ದಾವಣಗೆರೆ: ಜಿಲ್ಲೆಯಲ್ಲಿ ಕೈಗಾರಿಕೆಗಳು ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಕಾಣದಿದ್ದರೂ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಮಾತ್ರ ಸರ್ಕಾರ ಕೈಬಿಟ್ಟಿಲ್ಲ. ಭೂಸ್ವಾಧೀನಕ್ಕೆ ರೈತರ ವಿರೋಧ ವ್ಯಕ್ತವಾಗಿದ್ದರಿಂದ ‘ಕೈಗಾರಿಕಾ ಕಾರಿಡಾರ್’ ನಿರ್ಮಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರೂ, ಯೋಜನೆಯಿಂದ ಸರ್ಕಾರ ಹಿಂದೆ ಸರಿದಿಲ್ಲ.
‘ಕೈಗಾರಿಕಾ ಕಾರಿಡಾರ್’ ನಿರ್ಮಾಣಕ್ಕೆ ದಾವಣಗೆರೆ ತಾಲ್ಲೂಕಿನ ಮೆಳ್ಳೆಕಟ್ಟೆ, ಅಣಜಿ, ಲಿಂಗಾಪುರ ಸೇರಿದಂತೆ ಹಲವು ಗ್ರಾಮಗಳ 1,156 ಎಕರೆ ಭೂಸ್ವಾಧೀನಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) 2022ರ ಫೆಬ್ರುವರಿಯಲ್ಲಿ ಅಧಿಸೂಚನೆ ಹೊರಡಿಸಿತ್ತು. ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ ಕುರಿತು ಕೆಐಎಡಿಬಿ ಸರ್ಕಾರಕ್ಕೆ ವರದಿ ಸಲ್ಲಿಸಿ ವರ್ಷಗಳೇ ಕಳೆದರೂ ಸೂಕ್ತ ನಿರ್ಧಾರ ಹೊರಬಿದ್ದಿಲ್ಲ. ಇದರಿಂದ ಈ ಗ್ರಾಮಗಳ ರೈತರ ಭೂ ಪರಭಾರೆಗೆ ಸಮಸ್ಯೆ ಉಂಟಾಗಿದೆ.
ದಾವಣಗೆರೆ ಹಾಗೂ ಹರಿಹರ ತಾಲ್ಲೂಕುಗಳಲ್ಲಿ ಕೆಐಎಡಿಬಿ ಈಗಾಗಲೇ 7 ಕೈಗಾರಿಕಾ ಪ್ರದೇಶ ಹಾಗೂ 4 ಕೈಗಾರಿಕಾ ವಸಾಹತುಗೆ 1,000 ಎಕರೆಗೂ ಹೆಚ್ಚು ಭೂಮಿಯನ್ನು ಸ್ವಾಧೀನ ಮಾಡಿಕೊಂಡಿದೆ. ಇದರಲ್ಲಿ ಅರ್ಧದಷ್ಟು ಭೂಮಿಯನ್ನು ಮಾತ್ರ ಕೈಗಾರಿಕೋದ್ಯಮಿಗಳಿಗೆ ಹಸ್ತಾಂತರಿಸಿದೆ. ಹಂಚಿಕೆಯಾಗದ ಭೂಮಿಯೇ ಸಾಕಷ್ಟು ಇರುವಾಗ ‘ಕೈಗಾರಿಕಾ ಕಾರಿಡಾರ್’ ನಿರ್ಮಾಣಕ್ಕೆ ಮತ್ತೆ ಭೂಸ್ವಾಧೀನಕ್ಕೆ ಮುಂದಾಗಿರುವುದು ಸಹಜವಾಗಿಯೇ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
‘ಭೂಸ್ವಾಧೀನಕ್ಕೆ ಒಂದಷ್ಟು ರೈತರು ಒಲವು ತೋರಿದ್ದರು. ವಿರೋಧ ವ್ಯಕ್ತಪಡಿಸಿದ ರೈತರ ಸಂಖ್ಯೆ ಹೆಚ್ಚಾಗಿದ್ದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಸರ್ಕಾರದ ಅಭಿಪ್ರಾಯಕ್ಕೆ ವರ್ಷಗಳಿಂದ ಕಾಯುತ್ತಿದ್ದೇವೆ. ಈವರೆಗೆ ಯಾವುದೇ ನಿರ್ಧಾರ ಕೇಂದ್ರ ಕಚೇರಿಯಿಂದ ಬಂದಿಲ್ಲ’ ಎಂದು ಕೆಐಎಡಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏಕಾಏಕಿ ಭೂಸ್ವಾಧೀನಕ್ಕೆ ಅಧಿಸೂಚನೆ ಪ್ರಕಟಿಸಿದ್ದರಿಂದ 357 ರೈತರ ಪಹಣಿಯ ಕಾಲಂ 11ರಲ್ಲಿ ‘ಕೈಗಾರಿಕಾ ಪ್ರದೇಶ ಅಭಿವೃದ್ಧಿ’ ಎಂಬ ಉಲ್ಲೇಖವಿದೆ. ಇದರಿಂದ ನಿಗದಿತ ಕೃಷಿ ಭೂಮಿಯ ಪರಭಾರೆಗೆ ಅವಕಾಶ ಇಲ್ಲವಾಗಿದೆ. ಪಾಲು ವಿಭಾಗ ಮಾಡಿಕೊಂಡ ಆಸ್ತಿಯ ನೋಂದಣಿಗೂ ತೊಂದರೆ ಉಂಟಾಗುತ್ತಿದೆ. ಸರ್ಕಾರ ಡಿನೋಟಿಫಿಕೇಷನ್ ಮಾಡದ ಹೊರತು ಪಹಣಿಯ ಕಾಲಂ 11ರಲ್ಲಿನ ಉಲ್ಲೇಖವನ್ನು ತೆಗೆದುಹಾಕಲು ಸಾಧ್ಯವಿಲ್ಲ.
ಈ ಭಾಗದಲ್ಲಿ ಪ್ರತಿ ಎಕರೆ ಭೂಮಿಗೆ ₹ 50 ಲಕ್ಷಕ್ಕೂ ಅಧಿಕ ಬೆಲೆ ಇದೆ. ಮಾರುಕಟ್ಟೆಗಿಂತ ಹೆಚ್ಚುವರಿ ಬೆಲೆ ನೀಡಿದರೆ ಸ್ವಾಧೀನಕ್ಕೆ ಒಪ್ಪಿಗೆ ನೀಡಲು ಕೆಲ ರೈತರು ಸಿದ್ಧರಿದ್ದಾರೆ. ಭೂಮಿಯನ್ನೇ ನಂಬಿ ಬದುಕು ಕಟ್ಟಿಕೊಂಡ ಬಹುತೇಕ ರೈತರು ಇದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ. ಭೂಸ್ವಾಧೀನಕ್ಕೆ ಹೊರಡಿಸಿದ ಅಧಿಸೂಚನೆಯ ಪ್ರಕಾರ ಮೆಳ್ಳೆಕಟ್ಟೆಯ ಶೇ 70ರಷ್ಟು ರೈತರು ಭೂಮಿ ಕಳೆದುಕೊಳ್ಳುವ ಆತಂಕದಲ್ಲಿಯೇ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.
ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆಗೆ ಸ್ವಾಧೀನಪಡಿಸಿಕೊಳ್ಳಲು ಬಿಡುವುದಿಲ್ಲ. ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದರೆ ಮತ್ತೆ ಹೋರಾಟ ಮುಂದುವರಿಯಲಿದೆಎಸ್.ಕೆ. ಚಂದ್ರಶೇಖರ್ ರೈತ ಮುಖಂಡ ಅಣಜಿ
ಸ್ವಾಧೀನಕ್ಕೆ ಗುರುತಿಸಿದ ಭೂಮಿಯ ಪರಭಾರೆಗೆ ಅವಕಾಶ ಇಲ್ಲವಾಗಿದೆ. ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ಸರ್ಕಾರ ಕೂಡಲೇ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕುಜಿ.ಎಂ. ನಾಗೇಂದ್ರ ರೈತ ಮೆಳ್ಳೆಕಟ್ಟೆ
‘ಭೂಮಿಯೇ ಬಂಡವಾಳವಾಗಲಿ’
‘ಕೈಗಾರಿಕೆಗಳ ಹೆಸರಿನಲ್ಲಿ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಸರಿಯಲ್ಲ. ಭೂಮಿಯನ್ನೇ ಬಂಡವಾಳವಾಗಿ ಪರಿಗಣಿಸಿ ಕೈಗಾರಿಕೆ ಅಭಿವೃದ್ಧಿಪಡಿಸುವ ಪರಿಕಲ್ಪನೆ ಮುನ್ನೆಲೆಗೆ ಬರುವ ಅಗತ್ಯವಿದೆ’ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ. ‘ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಸ್ವಾಧೀನಪಡಿಸಿಕೊಂಡ ಭೂಮಿಗೂ ಸೃಷ್ಟಿಯಾದ ಉದ್ಯೋಗಕ್ಕೂ ಅಜಗಜಾಂತರವಿದೆ. ಕೃಷಿ ಭೂಮಿ ಕಳೆದುಕೊಂಡ ರೈತರು ಬೀದಿಗೆ ಬಿದ್ದಿದ್ದಾರೆ. ಕೈಗಾರಿಕಾ ಪ್ರದೇಶದಲ್ಲಿ ನಿವೇಶನ ಪಡೆದವರು ಶೆಡ್ ಹಾಕಿ ಕಾಲಹರಣ ಮಾಡಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದೊಂದು ರೀತಿಯ ಸ್ಟ್ಯಾಂಡರ್ಡ್ ರಿಯಲ್ ಎಸ್ಟೇಟ್ ಸ್ವರೂಪ ಪಡೆದಿದೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.