ADVERTISEMENT

ಫೈನಲ್‌ನಲ್ಲಿ ವೀನಸ್‌–ಕ್ಯಾಪ್ಟನ್ಸ್‌ ಪೈಪೋಟಿ

ಕೆಎಸ್‌ಸಿಎ 19 ವರ್ಷದೊಳಗಿನವರ ಅಂತರ ಕ್ಲಬ್‌ ಕ್ರಿಕೆಟ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 17:17 IST
Last Updated 2 ಜೂನ್ 2023, 17:17 IST
ಶುಭಂ ಕುಮಾರ್‌ 
ಶುಭಂ ಕುಮಾರ್‌    

ದಾವಣಗೆರೆ: ಇಲ್ಲಿನ ವೀನಸ್‌ ಕ್ರಿಕೆಟ್‌ ಕ್ಲಬ್‌ ಹಾಗೂ ಬಳ್ಳಾರಿಯ ಕ್ಯಾಪ್ಟನ್ಸ್‌ ಇಲೆವನ್‌ ತಂಡಗಳು ಕೆಎಸ್‌ಸಿಎ ತುಮಕೂರು ವಲಯದ 19 ವರ್ಷದೊಳಗಿನವರ ಅಂತರ ಕ್ಲಬ್‌ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿವೆ.

ಜೆ.ಎಚ್‌. ಪಟೇಲ್‌ ಬಡಾವಣೆಯಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ‍ಪಂದ್ಯದಲ್ಲಿ ಉಭಯ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. 

ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್‌ ಹಣಾಹಣಿಯಲ್ಲಿ ವೀನಸ್‌ ಕ್ಲಬ್‌ 158 ರನ್‌ಗಳಿಂದ ಬಳ್ಳಾರಿಯ ಅರಿಸ್ಟ್ರೋಕ್ರಾಟ್‌ ಕ್ರಿಕೆಟ್‌ ಕ್ಲಬ್‌ ವಿರುದ್ಧ ಜಯಭೇರಿ ಮೊಳಗಿಸಿತು.

ADVERTISEMENT

ಮೊದಲು ಬ್ಯಾಟಿಂಗ್‌ ಮಾಡಿದ ವೀನಸ್‌ ಕ್ಲಬ್‌ ತಂಡದ ಎ.ಎ.ರೋಹಿತ್‌ (56) ಮತ್ತು ನಿಗಂ ಎಸ್‌.ಇಟಗಿ (ಔಟಾಗದೆ 75) ಅವರ ಅರ್ಧಶತಕದ ಬಲದಿಂದ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 250ರನ್‌ ಗಳಿಸಿತು. ಎಚ್‌.ಜೆ.ಸಾಯಿದೀಪ್‌ (44) ಕೂಡ ಗಮನ ಸೆಳೆದರು.

ಸವಾಲಿನ ಗುರಿ ಬೆನ್ನಟ್ಟಿದ ಅರಿಸ್ಟ್ರೋಕ್ರಾಟ್‌ ಕ್ಲಬ್‌ ತಂಡ ಆರ್‌.ಸುಪ್ರೀತ್‌ (8ಕ್ಕೆ3) ಹಾಗೂ ಎ.ಎ.ರೋಹಿತ್‌ (9ಕ್ಕೆ2) ಅವರ ದಾಳಿಗೆ ತತ್ತರಿಸಿತು. ಈ ತಂಡವು 92 ರನ್‌ಗಳಿಗೆ ಆಲೌಟ್‌ ಆಯಿತು.

ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ನಾಲ್ಕರ ಘಟ್ಟದ ಮತ್ತೊಂದು ಹೋರಾಟದಲ್ಲಿ ಬಳ್ಳಾರಿಯ ಕ್ಯಾಪ್ಟನ್ಸ್‌ ಇಲೆವನ್‌ ತಂಡವು ದಾವಣಗೆರೆ ಕ್ರಿಕೆಟ್‌ ಕ್ಲಬ್‌ ವಿರುದ್ಧ 312ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಮೊದಲು ಬ್ಯಾಟ್‌ ಮಾಡಿದ ಕ್ಯಾಪ್ಟನ್ಸ್‌ ಇಲೆವನ್‌ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 412ರನ್‌ಗಳನ್ನು ಕಲೆಹಾಕಿತು. ಈ ತಂಡದ ಲಕ್ಷ್ಮಿಸಾಗರ್‌ (104) ಹಾಗೂ ಶುಭಂ ಕುಮಾರ್‌ (ಔಟಾಗದೆ 101) ಅಮೋಘ ಶತಕ ಸಿಡಿಸಿ ಸಂಭ್ರಮಿಸಿದರು.

ಬೃಹತ್‌ ಗುರಿ ಬೆನ್ನಟ್ಟಿದ ದಾವಣಗೆರೆ ಕ್ಲಬ್‌ ತಂಡ 100 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಎಚ್‌.ಎಂ.ಅಭಿಷೇಕ್‌ (67) ಮಾತ್ರ ಎದುರಾಳಿ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಕ್ಯಾಪ್ಟನ್ಸ್‌ ಇಲೆವನ್‌ ತಂಡದ ಶಿವಂ 4 ವಿಕೆಟ್‌ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್‌: ವೀನಸ್‌ ಕ್ರಿಕೆಟ್‌ ಕ್ಲಬ್‌; 50 ಓವರ್‌ಗಳಲ್ಲಿ 7 ವಿಕೆಟ್‌ಗೆ 250 (ಎ.ಎ.ರೋಹಿತ್‌ 56, ನಿಗಂ ಎಸ್‌.ಇಟಗಿ ಔಟಾಗದೆ 75; ಫೈಜಾನ್‌ ಖಾನ್‌ 36ಕ್ಕೆ3).

ಅರಿಸ್ಟ್ರೋಕ್ರಾಟ್‌ ಕ್ರಿಕೆಟ್‌ ಕ್ಲಬ್‌: 26 ಓವರ್‌ಗಳಲ್ಲಿ 92 (ಎಲ್‌.ರೋಹಿತ್ 38, ಜೆ.ಅಮನ್‌ 20; ಆರ್‌.ಸುಪ್ರಿತ್‌ 8ಕ್ಕೆ3, ಎಸ್‌.ನಿಗಂ 13ಕ್ಕೆ2, ಎ.ಎ.ರೋಹಿತ್‌ 9ಕ್ಕೆ2). ಫಲಿತಾಂಶ: ವೀನಸ್‌ ಕ್ಲಬ್‌ಗೆ 158ರನ್‌ಗಳ ಗೆಲುವು.

ಕ್ಯಾಪ್ಟನ್ಸ್‌ ಇಲೆವನ್‌: 50 ಓವರ್‌ಗಳಲ್ಲಿ 3 ವಿಕೆಟ್‌ಗೆ 412 (ಲಕ್ಷ್ಮಿ ಸಾಗರ್‌ 104, ಶುಭಂ ಕುಮಾರ್‌ ಔಟಾಗದೆ 101, ಮಹೇಂದರ್‌ 77, ತಿಪ್ಪೇಶ್‌ 80). ದಾವಣಗೆರೆ ಕ್ರಿಕೆಟ್‌ ಕ್ಲಬ್‌: 22.5 ಓವರ್‌ಗಳಲ್ಲಿ 100 (ಎಚ್‌.ಎಂ.ಅಭಿಷೇಕ್‌ 67; ಶಿವಂ 8ಕ್ಕೆ4). ಫಲಿತಾಂಶ: ಕ್ಯಾಪ್ಟನ್ಸ್‌ ತಂಡಕ್ಕೆ 312ರನ್‌ಗಳ ಗೆಲುವು.

ಲಕ್ಷ್ಮಿ ಸಾಗರ್‌ 
ನಿಗಂ ಎಸ್. ಇಟಗಿ 
ರೋಹಿತ್‌ ಎ.ಎ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.