
ದಾವಣಗೆರೆ: ಜಾತಿ, ಧರ್ಮ, ಲಿಂಗ ಬೇಧವಿಲ್ಲದೇ ಸರ್ವರಿಗೂ ಅನ್ವಯವಾಗುವಂತಹ ಸಂವಿಧಾನವು ದೇಶದ ಪವಿತ್ರ ಗ್ರಂಥ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಅಭಿಪ್ರಾಯಪಟ್ಟರು.
ಇಲ್ಲಿನ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬುಧವಾರ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸಂವಿಧಾನವು ಮಹಿಳೆಯರಿಗೆ ಸಮಾನತೆ ಕಲ್ಪಿಸಿತು. ಪುರುಷರಷ್ಟೇ ಸಮಾನವಾಗಿ ಏಳಿಗೆ ಹೊಂದಲು ಅವಕಾಶ ಮಾಡಿಕೊಟ್ಟಿತು. ಸಂವಿಧಾನ ರಚನೆಯಲ್ಲಿಯೂ ಅನೇಕ ಮಹಿಳೆಯರ ಶ್ರಮವಿದೆ’ ಎಂದು ಅವರು ಹೇಳಿದರು.
‘ನ.26ನ್ನು ಸಂವಿಧಾನ ದಿನವನ್ನಾಗಿ 2015ರಲ್ಲಿ ಘೋಷಣೆ ಮಾಡಲಾಯಿತು. ಅಂದಿನಿಂದ ಸಂವಿಧಾನ ಸಮಾರ್ಪಣೆಯ ಈ ದಿನವನ್ನು ಆಚರಿಸಲಾಗುತ್ತಿದೆ. ಸಂವಿಧಾನಕ್ಕೆ ದೇಶದಲ್ಲಿ ಸರ್ವೋಚ್ಛ ಸ್ಥಾನವಿದೆ’ ಎಂದರು.
‘ರಾಷ್ಟ್ರದ ಏಕತೆ, ಸಮಗ್ರತೆ, ವ್ಯಕ್ತಿ ಗೌರವ ಹಾಗೂ ಸಾಮಾಜಿಕ ಶಾಂತಿಯನ್ನು ಸಂವಿಧಾನ ಕಾಪಾಡುತ್ತಿದೆ. ಆರ್ಥಿಕ, ರಾಜಕೀಯ, ಸಾಮಾಜಿಕ ಸಮಾನತೆಯನ್ನು ಪ್ರತಿಯೊಬ್ಬರಿಗೂ ಕಲ್ಪಿಸಿದೆ. ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಅರಿತುಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಸಂವಿಧಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಸಂವಿಧಾನ ದಿನಾಚರಣೆಯ ಮುಖ್ಯ ಉದ್ದೇಶ. ಅಂಬೇಡ್ಕರ್ ಕೊಡುಗೆ, ಜೀವನವನ್ನು ಪ್ರತಿಯೊಬ್ಬರೂ ಅರಿಯಬೇಕಿದೆ. ಸಂವಿಧಾನವನ್ನು ಸಂಪೂರ್ಣವಾಗಿ ಕೈಬರಹದಲ್ಲಿ ರಚಿಸಲಾಗಿದೆ. ಇದನ್ನು ಈಗಲೂ ಸಂರಕ್ಷಿಸಿ ಇಡಲಾಗಿದೆ’ ಎಂದು ಎವಿಕೆ ಕಾಲೇಜು ಉಪನ್ಯಾಸಕ ರಣಧೀರ್ ಹೇಳಿದರು.
‘ಭಾರತದ ಸಂವಿಧಾನ ವಿಶ್ವದಲ್ಲಿಯೇ ಅತಿದೊಡ್ಡದು. ಜಗತ್ತಿನ ಹಲವು ಸಂವಿಧಾನದ ಅಂಶಗಳನ್ನು ಎರವಲು ಪಡೆದು ಭಾರತದ ನೆಲಕ್ಕೆ ಅನ್ವಯವಾಗುವಂತೆ ರಚಿಸಲಾಗಿದೆ. ಸಂವಿಧಾನ ಕಾದಂಬರಿ ಅಥವಾ ಕವಿತೆಯಲ್ಲ. ದೇಶದ ಹಲವು ಸಮಸ್ಯೆಗಳಿಗೆ ಈ ಗ್ರಂಥ ಪರಿಹಾರ ನೀಡಿದೆ’ ಎಂದರು.
ಸಂವಿಧಾನ ದಿನಾಚರಣೆ ಅಂಗವಾಗಿ ನಗರದಲ್ಲಿ ಜಾಗೃತಿ ಜಾಥ ನಡೆಯಿತು. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಆರಂಭವಾದ ಮೆರವಣಿಗೆ ಹೈಸ್ಕೂಲ್ ಮೈದಾನದಲ್ಲಿ ಮುಕ್ತಾಯಗೊಂಡಿತು. ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ ಸಂವಿಧಾನ ಪೀಠಿಕೆಯನ್ನು ಓದಿದರು.
ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ಆಹಾರ ಇಲಾಖೆಯ ಜಂಟಿ ನಿರ್ದೇಶಕರಾದ ಮಧುಸೂದನ್, ಡಿಡಿಪಿಐ ಜಿ.ಕೊಟ್ರೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.