಬಿಟ್ಟಿದ್ದಾಗಿ ಗ್ರಾಮಲೆಕ್ಕಾಧಿಕಾರಿ, ರಾಜಸ್ವ ನಿರೀಕ್ಷಕರು ಹೇಳಿದರು. ಆದರೆ, ದಂಡ ಕಟ್ಟಿಸಿಕೊಂಡಿಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು
ಗ್ರಾಮಲೆಕ್ಕಾಧಿಕಾರಿ, ರಾಜಸ್ವ ನಿರೀಕ್ಷಕರನ್ನು ಕೂಡಲೇ ಅಮಾನತು ಮಾಡಬೇಕು. ಮಣ್ಣು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವವರ ಮೇಲೆ ಕ್ರಿಮಿನಲ್ ದೂರು ದಾಖಲಿಸಬೇಕು. ಭಾಗಿಯಾದವರ ಮೇಲೂ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.
ಕುಂದೂರು ಸರ್ವೆ ನಂ.33ರಲ್ಲಿ ತಿಪ್ಪೇಶಪ್ಪ 1.30 ಎಕರೆ ಅವರಿಗೆ ಬಗರ್‌ಹುಕುಂ ಜಮೀನು ಮಂಜೂರಾಗಿತ್ತು. ಕೃಷಿ ಮಾಡುವ ಉದ್ದೇಶದಿಂದ ಮಣ್ಣು ಸಾಗಾಣಿಕೆ ಮಾಡಲು ಗಣಿ ಮತ್ತು ವಿಜ್ಞಾನ ಇಲಾಖೆ ಮೊರೆ ಹೋಗಿದ್ದರು. ಆದರೆ, ಮಣ್ಣು ಸಾಗಾಣಿಕೆಗೆ ರಾಯಲ್ಟಿ ಕಟ್ಟಿಲ್ಲ, ಟ್ರಕ್‍ಶೀಟ್ ಜನರೇಟ್ ಮಾಡದಿರುವುದಕ್ಕೆ ₹ 20.70 ಲಕ್ಷ ದಂಡ ಹಾಕಲಾಗಿದೆ. ಇ ಪೇಮೆಂಟ್ ಮೂಲಕ ದಂಡ ಪಾವತಿಸಿದ್ದಾರೆ ಎನ್ನಲಾಗಿದೆ. ಆದರೆ, ಅವರು ಕಟ್ಟಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ರಶ್ಮೀ ಹೇಳಿದ್ದಾರೆ.
ಮೂರು ಅಡಿಗಿಂತ ಹೆಚ್ಚು ಮಣ್ಣು ತೆಗೆದರೆ ಅದಕ್ಕೆ ಅನುಮತಿ ಪಡೆದುಕೊಳ್ಳಬೇಕು ಎಂದು ಅವರು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.