ADVERTISEMENT

ದಾವಣಗೆರೆ | 'ಒಳ ಮೀಸಲಾತಿಯಿಂದ ನಿಜವಾದ ಸ್ವಾತಂತ್ರ್ಯ'

ಮಾದಿಗ ದಂಡೋರ ಜಿಲ್ಲಾ ಘಟಕದಿಂದ ಕಾರ್ಯಕ್ರಮ; ಶಾಸಕ ಕೆ.ಎಸ್.ಬಸವಂತಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 6:37 IST
Last Updated 8 ಸೆಪ್ಟೆಂಬರ್ 2025, 6:37 IST
   

ದಾವಣಗೆರೆ: ಒಳ ಮೀಸಲಾತಿ ಜಾರಿಯಿಂದ ಮಾದಿಗ ಸಮುದಾಯಕ್ಕೆ ನಿಜವಾದ ಸ್ವಾತಂತ್ರ್ಯ ಲಭಿಸಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅಭಿಪ್ರಾಯಪಟ್ಟರು. 

ಇಲ್ಲಿನ ರೋಟರಿ ಬಾಲಭವನದಲ್ಲಿ ಮಾದಿಗ ದಂಡೋರ ಜಿಲ್ಲಾ ಘಟಕದಿಂದ ಭಾನುವಾರ ಆಯೋಜಿಸಿದ್ದ ಒಳಮೀಸಲಾತಿ ಹೋರಾಟ ಮಾಡಿದವರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 

35 ವರ್ಷಗಳ ಇತಿಹಾಸದಲ್ಲಿ ಹಲವು ಸರ್ಕಾರಗಳು ಬಂದು ಹೋಗಿದ್ದರೂ ಸಮುದಾಯದ ಬೇಡಿಕೆ ಈಡೇರಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ ಮೀಸಲಾತಿ ಜಾರಿಗೊಳಿಸಲು ದಿಟ್ಟ ನಿರ್ಧಾರ ತೆಗೆದುಕೊಂಡರು. ಅವರು ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದಾರೆ ಎಂದರು. 

ADVERTISEMENT

ಆಂಧ್ರಪ್ರದೇಶದ ಮಂದಕೃಷ್ಣ ಮಾದಿಗ ಅವರು ಒಳಮೀಸಲಾತಿ ಹೋರಾಟದ ಮೂಲ ಪುರುಷರಾಗಿದ್ದಾರೆ. ಸಮುದಾಯದ ಒಳಿತಿಗಾಗಿ ಹೋರಾಡಿದ ನಾಯಕರನ್ನು ಸ್ಮರಿಸಬೇಕಿದೆ. ಬೇರೆ ಯಾವ ಸಮುದಾಯವೂ ಮಾಡದಷ್ಟು ಹೋರಾಟವನ್ನು ಮಾದಿಗ ಸಮುದಾಯ ಮಾಡಿದೆ. ನಾಗಮೋಹನ ದಾಸ್ ಆಯೋಗದ ವರದಿಯನ್ನೂ ಕೆಲವು ಸಮುದಾಯಗಳು ವಿರೋಧಿಸಿದವು. ವಿರೋಧವು ಆರೋಗ್ಯಕರವಾಗಿರಬೇಕು ಎಂದು ಹೇಳಿದರು. 

ಒಳ ಮೀಸಲಾತಿ ಜಾರಿ ವಿಷಯದಲ್ಲಿ ಅಸಮಾಧಾನ ಹೊಂದಿರುವ ಸಹೋದರ ಸಮುದಾಯಗಳು ಅವಲೋಕನ ಮಾಡಿಕೊಳ್ಳಬೇಕು. ಅನ್ಯಾಯವಾಗಿದ್ದರೆ, ರಾಜ್ಯಮಟ್ಟದ ಸಭೆ ಕರೆದು ಎಲ್ಲಾ ಹೋರಾಟಗಾರರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು. 

ಮಾದಿಗರು ಹೋರಾಟ ಮಾಡಿ, ಬೇರೆಯವರು ಫಲ ಉಣ್ಣುವಂತಾಗಬಾರದು. ಹೋರಾಟದ ಫಲ ನಮಗೇ ಸಿಗಬೇಕು‌. ಹೋರಾಟಗಳು ಅರ್ಥಪೂರ್ಣವಾಗಿರಲಿ ಎಂದು ಸಲಹೆ ನೀಡಿದರು. 

ಮಾದಿಗ ದಂಡೋರ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಸಿ.ಗುಡ್ಡಪ್ಪ ಪ್ರಾಸ್ತಾವಿಕ ನುಡಿದರು. 

ಮೈಸೂರು ಮುಕ್ತ ವಿಶ್ವವಿದ್ಯಾಲಯದ ಕುಲಸಚಿವ (ಪರೀಕ್ಷಾಂಗ) ಎಚ್.ವಿಶ್ವನಾಥ್, ಪ್ರಮುಖರಾದ  ಕಾಶಪ್ಪ, ಹುಲುಗಪ್ಪ, ಹೆಗ್ಗೆರೆ ರಂಗಪ್ಪ, ತಾಲ್ಲೂಕು ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.